ಅಂಬೇಡ್ಕರ್ ಸೈದ್ಧಾಂತಿಕ ನೆಲೆಗಟ್ಟು ಬುದ್ಧ-ಬಸವ ತತ್ವದ ಮೇಲೆ ರೂಪಿತ

Published on

ಹೊಳೆನರಸೀಪುರ: ಅಂಬೇಡ್ಕರ್ ಅವರ ಸೈದ್ಧಾಂತಿಕ ನೆಲಗಟ್ಟು ಬುದ್ಧ, ಬಸವ ತತ್ವದ ಆಧಾರದ ಮೇಲೆಯೇ ರೂಪಿತವಾಗಿದೆ. ಹಾಗಾಗಿ ಸಮಾನತೆಯ ಪರಿಕಲ್ಪನೆ ಸಾರಿದ ದಾರ್ಶನಿಕ ಮನೋಭಾವ ಉಳ್ಳವರನ್ನು ಅಂಬೇಡ್ಕರ್ ಗೌರವಿಸುತ್ತಿದ್ದರು ಎಂದು ಮೈಸೂರಿನ ಉರಿಲಿಂಗಿ ಪೆದ್ದಿಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ತಿಳಿಸಿದರು.

ತಾಲೂಕಿನ ಹಿರೇಬೆಳಗಲಿ ಗ್ರಾಮದಲ್ಲಿ ಭಾನುವಾರ ಡಾ.ಬಿ.ಆರ್.ಅಂಬೇಡ್ಕರ್ ಕಂಚಿನ ಪ್ರತಿಮೆ ಅನಾವಣಗೊಳಿಸಿ ಮಾತನಾಡಿದ ಅವರು, ಇಂದಿನ ಎಲ್ಲ ಮೀಸಲಾತಿಯಿಂದ ಹುದ್ದೆಗಳು, ಉದ್ಯೋಗಗಳು, ಸ್ತ್ರೀ ಸಮಾನತೆ ಎಲ್ಲವನ್ನೂ ಸಂವಿಧಾನಾತ್ಮಕವಾಗಿ ಜಾರಿಗೆ ತಂದವರು 12ನೇ ಶತಮಾನದಲ್ಲಿ ಬಸವೇಶ್ವರರು. ಅನುಭವ ಮಂಟಪದಲ್ಲಿ ಮಾದಾರ ಚನ್ನಯ್ಯ, ಆಲಕ್ಕಿ ಲಕ್ಕಮ್ಮ ಅವರಿಗೆ ದೀಕ್ಷೆ ಕೊಡುವ ಮೂಲಕ ಸರ್ವಧರ್ಮ ಸಮಾನತೆಯನ್ನು ಸಾರಿದ್ದರು. ಲಂಡನ್ನಿನ ತೇಮ್ಸ್ ನದಿಯ ತಟದಲ್ಲಿ ಬಸವಣ್ಣನ ಪ್ರತಿಮೆ ಪ್ರತಿಷ್ಠಾಪಿಸಿದ್ದಾರೆ. ಇದು ಸಮಾನತೆಯನ್ನು ವಿಶ್ವಕ್ಕೆ ಕೊಡುಗೆಯಾಗಿ ನೀಡಿದ್ದಾರೆಂಬುದಕ್ಕೆ ಒಂದು ನಿದರ್ಶನ ಎಂದು ಹೇಳಿದರು.

ವಿಶ್ವದಲ್ಲೇ ಅತಿಹೆಚ್ಚು ಪುತ್ಥಳಿ ಸ್ಥಾಪನೆಯಾಗಿರುವುದು ಅಂಬೇಡ್ಕರ್ ಅವರದ್ದು. ಬಾಕ್ರಾನಂಗಲ್ ಕಾಲುವೆ ನಿರ್ಮಾಣದ ಸಂದರ್ಭದಲ್ಲಿ ಪ್ರವಾಹ ಎದುರಿಸಿದ ಕೂಲಿ ಕಾರ್ಮಿಕರು ಆಹಾರದ ಅಭಾವದಿಂದ ತತ್ತರಿಸಿದ್ದರು. ಅಂದು ಸರ್ಕಾರದಿಂದ ಪಡಿತರ ನೀಡುವಂತೆ ಪತ್ರ ಬರೆದಿದ್ದರು. ಹಾಗಾಗಿ ಇಂದಿನ ಪಡಿತರ ವಿತರಣೆ ಯೋಜನೆ ಯಾರೋ ನೀಡಿರಬಹದು. ಅಂದೇ ಅಂಬೇಡ್ಕರ್ ಅವರು ಪಡಿತರ ಬಡವರಿಗೆ ವಿತರಿಸಲು ಪತ್ರ ಬರೆಯುವ ಮೂಲಕ ಅಂತಹ ಕಲ್ಪನೆ ಹುಟ್ಟುಹಾಕಿದ್ದರು ಎಂದರು.

ಮಾಜಿ ಶಾಸಕ ಎಚ್.ಕೆ.ಕುಮಾರಸ್ವಾಮಿ ಮಾತನಾಡಿ, ಸ್ವಗ್ರಾಮದಲ್ಲಿ ಪ್ರತಿಮೆ ನೀಡಿದ ಸಣ್ಣ ಕೊಡಗೆ ನನಗೆ ಅತ್ಯಂತ ಹೆಮ್ಮೆ ಎನಿಸಿದೆ. ಕುಗ್ರಾಮವಾದರೂ ನನ್ನ ಗ್ರಾಮದಲ್ಲಿ ಅತ್ಯಂತ ಎತ್ತರಕ್ಕೆ ಬೆಳೆದ ಮಹನೀಯರಿದ್ದಾರೆ. ಈ ಗ್ರಾಮದಲ್ಲಿ ಉನ್ನತ ಅಧಿಕಾರಿಗಳು ಬೇರೆ ಬೇರೆ ಕಡೆಗಳಲ್ಲಿ ಕರ್ತವ್ಯ ನಿಭಾಯಿಸಿದ್ದಾರೆ. ರಾಜಕೀಯ ಕ್ಷೇತ್ರದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕೊಡಗೆ ಅಪಾರವಾಗಿದೆ. ಅವರ ಕುಟುಂಬದವರ ಪ್ರಯತ್ನದಿಂದ ನಾನು ರಾಜಕೀಯದಲ್ಲಿ ಅನೇಕ ಪದವಿಗಳನ್ನು ಅಲಂಕರಿಸಲು ಸಾಧ್ಯವಾಗಿದೆ ಎಂದು ಸ್ಮರಿಸಿದರು.

ನಿವೃತ್ತ ಉಪನ್ಯಾಸಕ ಎಚ್.ಎಸ್.ಪ್ರಭುಶಂಕರ್ ಮಾತನಾಡಿದರು. ಜಿಪಂ ಮಾಜಿ ಸದಸ್ಯೆ ಚಂದ್ರಕಲಾ ಕುಮಾರಸ್ವಾಮಿ, ಡಿವೈಎಸ್‌ಪಿ ಕುಲಕರ್ಣಿ, ಗ್ರಾಮದ ಮುಖಂಡ ರಾಮಯ್ಯ, ಗ್ರಾಪಂ ಅಧ್ಯಕ್ಷ ಎಚ್.ಡಿ.ಬೊಮ್ಮಯ್ಯ, ಎಚ್.ಎಸ್.ಹೇಮಂತ್, ಜಿಪಂ ಮಾಜಿ ಸದಸ್ಯ ಎಚ್.ವೈ.ಚಂದ್ರಶೇಖರ್, ಮುಖಂಡರಾದ ಹೇಮಂತ್, ಸೋಮಶೇಖರ್ ಹಾಗೂ ಮೋಹನ್ ಉಪಸ್ಥಿತರಿದ್ದರು.

ಅರಸೀಕೆರೆ ತಾಲೂಕಿನ ಹಿರೇಬೆಳಗಲಿ ಗ್ರಾಮದಲ್ಲಿ ಮಾಜಿ ಶಾಸಕ ಎಚ್.ಕೆ.ಕುಮಾರಸ್ವಾಮಿ ಮತ್ತು ಉರಿಲಿಂಗಿ ಪೆದ್ದಿಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಅವರು ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆ ಅನಾವರಣಗೊಳಿಸಿದರು. ಎಚ್.ಎಸ್.ಪ್ರಭುಶಂಕರ್, ಕುಲಕರ್ಣಿ, ಋಆಮಯ್ಯ, ಎಚ್.ಡಿ.ಬೊಮ್ಮಯ್ಯ, ಎಚ್.ಎಸ್.ಹೇಮಂತ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net