

ವಾಷಿಂಗ್ಟನ್: ತಾಂತ್ರಿಕವಾಗಿ ಸದಾ ಮುಂದಿರುವ ಅಮೆರಿಕವು ಸಾಲದ ಬೇಗೆಯಲ್ಲಿ ಬೇಯಲಾರಂಭಿಸಿದೆ. ಅಮೆರಿಕದ ಸಾಲದ ಮೊತ್ತ ದಿನೇದಿನೆ ಹೆಚ್ಚುತ್ತಿರುವುದಾಗಿ ದೇಶದ ಶಾಸನ ಸಭೆಯ ಪ್ರಮುಖ ಸದಸ್ಯರೊಬ್ಬರು ಎಚ್ಚರಿಕೆ ನೀಡಿದ್ದಾರೆ.
ಶಾಸನ ಸಭೆಯ ಸದಸ್ಯ ಅಲೆಕ್ಸ್ ಮೂನಿ ಅಮೆರಿಕದ ಸಾಲದ ವಿವರವನ್ನು ಬಿಚ್ಚಿಟ್ಟಿದ್ದಾರೆ. ಅನೇಕ ರಾಷ್ಟ್ರಗಳಿಂದ ಅಮೆರಿಕ ಸುಮಾರು 23.4 ಟ್ರಿಲಿಯನ್ ಡಾಲರ್ ಸಾಲ ಪಡೆದಿದೆ. ಭಾರತದಿಂದಲೂ ಸುಮಾರು 15 ಲಕ್ಷ ಕೋಟಿ ರೂಪಾಯಿ (216 ಬಿಲಿಯನ್ ಡಾಲರ್) ಸಾಲ ಪಡೆದಿದ್ದು, ತೀರಿಸುವುದು ಬಾಕಿಯಿದೆ. ಚೀನಾದಿಂದಲೇ ಹೆಚ್ಚಿನ ಸಾಲ ಪಡೆದಿರುವುದಾಗಿ ಹೇಳಲಾಗಿದೆ. 2000ರಲ್ಲಿ ಅಮೆರಿಕದ ರಾಷ್ಟ್ರೀಯ ಸಾಲ 5.6 ಟ್ರಿಲಿಯನ್ ಡಾಲರ್ ಆಗಿತ್ತು. ಆದರೆ ಅದಾದ ನಂತರ ಸಾಲದ ಮೊತ್ತದಲ್ಲಿ ಭಾರೀ ಏರಿಕೆ ಕಂಡುಬಂದಿದೆ.
ದೇಶದಲ್ಲಿ ಸಾಲದ ನಿಯಂತ್ರಣ ಸಂಪೂರ್ಣವಾಗಿ ಹದಗೆಟ್ಟಿದೆ. ಇದೇ ರೀತಿ ಮುಂದೆ ಸಾಗಿದರೆ 2050ರ ಒಳಗೆ ದೇಶದ ರಾಷ್ಟ್ರೀಯ ಸಾಲ 104 ಟ್ರಿಲಿಯನ್ ಡಾಲರ್ಗಿಂತ ಹೆಚ್ಚಾಗಿರಲಿದೆ ಎಂದು ಅವರು ಹೇಳಿದ್ದಾರೆ.
ಸದ್ಯದ ದೇಶದ ಪ್ರತಿ ನಾಗರಿಕನ ಮೇಲೆ ಸಾಲ ಹಂಚಿಕೆ ಮಾಡಿದರೆ ಪ್ರತಿಯೊಬ್ಬನ ಮೇಲೂ 53 ಲಕ್ಷ ರೂಪಾಯಿ (72,309 ಡಾಲರ್) ಸಾಲ ಬಿದ್ದಂತಾಗುತ್ತದೆ. ಕಳೆದ ವರ್ಷ ಅಂದರೆ 2020ರಲ್ಲಿ ತೆಗೆದುಕೊಂಡ ಸಾಲವನ್ನೇ ಪ್ರತಿ ನಾಗರಿಕನಿಗೆ ಹಂಚಿಕೆ ಮಾಡಿದರೆ ಪ್ರತಿಯೊಬ್ಬ ನಾಗರಿಕನ ಮೇಲಿನ ಸಾಲ 7.35 ಲಕ್ಷ ರೂಪಾಯಿ(10000 ಡಾಲರ್)ಯಷ್ಟಾಗುತ್ತದೆ. ದೇಶವು ಈ ಪ್ರಮಾಣದಲ್ಲಿ ಸಾಲ ಪಡೆಯುತ್ತಿದೆ ಆದರೆ ಆ ಎಲ್ಲ ಹಣ ಎಲ್ಲಿಗೆ ಹೋಗುತ್ತಿದೆ ಎನ್ನುವುದರ ಬಗ್ಗೆ ಸುಳ್ಳು ಮಾಹಿತಿಗಳನ್ನು ನೀಡಲಾಗುತ್ತಿದೆ ಎಂದು ಅಲೆಕ್ಸ್ ಅವರು ಆರೋಪಿಸಿದ್ದಾರೆ. (ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ