ಬಡ್ಡಿ ಹಣದಲ್ಲೇ ಅಂಬೇಡ್ಕರ್ ನಿಗಮ ನಿರ್ವಹಣೆ; 4 ವರ್ಷದಲ್ಲಿ 400 ಕೋಟಿ ರೂ. ಬಡ್ಡಿ ಸಂಗ್ರಹ

Ambedkar
Published on

ಬೆಂಗಳೂರು: ಶೋಷಿತ ಸಮುದಾಯಗಳ ಸ್ವಾವಲಂಬಿ ಬದುಕಿಗೆ ನೆರವಾಗಲು ಉದ್ದೇಶಿತ ಅನುದಾನವು ದುಡಿದ ಬಡ್ಡಿ ಹಣದಿಂದಲೇ ನಿಗಮವೊಂದು ಆಡಳಿತ ವೆಚ್ಚ ನಿರ್ವಹಿಸಿರುವುದು ಬೆಳಕಿಗೆ ಬಂದಿದೆ. ವಿವಿಧ ಕಾರ್ಯಕ್ರಮಗಳಿಗೆ ಅನುದಾನ ಮಂಜೂರು, ಬಿಡುಗಡೆ, ಅನುಷ್ಠಾನ ಹಾಗೂ ಬಿಲ್ ಪಾವತಿ ಮಧ್ಯೆ ಸಾಕಷ್ಟು ಅಂತರವಿರುತ್ತದೆ. ಈ ಅವಧಿ ಸದ್ಬಳಕೆಗಾಗಿ ಲಭ್ಯ ಅನುದಾನವನ್ನು ಬ್ಯಾಂಕ್​ಗಳಲ್ಲಿ ಠೇವಣಿಯಿರಿಸಲಾಗುತ್ತದೆ.

ಸರ್ಕಾರದ ಸುತ್ತೋಲೆ ಪ್ರಕಾರವೇ ವಿವಿಧ ಇಲಾಖೆಗಳು ಮತ್ತು ಅಭಿವೃದ್ಧಿ ನಿಗಮಗಳು ರಾಷ್ಟ್ರೀಕೃತ ಅಥವಾ ಖಾಸಗಿ ಬ್ಯಾಂಕ್​ಗಳಲ್ಲಿ ಅನುದಾನವನ್ನು ಠೇವಣಿಯಾಗಿ ಇರಿಸುತ್ತವೆ. ಡಾ.ಬಿ.ಅರ್.ಅಂಬೇಡ್ಕರ್ ಅಭಿವೃದ್ಧಿ ನಿಗಮವು ಲಭ್ಯ ಹಣವನ್ನು ವಿವಿಧ ಬ್ಯಾಂಕ್​ಗಳಲ್ಲಿ ಒಂದು ವರ್ಷಮಟ್ಟಿಗೆ ಠೇವಣಿಯಿಟ್ಟು, ಬಂದ ಬಡ್ಡಿಯನ್ನು ಆಡಳಿತ ವೆಚ್ಚಕ್ಕೆ ಬಳಸಿಕೊಂಡಿದೆ. ಕಳೆದ ಐದು ವರ್ಷ (2016-17 ರಿಂದ 2020-21)ಗಳ ಪೈಕಿ 2018-19ರಲ್ಲಿ ಬ್ಯಾಂಕ್​ಗಳಲ್ಲಿ ಹಣ ಠೇವಣಿಯಿಡುವ ಅವಕಾಶ ನಿಗಮಕ್ಕೆ ದೊರೆತಿಲ್ಲ.

405 ಕೋಟಿ ರೂ. ಬಡ್ಡಿ ಸಂಪಾದನೆ: ನಾಲ್ಕು ವರ್ಷಗಳ ಅವಧಿಯಲ್ಲಿ ನಿಗಮ ಸಂಪಾದಿಸಿದ ಬಡ್ಡಿ ಒಟ್ಟುಗೂಡಿಸಿದರೆ 227 ಕೋಟಿ ರೂ. ದಾಟಲಿದ್ದು, ಆಡಳಿತ ವೆಚ್ಚದ ಜತೆಗೆ ವಿವಿಧ ಯೋಜನೆಗಳಿಗೂ ವಿನಿಯೋಗಿಸಿದೆ. 2016-17ರಲ್ಲಿ 1130 ಕೋಟಿ ರೂ. ಠೇವಣಿಯಿರಿಸಿ 78.15 ಕೋಟಿ ರೂ. ಬಡ್ಡಿ ಗಳಿಸಿದೆ. ಇದರಲ್ಲಿ 35.61 ಕೋಟಿ ರೂ.ಗಳನ್ನು ಆಡಳಿತ ವೆಚ್ಚಕ್ಕೆ ಬಳಸಿದೆ. 2017-18ರಲ್ಲಿ 1515 ಕೋಟಿ ರೂ. ಠೇವಣಿಯಿಟ್ಟು, 99.95 ಕೋಟಿ ರೂ. ಬಡ್ಡಿ ಸಂಪಾದಿಸಿದೆ. ಈ ಪೈಕಿ 46.96 ಕೋಟಿ ರೂ.ಗಳನ್ನು ಆಡಳಿತ ವೆಚ್ಚಕ್ಕೆ ವಿನಿಯೋಗಿಸಿದೆ. 2018-19ರಲ್ಲಿ ಯಾವುದೇ ಠೇವಣಿಯಿಡದಿದ್ದರೂ ಲಭ್ಯ ಬಡ್ಡಿ ಪೈಕಿ 60.11 ಕೋಟಿ ರೂ.ಗಳನ್ನು ಆಡಳಿತ ವೆಚ್ಚಕ್ಕೆ ಬಳಸಿದೆ. ಕರೊನಾ ಸಾಂಕ್ರಾಮಿಕ ಪಿಡುಗಿನ ಪರಿಣಾಮ 2019-20ರಲ್ಲಿ ಕೇವಲ 500 ಕೋಟಿ ರೂ. ಠೇವಣಿ ಇರಿಸಲು ನಿಗಮ ಶಕ್ತವಾಗಿದೆ. ಆದರೆ ಗರಿಷ್ಠ ಶೇಕಡ 7.30 ದರ ಗಿಟ್ಟಿಸಿಕೊಂಡ ಕಾರಣ 37.99 ಕೋಟಿ ರೂ. ಬಡ್ಡಿ ಗಳಿಸಿದರೆ, ಆಡಳಿತ ವೆಚ್ಚಕ್ಕೆ 41.61 ಕೋಟಿ ರೂ. ವಿನಿಯೋಗಿಸಿದೆ. 2020-21ರಲ್ಲಿ 225 ಕೋಟಿ ರೂ. ಠೇವಣಿಯಿಡಲು ಸಾಧ್ಯವಾಗಿದೆ. ಹಿಂದಿನ ಆರ್ಥಿಕ ವರ್ಷಗಳಿಗೆ ಹೋಲಿಸಿದರೆ ಅತ್ಯಂತ ಕಡಿಮೆ ಶೇ.5.01 ದರದಂತೆ 10.91 ಕೋಟಿ ರೂ. ಬಡ್ಡಿ ಗಳಿಸಿದ್ದರೆ, 25.19 ಕೋಟಿ ರೂ.ಗಳನ್ನು ಆಡಳಿತ ವೆಚ್ಚಕ್ಕೆ ಬಳಸಿದೆ.

‘ಇಂಟರೆಸ್ಟಿ’ಂಗ್: ಪರಿಶಿಷ್ಟ ಜಾತಿ ಸಮುದಾಯಗಳ ಜೀವನಮಟ್ಟ ಸುಧಾರಣೆಗಾಗಿ ಭೂ ಒಡೆತನ, ಸ್ವಯಂ ಉದ್ಯೋಗ, ಗಂಗಾ ಕಲ್ಯಾಣ, ಮೈಕ್ರೋ ಕ್ರೆಡಿಟ್ (ಪ್ರೇರಣಾ), ವೃತ್ತಿ ಕೌಶಲ ತರಬೇತಿ, ಟ್ಯಾಕ್ಸಿ, ಹೈನುಗಾರಿಕೆ, ಸಮೃದ್ಧಿ, ಐರಾವತ ಹಾಗೂ ಉನ್ನತಿ ಯೋಜನೆಗಳ ಅನುಷ್ಠಾನದ ಜವಾಬ್ದಾರಿ ನಿಗಮ ಹೊತ್ತುಕೊಂಡಿದೆ.

ಕೆಲವು ಯೋಜನೆಗಳ ಅನುಷ್ಠಾನವೂ ‘ಇಂಟರೆಸ್ಟಿ’ಂಗ್ ಆಗಿದೆ. ಹಿಂದಿನ ಆರ್ಥಿಕ ವರ್ಷಗಳಲ್ಲಿ ಬಳಕೆಯಾಗದ ಒಟ್ಟು 199.86 ಕೋಟಿ ರೂ. ಮೂರು ಯೋಜನೆಗಳಿಗೆ ಆಸರೆಯಾಗಿದೆ. ಸಮುದಾಯದ ರೈತರ ಜಮೀನಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ಉದ್ದೇಶಿತ ಗಂಗಾ ಕಲ್ಯಾಣಕ್ಕೆ 132.30 ಕೋಟಿ ರೂ., ಮೈಕ್ರೋ ಕ್ರೆಡಿಟ್​ಗೆ 16.87 ಕೋಟಿ ರೂ ಮತ್ತು ಸ್ವಯಂ ಉದ್ಯೋಗದಡಿ ನೇರ ಸಾಲಕ್ಕೆ 37.74 ಕೋಟಿ ರೂ. ಖರ್ಚು ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net