

ಬೆಂಗಳೂರು: ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಗೆಜೆಟೆಡ್ ಪ್ರೊಬೆಷನರಿ ಹುದ್ದೆ ನೇಮಕ ನಿಯಮ ತಿದ್ದುಪಡಿಗೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಗೆಜೆಟೆಡ್ ಎ ಮತ್ತು ಬಿ ಶ್ರೇಣಿ ಹುದ್ದೆಗಳಿಗೆ ನೇಮಕಗೊಂಡು ನೇಮಕಾತಿ ಆದೇಶ ಪತ್ರ ಪಡೆಯದೇ ಬಾಕಿ ಉಳಿಯುವ ಹುದ್ದೆಗಳನ್ನು ತರುವಾಯದ ನೇಮಕ ಸಂದರ್ಭದಲ್ಲಿ ಸೇರ್ಪಡೆ ಮಾಡಿಕೊಳ್ಳುವ ತಿದ್ದುಪಡಿಗೆ ಸಂಪುಟ ಸಭೆ ಸಮ್ಮತಿ ನೀಡಿದೆ.
ಕರ್ನಾಟಕ ಗೆಜೆಟೆಡ್ ಪೊ›ಬೇಷನರುಗಳ ಎ ಮತ್ತು ಬಿ ಗ್ರೂಪ್ ಹುದ್ದೆಗಳಿಗೆ ಆಯ್ಕೆಯಾಗಿ ನೇಮಕಾತಿ ಆದೇಶ ಪಡೆದ ಅಭ್ಯರ್ಥಿಗಳು ಕರ್ತವ್ಯಕ್ಕೆ ಹಾಜರಾಗದೆ ಹುದ್ದೆಗಳು ಖಾಲಿ ಉಳಿದರೆ ಅವುಗಳನ್ನು ಹೊಸದಾಗಿ ಖಾಲಿ ಉಳಿದವು ಎಂದು ಪರಿಗಣಿಸುವ ನಿಯಮಕ್ಕೆ ತಿದ್ದುಪಡಿ ತರಲು ಕಡತ ಸಚಿವ ಸಂಪುಟದ ಮುಂದೆ ಮಂಡನೆಯಾಗಿತ್ತು. ಈ ತಿದ್ದುಪಡಿಗೆ ಸಂಪುಟ ಸಮ್ಮತಿಸಿದೆ. ಕರ್ನಾಟಕ ಗೆಜೆಟೆಡ್ ಪೊ›ಬೆಷನರುಗಳ ನೇಮಕಾತಿ ನಿಯಮಗಳು, 1997 ನಿಯಮಕ್ಕೆ 11ಕ್ಕೆ ತಿದ್ದುಪಡಿ ಮಾಡಲು ಸಂಪುಟ ಒಪ್ಪಿಗೆ ನೀಡಿದೆ.
ಗೊಂದಲಕ್ಕೆ ಪರಿಹಾರ: ಗೆಜೆಟೆಡ್ ಪೊ›ಬೇಶನರ್ಸ್ ಪರೀಕ್ಷೆ ಪ್ರಕ್ರಿಯೆ ಮುಗಿದ ನಂತರ ಗ್ರೂಪ್ ಎ ಮತ್ತು ಗ್ರೂಪ್ ಬಿ ಹುದ್ದೆಗಳಿಗೆ ಆಯ್ಕೆಯಾದ ಕೆಲವು ಅಭ್ಯರ್ಥಿಗಳು ಕಾರಣಾಂತರಗಳಿಂದ ತಾವು ಆಯ್ಕೆಯಾದ ಹುದ್ದೆಗೆ ವರದಿ ಮಾಡಿಕೊಳ್ಳುತ್ತಿರಲಿಲ್ಲ. ಆದ್ದರಿಂದ, ಅದೇ ನೇಮಕಾತಿಯಲ್ಲಿ ಬೇರೆ ಹುದ್ದೆಗೆ ಆಯ್ಕೆಯಾದ ಅಥವಾ ಆಯ್ಕೆ ಪಟ್ಟಿಯಲ್ಲಿ ಸ್ಥಾನ ಪಡೆಯದೆ ಇರುವ ಇತರೆ ಅಭ್ಯರ್ಥಿಗಳು ವರದಿ ಮಾಡಿಕೊಳ್ಳದೇ ಇರುವ ಅಭ್ಯರ್ಥಿಗಳ ಹುದ್ದೆಗೆ ತಮ್ಮನ್ನು ಪರಿಗಣಿಸಬೇಕೆಂದು ನ್ಯಾಯಾಲಯಕ್ಕೆ ಮೊರೆ ಹೋಗುತ್ತಿದ್ದರು. ವರದಿ ಮಾಡಿಕೊಂಡಿರದೇ ಇರುವ ರಿಕ್ತ ಸ್ಥಾನಗಳಿಗೆ ಅಂತಹವರನ್ನು ಪರಿಗಣಿಸಿದರೆ, ಇಡೀ ಆಯ್ಕೆ ಪಟ್ಟಿಯೇ ಬದಲಾಗುವ ಸಾಧ್ಯತೆ ಇತ್ತು. ಇದರಿಂದ ನೇಮಕದಲ್ಲಿ ಗೊಂದಲ ಸೃಷ್ಟಿಯಾಗುತ್ತಿತ್ತು. ಜತೆಗೆ ನ್ಯಾಯಾಲಯದ ಮೆಟ್ಟಿಲು ಕೂಡ ಏರಿ ಸಮಸ್ಯೆ ಸೃಷ್ಟಿಯಾಗುತ್ತಿತ್ತು. ಆದ್ದರಿಂದ ಅಂತಹ ಖಾಲಿ ಉಳಿಯುವ ಹುದ್ದೆಗಳನ್ನು ತರುವಾಯದ ನೇಮಕದಲ್ಲಿ ಸೇರ್ಪಡೆಗೊಳಿಸಲು ಕರ್ನಾಟಕ ಗೆಜೆಟೆಡ್ ಪ್ರೊಬೆಷನರ್ಗಳ ನೇಮಕಾತಿ ನಿಯಮ ತಿದ್ದುಪಡಿಗೆ ಸಭೆ ಅನುಮೋದನೆ ನೀಡಿದೆ ಎಂದು ಮೂಲಗಳು ಹೇಳಿವೆ.
ರವಿಕುಮಾರ್ಗೆ ಬೀಳ್ಕೊಡುಗೆ: ರಾಜ್ಯ ಸಚಿವ ಸಂಪುಟ ಸಭೆಗೂ ಮುನ್ನ ಮೇ 31 ರಂದು ನಿವೃತ್ತರಾಗಲಿರುವ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಅವರನ್ನು ಸಿಎಂ ಬಸವರಾಜ ಬೊಮ್ಮಾಯಿ ಸನ್ಮಾನಿಸಿ ಆತ್ಮೀಯವಾಗಿ ಬೀಳ್ಕೊಟ್ಟರು. ನಿಯೋಜಿತ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು.
ನದಿ ಜೋಡಣೆಗೆ ವಿರೋಧ: ಮೇಕೆದಾಟು ಕುಡಿಯುವ ನೀರು ಯೋಜನೆಗೆ ಅನುಮೋದನೆ ಹಾಗೂ ಕಣಿವೆ ರಾಜ್ಯಗಳ ನ್ಯಾಯಸಮ್ಮತ ಪಾಲನ್ನು ನಿರ್ಧರಿಸುವವರೆಗೆ ಗೋದಾವರಿ- ಕೃಷ್ಣಾ-ಪೆನ್ನಾರ್-ಕಾವೇರಿ-ವೈಗೈ-ಗುಂಡಾರ ನದಿ ಜೋಡಣೆ ಯೋಜನೆಯ ಡಿಪಿಆರ್ ಅನ್ನು ಅನುಮೋದಿಸದಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸುವ ಕುರಿತು ಕರ್ನಾಟಕ ವಿಧಾನ ಮಂಡಲದ ಉಭಯ ಸದನಗಳಲ್ಲಿ ಅಧಿಕೃತ ನಿರ್ಣಯವನ್ನು ಮಂಡಿಸಿರುವ ಕ್ರಮಕ್ಕೆ ಘಟನೋತ್ತರ ಅನುಮೋದನೆ.
ಆಕ್ಷೇಪಣೆಗೂ ಆಹ್ವಾನ: ಈ ತಿದ್ದುಪಡಿಗೆ ಸಂಬಂಧಿಸಿದಂತೆ 15 ದಿನಗಳ ಒಳಗೆ ಆಕ್ಷೇಪಣೆ ಆಹ್ವಾನಿಸಲು ನಿರ್ಧರಿಸಲಾಗಿದೆ. ಅಷ್ಟರೊಳಗೆ ಯಾವುದೇ ಆಕ್ಷೇಪಣೆ, ಸಲಹೆಗಳು ಸ್ವೀಕೃತವಾಗದೇ ಇದ್ದರೆ, ಪುನಃ ಸಂಪುಟದ ಅನುಮೋದನೆಗೆ ಮಂಡಿಸದೇ ಅಂತಿಮವಾಗಿ ಪ್ರಕಟಿಸಲು ತೀರ್ವನಿಸಲಾಗಿದೆ ಎಂದು ಹೇಳಲಾಗಿದೆ.