

ಶನಿವಾರಸಂತೆ: ಸಮೀಪದ ದೊಡ್ಡಕೊಡ್ಲಿ ಗ್ರಾಮದಲ್ಲಿ ನಿರ್ಮಿಸಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿ ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಅನಾವರಣಗೊಳಿಸಿದರು.
ಬಳಿಕ ಮಾತನಾಡಿ, ಅಂಬೇಡ್ಕರ್ ಆಶಯಗಳ ಪಾಲನೆಗೆ ದೊಡ್ಡ ಬದಲಾವಣೆಯ ಅಗತ್ಯ ಇದೆ. ಸಮಾಜದಲ್ಲಿ ಸಮಾನತೆ ತರಲು ಅವರು ನಿರಂತರವಾಗಿ ಶ್ರಮಿಸಿದರು. ವಿದೇಶದಲ್ಲಿ ಶಿಕ್ಷಣ ಪಡೆದರೂ ಸ್ವದೇಶಕ್ಕೆ ಬಂದು ಹೋರಾಡಿದರು ಎಂದು ಹೇಳಿದರು. ಅಂಬೇಡ್ಕರ್ ಅವರ ಆಶಯಗಳು ಇನ್ನೂ ಈಡೇರದೆ ಇರುವುದು ಬೇಸರದ ಸಂಗತಿ. ಆದರೆ ಅವರ ಪ್ರತಿಮೆಗಳ ನಿರ್ಮಾಣದಿಂದ ಅವರ ಆಶಯಗಳು ಜೀವಂತವಾಗಿರಬೇಕು. ಈ ನಿಟ್ಟಿನಲ್ಲಿ ಅವರು ಓದಿದಂತೆ ನೀವು ತಮ್ಮ ಮಕ್ಕಳನ್ನು ಓದಿಸಿ ವಿದ್ಯಾವಂತರನ್ನಾಗಿ ಮಾಡುವಂತೆ ಕಿವಿಮಾತು ಹೇಳಿದರು.
ಚನ್ನಪಟ್ಟಣದ ಅಂಬೇಡ್ಕರ್ ವಿಚಾರವಾದಿ ಜಯರಾಮ್ ಮಾತನಾಡಿ, ದೇಶದಲ್ಲಿ ಅಂಬೇಡ್ಕರ್ ಅವರಿಂದ ಪ್ರಜಾಪ್ರಭುತ್ವ ನಿರ್ಮಾಣವಾಗಿದೆ. ಇದರಿಂದ ನಮ್ಮ ದೇಶದಲ್ಲಿ ಪ್ರತಿಯೊಬ್ಬ ಪ್ರಜೆಗೂ ಮತದಾನದ ಹಕ್ಕು ಸಿಕ್ಕಿದೆ. ಇದರ ಕೀರ್ತಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ ಎಂದರು.
ಅಂಬೇಡ್ಕರ್ ಅವರ ಸಂವಿಧಾನದ ವ್ಯವಸ್ಥೆಯಿಂದ ಇಂದು ನಮ್ಮ ದೇಶ ವಿಶ್ವದ ಬಲಿಷ್ಠ ರಾಷ್ಟ್ರವಾಗಿದೆ. ಮುಂದಿನ ಪೀಳಿಗೆಯ ಮಕ್ಕಳಿಗೆ ಮಾದರಿ ಆಗಲಿ ಎಂಬುದು ಅಂಬೇಡ್ಕರ್ ಅವರ ಪುತ್ಥಳಿ ನಿರ್ಮಾಣದ ಉದ್ದೇಶವಾಗಿದೆ. ಇಂದಿನ ಯುವ ಜನಾಂಗ ಸಿನಿಮಾ ತಾರೆಯರು, ಕ್ರಿಕೆಟ್ ಪಟುಗಳಿಂತ ಅಂಬೇಡ್ಕರ್ ಅವರನ್ನು ರೋಲ್ ಮಾಡೆಲ್‌ಗಳಾಗಿ ಮಾಡಿಕೊಳ್ಳುವಂತೆ ಸಲಹೆ ನೀಡಿದರು.
ಪ್ರೊಬೇಷನರಿ ಎಎಸ್‌ಪಿ ಡಾ.ಬೆನಕ ಪ್ರಸಾದ್ ಮಾತನಾಡಿ, ಇಂದು ಮನುಷ್ಯರನ್ನು ನಾವು ಸಮಾನವಾಗಿ ಕಾಣುತ್ತಿರುವುದಕ್ಕೆ ಅಂಬೇಡ್ಕರ್ ಅವರ ಹೋರಾಟವೇ ಕಾರಣ. ಈ ನಿಟ್ಟಿನಲ್ಲಿ ಅಂಬೇಡ್ಕರ್ ಅವರು ಒಂದು ಜನಾಂಗಕ್ಕೆ ಸೀಮಿತಗೊಳಿಸಬಾರದು ಅವರು ಇಡೀ ಮನುಕುಲಕ್ಕೆ ಸೇರಿದವರಾಗಿದ್ದಾರೆ ಎಂದರು.
ಪುತ್ಥಳಿ ನಿರ್ಮಾಣ ಸಮಿತಿ ಕಾರ್ಯದರ್ಶಿ ಡಿ.ಎನ್.ವಸಂತ್, ಕೊಡ್ಲಿಪೇಟೆ ಗ್ರಾ.ಪಂ. ಸದಸ್ಯ ಡಿ.ಕೆ.ಪ್ರಸನ್ನ, ಸ್ಥಳೀಯರಾದ ಚಿನ್ನಪಟ್ಟಣ ಪ.ಪೂ.ಕಾಲೇಜಿನ ಪ್ರಾಂಶುಪಾಲ ಡಿ.ಸಿ.ಸುರೇಶ್, ಕೊಡ್ಲಿಪೇಟೆ ಗ್ರಾ.ಪಂ.ಅಧ್ಯಕ್ಷೆ ಅಪ್ಸರಾ ಬೇಗಂ, ಸದಸ್ಯ ಕೆ.ಆರ್.ಚಂದ್ರಶೇಖರ್, ಸದಸ್ಯರಾದ ಅಶ್ವಿನಿ ಮಂಜುನಾಥ್, ಗೀತಾ ತ್ಯಾಗರಾಜ್, ನಗೀನಾ ಬಾನು, ಸುನಂದಾ, ಹನೀಫ್ ಕಿರಿಕೊಡ್ಲಿ, ಪಿಡಿಒ ರಾಜೇಂದ್ರ, ಪ್ರಮುಖರಾದ ಜಗದೀಶ್, ಮಂಜುನಾಥ್, ಪಲ್ಲವಿ, ಡಿ.ಆರ್.ಜಗದೀಶ್ ಮುಂತಾದವರು ಇದ್ದರು.