ಸಮಸಮಾಜ ಕಟ್ಟಬಯಸಿದ ದಾರ್ಶನಿಕ ಅಂಬೇಡ್ಕರ್

11 smg 14
Published on

ಶಿವಮೊಗ್ಗ: ಬುದ್ಧ-ಬಸವ-ಅಂಬೇಡ್ಕರ್ ಜಾತಿ-ಧರ್ಮಗಳಿಂದ ಮೀರಿದ ಬೆಳಕುಗಳು. ಜಗತ್ತಿನ ಮಹಾನ್ ದಾರ್ಶನಿಕರು. ಅದರಲ್ಲೂ ಅಂಬೇಡ್ಕರ್ ಅವರು ಸಮ ಸಮಾಜವನ್ನು ಕಟ್ಟಬಯಸಿದ್ದರು ಎಂದು ವೀರಾಪುರ ಹಿರೇಮಠದ ಡಾ. ಶ್ರೀ ಮರುಳಸಿದ್ಧ ಪಂಡಿತಾರಾಧ್ಯ ಶಿವಾಚಾರ್ಯರು ಅಭಿಪ್ರಾಯಪಟ್ಟರು.

ಕುವೆಂಪು ವಿಶ್ವವಿದ್ಯಾಲಯದ ಡಾ. ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರ ಮತ್ತು ವಿಶ್ವವಿದ್ಯಾಲಯ ಕಾಲೇಜಿನ ಸಹಯೋಗದಲ್ಲಿ ಶನಿವಾರ ಅಂಬೇಡ್ಕರ್ ಚಿಂತನ-ಮಂಥನ ವಿಶೇಷ ಉಪನ್ಯಾಸ ಮಾಲಿಕೆಯಲ್ಲಿ ಬುದ್ಧ-ಬಸವ-ಅಂಬೇಡ್ಕರ್ ಕಟ್ಟ ಬಯಸಿದ ಸಮಾಜ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಸಮಾಜದ ಎಲ್ಲ ವರ್ಗಗಳು ಶೋಷಣೆಗಳಿಂದ ಮುಕ್ತವಾಗಿ ಬದುಕಲು ಅರಿವು ಅಗತ್ಯ. ದಾರ್ಶನಿಕರಾಗಿದ್ದ ಬುದ್ಧ-ಬಸವ-ಅಂಬೇಡ್ಕರ್ ಸಮಾಜದ ಸಮಸ್ಯೆಗಳನ್ನು ನಿವಾರಿಸಲು ಆತ್ಮದ ಅರಿವು ದಿವ್ಯೌಷಧಿಯಾಗಿದೆಯೆಂದು ಸಾರಿದವರು. ಆ ಮೂಲಕ ಸಮಸಮಾಜವನ್ನು ಕಟ್ಟ ಬಯಸಿದವರು. ಶಿಕ್ಷಣ ಮತ್ತು ಸಂಸ್ಕಾರಗಳಿಂದ ವ್ಯಕ್ತಿ ಪರಿಪೂರ್ಣನಾಗುತ್ತಾನೆಂದು ಸಾರಿದರು. ಸಮಸಮಾಜದ ನಿರ್ಮಾಣಕ್ಕಾಗಿ ಸಂಪೂರ್ಣ ಸಮರ್ಪಿಸಿಕೊಂಡವರು. ಅವರ ಬದುಕು-ಚಿಂತನೆಗಳು ಸರ್ವಕಾಲಕ್ಕೂ ಅನುಕರಣೀಯ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕುಲಪತಿ ಪ್ರೊ. ಬಿ.ಪಿ.ವೀರಭದ್ರಪ್ಪ, ಬುದ್ಧ-ಬಸವ-ಅಂಬೇಡ್ಕರ್ ಅವರು ಸಾಮರಸ್ಯಭರಿತ ಸಮಾಜದ ನಿರ್ಮಾಣಕ್ಕಾಗಿ ಹೋರಾಡಿದವರು. ಅವರ ಚಿಂತನೆಗಳು ವ್ಯಕ್ತಿ-ಸಮಾಜದ ಅಂಕು ಡೊಂಕುಗಳನ್ನು ತಿದ್ದುವಂತಹವು. ಕುವೆಂಪು ವಿವಿಯಲ್ಲಿ ಬುದ್ಧ-ಬಸವ-ಅಂಬೇಡ್ಕರ್ ಅವರ ಚಿಂತನೆಗಳ ಕುರಿತ ಡಿಪ್ಲೊಮಾ ಪದವಿಯನ್ನು ಮುಂದಿನ ದಿನಗಳಲ್ಲಿ ಆರಂಭಿಸಲಾಗುವುದು ಎಂದರು.

ಕನಕಶ್ರೀ ಪ್ರಶಸ್ತಿ ಪುರಸ್ಕೃತ ಜಾನಪದ ಗಾಯಕ ಯುಗಧರ್ಮ ರಾಮಣ್ಣ, ಡಾ. ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ನೆಲ್ಲಿಕಟ್ಟೆ ಎಸ್.ಸಿದ್ದೇಶ್ ಮಾತನಾಡಿದರು. ಪ್ರಾಚಾರ್ಯ ಡಾ. ಎಚ್.ಎಂ.ಧರ್ಮೇಗೌಡ, ಡಾ.ವಸಂತಕುಮಾರ್, ಜಿ.ನಾಗರಾಜ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net