

ಶಿವಮೊಗ್ಗ: ಅಂಬೇಡ್ಕರ್ ಒಂದು ಕಾಲಘಟ್ಟಕ್ಕೆ ಸೇರಿದವರಲ್ಲ. ಅವರ ಚಿಂತನೆಗಳು ಪದೇಪದೆ ಪ್ರಸ್ತುತವಾಗುತ್ತವೆ. ಸ್ವಾತಂತ್ರ ಬಳಿಕ ಪ್ರತಿದಿನ ಚರ್ಚೆಯಲ್ಲಿರುವವರ ನಾಯಕರೆಂದರೆ ಅದು ಮಹಾತ್ಮಾ ಗಾಂೀಜಿ ಹಾಗೂ ಅಂಬೇಡ್ಕರ್ ಎಂದು ಸಾಹಿತಿ ಬಂಜಗೆರೆ ಜಯಪ್ರಕಾಶ್ ಅಭಿಪ್ರಾಯಪಟ್ಟರು.
ಸಹ್ಯಾದ್ರಿ ವಿಜ್ಞಾನ ಕಾಲೇಜಿನಲ್ಲಿ ಮಂಗಳವಾರ ಏರ್ಪಡಿಸಿದ್ದ ಅಂಬೇಡ್ಕರ್ ಚಿಂತನೆಗಳು ಮತ್ತು ಯುವಜನತೆ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ವ್ಯಕ್ತಿ, ಧರ್ಮ, ವೃತ್ತಿ, ಆಹಾರ ಮತ್ತು ಎಲ್ಲವನ್ನೂ ಗೌರವಿಸುವ ಪ್ರವೃತ್ತಿಯನ್ನು ನಾವು ಬೆಳೆಸಿಕೊಳ್ಳಬೇಕಿದೆ ಎಂದರು.
ಸಮಾಜ ಮತ್ತು ಅಸಮಾನತೆ ಕುರಿತು ನಾವು ಪ್ರತಿದಿನ ಚರ್ಚೆ ಮಾಡುತ್ತೇವೆ. ಅದಕ್ಕೆ ಪೂರಕವಾದ ಅಂಶಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳುತ್ತಿಲ್ಲ. ನಮ್ಮ ನಡುವೆ ಈಗಲೂ ಸಾಮಾಜಿಕ, ರಾಜಕೀಯ, ಧಾರ್ಮಿಕ ಹಾಗೂ ಆರ್ಥಿಕ ಅಸಮಾನತೆಯಿದೆ. ಇದರಿಂದ ಪ್ರಜಾಪ್ರಭುತ್ವಕ್ಕೆ ಹಾನಿ ಉಂಟಾಗುತ್ತಿದೆ ಎಂದು ತಿಳಿಸಿದರು.
ಎಲ್ಲೆಡೆ ಅಸಹನೆ ತಂಡವಾಡುತ್ತಿದೆ. ಎಲ್ಲ ಧರ್ಮಗಳು ಸಹಬಾಳ್ವೆಯನ್ನೇ ಸಾರುತ್ತವೆ. ಆದರೆ ಅದನ್ನು ಯಾರೂ ಅನುಷ್ಠಾನಕ್ಕೆ ತರುತ್ತಿಲ್ಲ. ಸಮಾನತೆಯನ್ನು ಒಪ್ಪದವರು ಒಂದಲ್ಲಾ ಒಂದು ಘಟನೆಗಳಿಗೆ ಕಾರಣರಾಗುತ್ತಿದ್ದಾರೆ. ಇಂದು ರಾಜಕೀಯ ಸಮಾನತೆ ಬಗ್ಗೆ ಗಂಭೀರವಾಗಿ ಯೋಚಿಸಬೇಕು. ಚುನಾವಣೆ ವ್ಯವಸ್ಥೆಯನ್ನು ಸರಿಪಡಿಸದೇ ಇದ್ದರೆ ಪ್ರಜಾಪ್ರಭುತ್ವ ವ್ಯವಸ್ಥೆ ದಿಕ್ಕು ತಪ್ಪುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.
ಪ್ರಾಚಾರ್ಯೆ ಪ್ರೊ.ಎನ್.ರಾಜೇಶ್ವರಿ, ಕುವೆಂಪು ವಿವಿ ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ನೆಲ್ಲಿಕಟ್ಟೆ ಸಿದ್ದೇಶ್, ಪ್ರಮುಖರಾದ ಜಿ.ಕೃಷ್ಣಮೂರ್ತಿ, ಎಂ.ರಂಗಸ್ವಾಮಿ ಉಪಸ್ಥಿತರಿದ್ದರು. ಕುವೆಂಪು ವಿವಿ ಕುಲಸಚಿವ ಎ.ಎಲ್.ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು.