

ಶಿವಮೊಗ್ಗ: ಕರ್ನಾಟಕ ನೀರಾವರಿ ನಿಗಮದ ಜಾಗದಲ್ಲಿದ್ದ ಮನೆಗಳನ್ನು ಏಕಾಏಕಿ ತೆರವುಗೊಳಿಸಿದ ಅಧಿಕಾರಿಗಳ ಕ್ರಮ ಖಂಡಿಸಿ ಕಳೆದ ಮೂರು ದಿನಗಳಿಂದ ಅಂಬೇಡ್ಕರ್ ಕಾಲನಿಯ ಹಕ್ಕಿಪಿಕ್ಕಿಗಳು, ಅಲೆಮಾರಿಗಳು ಮತ್ತು ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಡಿಸಿ ಕಚೇರಿ ಎದುರು ನಡೆಸುತ್ತಿದ್ದ ಪ್ರತಿಭಟನೆ ಗುರುವಾರ ಅಂತ್ಯಗೊಂಡಿತು.
ಡಿಸಿ ಕಚೇರಿಯಲ್ಲಿ ಗುರುವಾರ ಕರ್ನಾಟಕ ನೀರಾವರಿ ನಿಗಮ, ಮಹಾನಗರ ಪಾಲಿಕೆ, ಕೊಳಚೆ ನಿರ್ಮೂಲನಾ ಮಂಡಳಿ ಅಧಿಕಾರಿಗಳು ಮತ್ತು ಪ್ರತಿಭಟನಾನಿತರ ಮುಖಂಡರ ಜತೆ ಸಭೆ ನಡೆಸಿದ ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ, ತಾತ್ಕಲಿಕವಾಗಿ ಯಥಾಸ್ಥಿತಿ ಕಾಯ್ದುಕೊಳ್ಳಲು ಸೂಚಿಸಿದರು.
ನಿವೇಶನದಾರರು ಸಂಬಂಧಿಸಿದ ಇಲಾಖೆ ಸಚಿವರೊಂದಿಗೆ ಚರ್ಚಿಸಿ ಶೀಘ್ರವೇ ಸಮಸ್ಯೆಯನ್ನು ಪರಿಹರಿಸಿಕೊಳ್ಳಬೇಕು. ಈಗಾಗಲೇ ನಿವೇಶನ ಕಟ್ಟಿಕೊಂಡವರಿಗೆ ಅಲ್ಲಿ ವಸತಿ ಕಲ್ಪಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಅಲ್ಲಿವರೆಗೂ ನೀರಾವರಿ ನಿಗಮದ ಅಧಿಕಾರಿಗಳು ಯಥಾಸ್ಥಿತಿ ಕಾಯ್ದಕೊಳ್ಳುವಂತೆ ಹೇಳಿದರು. ಹಾಗಾಗಿ ಮೂರು ದಿನಗಳಿಂದ ಅಂಬೇಡ್ಕರ್ ಕಾಲನಿ ನಿವಾಸಿಗಳು ನಡೆಸುತ್ತಿದ್ದ ಹೋರಾಟಕ್ಕೆ ಅಂತ್ಯಗೊಂಡಿತು.
ಅಕ್ರಮವಾಗಿ ಕಟ್ಟಿಕೊಂಡಿದ್ದ ಮನೆಗಳನ್ನು ತೆರವುಗೊಳಿಸಿದ ಬೆನ್ನಲ್ಲೇ ಸ್ಥಳೀಯ ನಿವಾಸಿಗಳು ಡಿಸಿ ಕಚೇರಿ ಎದುರು ಮೂರು ದಿನಗಳಿಂದ ಧರಣಿ ನಡೆಸಿದ್ದರು. ಪ್ರತಿಭಟನೆ ನಡುವೆಯೇ ಸ್ಥಳದಲ್ಲೇ ಕುಲಕಸುಬು ಮುಂದುವರಿಸಿದ್ದು ವಿಶೇಷವಾಗಿತ್ತು. ತಳಿರು ತೋರಣ, ಪ್ಲಾಸ್ಟಿಕ್‌ನ ಅಲಂಕಾರಿಕ ವಸ್ತುಗಳನ್ನು ತಯಾರಿಸಿ ಅಲ್ಲಿಂದಲೇ ಜಿಲ್ಲೆ ಮತ್ತು ಹೊರಜಿಲ್ಲೆಗಳಿಗೆ ಪೂರಕೈ ಮಾಡಿದರು. ಕೆಲವರು ಎಳೆ ಮಕ್ಕಳನ್ನೂ ಕರೆದುಕೊಂಡು ಬಂದು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಮಹಿಳೆಯರು ಪ್ರತಿಭಟನಾನಿತರಿಗೆ ಅಲ್ಲಿಯೇ ಅಡುಗೆ ಮಾಡಿ ಬಡಿಸಿದರು.
129 ಮನೆ ತೆರವಿಗೆ ನಡೆದಿತ್ತು ಸಿದ್ಧತೆ:
ಅಂಬೇಡ್ಕರ್ ಕಾಲನಿಯಲ್ಲಿ 350ಕ್ಕೂ ಅಧಿಕ ಮನೆಗಳಿದ್ದು ನೀರಾವರಿ ನಿಗಮದ ಜಾಗದಲ್ಲೇ 200 ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ನಿಗಮದ ಜಾಗದಲ್ಲಿರುವ ಅನಧಿಕೃತ ಮನೆಗಳನ್ನು ತೆರವುಗೊಳಿಸುವಂತೆ ಹೈಕೋರ್ಟ್ ಆದೇಶ ನೀಡಿತ್ತು. ಹಾಗಾಗಿ ನೀರಾವರಿ ನಿಗಮದ ಅಧಿಕಾರಿಗಳು 129 ಮನೆಗಳನ್ನು ತೆರವುಗೊಳಿಸಲು ಸಿದ್ಧತೆ ಮಾಡಿಕೊಂಡಿದ್ದರು. ಕಳೆದ ಸೋಮವಾರ ಸ್ಥಳೀಯರ ವಿರೋಧದ ನಡುವೆಯೂ ವಾಸವಿರದ ಎಂಟು ಮನೆಗಳನ್ನು ತೆರವುಗೊಳಿಸಿದ್ದರು. ಅದಾದ ಬಳಿಕ 121 ಮನೆಗಳ ತೆರವಿಗೆ 15 ದಿನಗಳ ಕಾಲಾವಕಾಶ ನೀಡಿದ್ದರು.