ದೇಶದ ಅಭಿವೃದ್ಧಿ ಚಿಂತನೆ ಮಾಡಿದ ಮಹಾನ್​ ನಾಯಕರು

oplus_2
oplus_2
Published on
ರಾಣೆಬೆನ್ನೂರ: ಡಾ. ಬಾಬು ಜಗಜೀವನರಾಮ್​ ಹಾಗೂ ಡಾ. ಬಿ.ಆರ್​. ಅಂಬೇಡ್ಕರ್​ ಅವರು ದೇಶದ ಅಭಿವೃದ್ಧಿ ಚಿಂತನೆ ಮಾಡಿ ತಮ್ಮದೆಯಾದ ಕೊಡುಗೆ ನೀಡಿದ್ದಾರೆ ಹೊರತು ಯಾವುದೆ ಒಂದು ಜಾತಿಗೆ ಸೀಮಿತವಾಗಿ ಕೆಲಸ ಮಾಡಿದವರಲ್ಲ ಎಂದು ನಗರಸಭೆ ಸದಸ್ಯ ಪುಟ್ಟಪ್ಪ ಮರಿಯಮ್ಮನವರ ಹೇಳಿದರು.

ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ, ನಗರಸಭೆ, ತಾಪಂ, ಸಮಾಜ ಕಲ್ಯಾಣ ಇಲಾಖೆ, ತಾಲೂಕು ಆಡಳಿತ, ದಲಿತ ಸಂಘರ್ಷ ಸಮಿತಿ ವತಿಯಿಂದ ನಗರದ ಉರ್ದು ಹೈಸ್ಕೂಲ್​ ಮೈದಾನದಲ್ಲಿ ಸೋಮವಾರ ಏರ್ಪಡಿಸಿದ್ದ ಡಾ. ಬಿ.ಆರ್​. ಅಂಬೇಡ್ಕರ್​ ಅವರ 134ನೇ ಹಾಗೂ ಡಾ. ಬಾಬು ಜಗಜೀವನರಾಮ್​ ಅವರ 118ನೇ ಜಯಂತಿ ಸಮಾರಂಭದಲ್ಲಿ ಅವರು ಮಾತನಾಡಿದರು. ಜಗಜೀವನರಾಮ್​ ಅವರು ಕೃಷಿ ಮೂಲಕ ಅಭಿವೃದ್ಧಿಗೊಳಿಸಿದರೆ, ಅಂಬೇಡ್ಕರ್​ ಅವರು ಸಂವಿಧಾನ ರಚನೆ ಮೂಲಕ ದೇಶದ ಪ್ರತಿಯೊಬ್ಬರಿಗೂ ಸಮಾನ ರೀತಿಯಲ್ಲಿ ಬದುಕುವ ಹಕ್ಕು ನೀಡಿದ್ದಾರೆ. ಅವರು ಯಾವುದೆ ಜಾತಿಗೆ ಸೀಮಿತವಾಗಿ ಕೆಲಸ ಮಾಡದಿದ್ದರೂ ಇಂದಿನ ಸಮಾಜದಲ್ಲಿ ಅವರ ಹೆಸರನ್ನು ತಮಗೆ ಬೇಕಾದ ರೀತಿಯಲ್ಲಿ ಬಳಸಿಕೊಳ್ಳುತ್ತಿರುವುದು ವಿಷಾಧಕರ ಸಂಗತಿ. ಆದರೆ, ಅವರ ಆದರ್ಶತತ್ವಗಳು ಎಂದಿಗೂ ಒಳ್ಳೆಯದನ್ನು ಮಾಡುವವರಿಗೆ ಮೀಸಲಿರಲಿವೆ ಎಂದರು. ನಗರಸಭೆ ಅಧ್ಯಕ್ಷೆ ಚಂಪಕ್ಕ ಬಿಸಲಹಳ್ಳಿ ಸಮಾರಂಭ ಉದ್ಘಾಟಿಸಿದರು. ಸರ್ಕಾರಿ ಪದವಿ ಮಹಾವಿದ್ಯಾಲಯದ ಡಾ. ವೆಂಕಟೇಶ ಎಚ್​. ಉಪನ್ಯಾಸ ನೀಡಿದರು. ಇದಕ್ಕೂ ಮುನ್ನ ಹರಳಯ್ಯ ನಗರದಿಂದ ಉರ್ದು ಹೈಸ್ಕೂಲ್​ ಮೈದಾನದವರೆಗೆ ಡಾ. ಬಿ.ಆರ್​. ಅಂಬೇಡ್ಕರ್​ ಮತ್ತು ಡಾ. ಬಾಬು ಜಗಜೀವನರಾಮ್​ ಅವರ ಭಾವಚಿತ್ರದ ಮೆರವಣಿಗೆ ಮಾಡಲಾಯಿತು. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಕಗಳಿಸಿದ ಸಮಾಜದ ವಿದ್ಯಾಥಿರ್ಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ನಗರಸಭೆ ಸದಸ್ಯ ಪ್ರಕಾಶ ಪೂಜಾರ, ಆಯುಕ್ತ ಫಕ್ಕೀರಪ್ಪ ಇಂಗಳಗಿ, ತಹಸೀಲ್ದಾರ್​ ಆರ್​.ಎಚ್​. ಭಾಗವಾನ್​, ಡಿವೈಎಸ್ಪಿ ಡಾ. ಗಿರೀಶ ಭೋಜಣ್ಣನವರ, ಸಿಪಿಐ ಡಾ. ಶಂಕರ, ಬಿಇಒ ಶ್ಯಾಮಸುಂದರ ಅಡಿಗ, ತಾಪಂ ಮಾಜಿ ಅಧ್ಯಕ್ಷ ನೀಲಕಂಠಪ್ಪ ಕೂಸಗೂರ, ಪ್ರಮುಖರಾದ ಮಂಜುನಾಥ ಓಲೇಕಾರ, ಹನುಮಂತಪ್ಪ ಕಬ್ಬಾರ, ಸಣ್ಣತಮ್ಮಪ್ಪ ಬಾಕಿರ್, ಮೈಲಪ್ಪ ದಾಸಪ್ಪನವರ, ಮೈಲಪ್ಪ ಗೋಣಿಬಸಮ್ಮನವರ ಹಾಗೂ ಸಮಾಜದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net