

ನವದೆಹಲಿ: ಮುಂಬೈನ ದಾದರ್ನಲ್ಲಿರುವ ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ರಾಜಗೃಹವನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ.
ಐತಿಹಾಸಿಕ ಮಹತ್ವವುಳ್ಳ ಈ ಕಟ್ಟಡಕ್ಕೆ ಮಂಗಳವಾರ ಸಂಜೆ ನುಗ್ಗಿದ್ದ ಇಬ್ಬರು ಅಪರಿಚಿತರು ಮೂರು ಮಹಡಿಗಳ ಕಟ್ಟಡದಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾಗಳು, ಕಿಟಕಿ ಗಾಜುಗಳು ಮತ್ತು ಹೂಕುಂಡಗಳನ್ನು ಧ್ವಂಸಗೊಳಿಸಿ ಪರಾರಿಯಾದರು ಎಂದು ಪೊಲೀಸರು ತಿಳಿಸಿದ್ದಾರೆ.
ವಿಷಯ ತಿಳಿಯುತ್ತಲೇ ಮಂಗಳವಾರ ರಾತ್ರಿಯೇ ನೂರಾರು ಜನ ದಲಿತರು ಅಂಬೇಡ್ಕರ್ ಅವರ ಮನೆಯ ಹೊರಗೆ ಜಮಾಯಿಸಿದ್ದರು. ಪರಿಸ್ಥಿತಿ ಬಿಗಡಾಯಿಸುವ ಸಾಧ್ಯತೆಯನ್ನು ಅರಿತ ರಾಜಕೀಯ ಮತ್ತು ದಲಿತ ಸಂಘಟನೆಗಳ ಹಿರಿಯ ಮುಖಂಡರು ಸ್ಥಳಕ್ಕೆ ಧಾವಿಸಿ, ಎಲ್ಲರನ್ನೂ ಸಮಾಧಾನಪಡಿಸಿದ್ದಾಗಿ ಹೇಳಿದ್ದಾರೆ.
ಘಟನೆಯನ್ನು ಖಂಡಿಸಿರುವ ಮಹಾರಾಷ್ಟ್ರದ ಗೃಹ ಸಚಿವ ಅನಿಲ್ ದೇಶಮುಖ್ ಘಟನೆಯ ಕುರಿತು ತನಿಖೆ ನಡೆಸಿ, ಆ ಇಬ್ಬರು ದುಷ್ಕರ್ಮಿಗಳನ್ನು ತಕ್ಷಣವೇ ಬಂಧಿಸುವಂತೆ ಸೂಚಿಸಿರುವುದಾಗಿ ತಿಳಿಸಿದ್ದಾರೆ.
ಡಾ. ಬಿ.ಆರ್. ಅಂಬೇಡ್ಕರ್ ಅವರು ರಾಜಗೃಹವನ್ನು ಪುಸ್ತಕಭಂಡಾರವಾಗಿ ಬಳಸುತ್ತಿದ್ದರು. ಸದ್ಯ ಇದನ್ನು ಅಂಬೇಡ್ಕರ್ ಅವರ ವಸ್ತುಸಂಗ್ರಹಾಲಯವನ್ನಾಗಿ ಪರಿವರ್ತಿಸಲಾಗಿದೆ. ಜತೆಗೆ ಇದು ಅಂಬೇಡ್ಕರ್ ಅವರ ಕುರಿತ ಸಂಶೋಧನಾ ಕೇಂದ್ರವಾಗಿಯೂ ಕಾರ್ಯನಿರ್ವಹಿಸುತ್ತಿದೆ.