

ಕೋಲಾರ: ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರನ್ನು ನುಡಿಗಳ ಮೂಲಕ ಅರಿಯಬೇಕೇ ಹೊರತು ವಿಗ್ರಹಗಳ ಆರಾಧನೆ ಮೂಲಕವಲ್ಲ ಎಂಬ ಧ್ಯೇಯದೊಂದಿಗೆ "ಅಂಬೇಡ್ಕರ್ ಗ್ರಂಥಾಲಯ ಚಳವಳಿ' ಪ್ರಾರಂಭಿಸಲಾಗಿದ್ದು, ಮುಂದಿನ ದಿನಗಳಲ್ಲಿ ಪ್ರತಿ ಗ್ರಾಮದಲ್ಲಿ ಸ್ಥಾಪನೆ ಮಾಡಲಾಗುವುದು ಎಂದು ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಹೇಳಿದರು.
ಬುಡ್ಡೀದಿಪ ಸಾಂಸತಿಕ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಗಣರಾಜ್ಯೋತ್ಸವದಲ್ಲಿ ಅಂಬೇಡ್ಕರ್ ಲೈಬ್ರರಿ ಮೂವ್ಮೆಂಟ್ನ ಮೊದಲ ಗ್ರಂಥಾಲಯ ಉದ್ಘಾಟಿಸಿ ಮಾತನಾಡಿದ ಅವರು, ಅಂಬೇಡ್ಕರ್ ಓದು ಸುಲಭವಾಗುವಂತೆ ಪ್ರತಿ ವಯೋಮಾನದವರಿಗೆ ಪ್ರತ್ಯೇಕವಾಗಿ ಅಂಬೇಡ್ಕರ್ ಓದಿನ ಮಹತ್ವ ಅರಿವು ಮಾಡಿಸಲು ಕೃತಿಗಳ ರಚನೆಯೂ ಗ್ರಂಥಾಲಯದ ಭಾಗವಾಗಿರುತ್ತದೆ ಎಂದು ವಿವರಿಸಿದರು.
ಸುಮಾರು 50 ವರ್ಷಗಳ ದಲಿತ ಚಳವಳಿಯ ಹೋರಾಟದ ಹಾದಿಯಲ್ಲಿ ಕಂಡುಕೊಂಡ ಅನುಭವದ ಆಧಾರದ ಮೇಲೆ, ಅಂಬೇಡ್ಕರ್ ಅವರನ್ನು ಓದುವ ಮುಂದಿನ ದಾರಿಗಳನ್ನು ರೂಪಿಸುವ ಬೆಳಕಿನ ಕೇಂದ್ರಗಳಾಗಿ ಪ್ರತಿ ಗ್ರಾಮದಲ್ಲಿಯೂ ಅಂಬೇಡ್ಕರ್ ಗ್ರಂಥಾಲಯಗಳನ್ನು ತೆರೆದು ನಿತ್ಯವೂ ಮಕ್ಕಳಾದಿಯಾಗಿ ಪ್ರತಿಯೊಬ್ಬರು ಅಲ್ಲಿನ ಪುಸ್ತಕಗಳನ್ನು ಓದುವಂತಾಗಬೇಕೆಂಬ ವಾತಾವರಣ ನಿಮಾರ್ಣ ಮಾಡಲಾಗುತ್ತಿದೆ ಎಂದು ವಿವರಿಸಿದರು.
ಅಂಬೇಡ್ಕರ್ ಅವರನ್ನು ವಿಗ್ರಹವಾಗಿಸಿ ಆಶಯಗಳನ್ನು ಸ್ಥಿರವಾಗಿಸದೆ ಗ್ರಂಥಾಲಯಗಳ ಮೂಲಕ ಅವರ ಆಶಯಗಳನ್ನು ನೆಲೆಗೊಳಿಸಲು ವೈವಿಧ್ಯಮ ಕಾರ್ಯಕ್ರಮಗಳನ್ನು ರೂಪಿಸಲಾಗಿದ್ದು, ಅಂಬೇಡ್ಕರ್ ಗ್ರಂಥಾಲಯಗಳ ಮೂಲಕ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ. ಇದರ ಮೊದಲ ಹೆಜ್ಜೆ ಬುಡ್ಡೀದಿಪ ಅಂಬೇಡ್ಕರ್ ಗ್ರಂಥಾಲಯದಿಂದ ಆರಂಭವಾಗಿದೆ. ಪ್ರತಿ ಗ್ರಂಥಾಲಯದಲ್ಲಿಯೂ ವರ್ಷಕ್ಕೆ ಆರು ವಿಶೇಷ ಉಪನ್ಯಾಸ ಹಾಗೂ ಇತರ ಕಾರ್ಯಕ್ರಮಗಳನ್ನು ಏರ್ಪಡಿಸಲು ಅವಕಾಶವಿರುತ್ತದೆ ಎಂದರು.
ಬುಡ್ಡೀದಿಪ ಅಂಬೇಡ್ಕರ್ ಗ್ರಂಥಾಲಯ ಚಳವಳಿ ಭಾಗವಾಗಿರುವ ಹೈದರಾಬಾದ್ನ ಕಾರ್ತಿಕ್ ಮಾತನಾಡಿ, ಅಂಬೇಡ್ಕರ್ ಗ್ರಂಥಾಲಯ ಓದಿನ ಮೂಲಕ ಭವಿಷ್ಯದ ಮಕ್ಕಳಿಗೆ ಸಾಂಸತಿಕ ಪಠ್ಯಗಳನ್ನು ರೂಪಿಸುವ, ಮಕ್ಕಳ ವ್ಯಕ್ತಿತ್ವ ವಿಕಸನಗೊಳಿಸುವ ರಂಗಭೂಮಿ ಚಟುವಟಿಕೆಗಳನ್ನು ನಡೆಸಲಾಗುವುದು ಎಂದರು.
ಕಲಾವಿದೆ ದುರ್ಗಕೋಟಿ ಮಾತನಾಡಿ, ಭಾರತೀಯ ಸಂವಿಧಾನ ಅನುಷ್ಠಾನಕ್ಕೆ ಬಂದ ಗಣರಾಜ್ಯೋತ್ಸವದಂದು ಅಂಬೇಡ್ಕರ್ ಲೈಬ್ರರಿ ಮೂವ್ಮೆಂಟ್ ಉದ್ಘಾಟನೆಯಾಗುತ್ತಿದ್ದು, ಮಕ್ಕಳ ಭವಿಷ್ಯದ ಬೆಳವಣಿಗೆಯ ಉದ್ದೇಶವನ್ನಿಟ್ಟುಕೊಂಡು ಸಾಂಸತಿಕ ಚಟುವಟಿಕೆಗಳ ಮೂಲಕ ಅವರಲ್ಲಿರುವ ಕಲೆಯನ್ನು ಹೇಗೆ ಗುರುತಿಸಿಕೊಳ್ಳಬೇಕು ಮತ್ತು ಬೌದ್ಧಿಕವಾಗಿ ಹೇಗೆ ಬೆಳೆಯಬೇಕು ಎಂಬ ಕಾರಣಕ್ಕೆ ಅಂಬೇಡ್ಕರ್ ಅವರ ಅನಿಹಿಲೇಷನ್ ಆಫ್ ಕ್ಯಾಸ್ಟ್ ಪುಸ್ತಕ ಓದುವುದರೊಂದಿಗೆ ಕಾರ್ಯಕ್ರಮ ಆರಂಭಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಚಳ್ಳಕೆರೆ ಕೆಂಪುಟವೆಲ್ ಕರಿಯಣ್ಣ, ಮೈಸೂರು ಮಹಾದೇವ್, ಮಂಡ್ಯ ರಾಮಚಂದ್ರ, ಸೋಮಣ್ಣ, ಡಾ.ಬೈರಪ್ಪ, ಗಂಗಪ್ಪ ತಳವಾರ್, ಶಿವಪ್ಪ ಅರಿವು, ಚಾಮರಹಳ್ಳಿ ರಮೇಶ್, ರಾಮನಗರ ಅಕ್ಷಯ್, ಸಿಎಂಆರ್ ಶ್ರೀನಾಥ್, ಗಡ್ಡಂ ವೆಂಕಟೇಶ್, ಚಂದನಗೌಡ, ನಾಯಂಡಹಳ್ಳಿ ಮುನಿರಾಂ, ಮೈಸೂರಿನ ಕಾವಾ ವಿದ್ಯಾರ್ಥಿ ಶಿವರಂಜನ್, ಡಾ.ನೇತ್ರಾವತಿ, ಅಂಜಲಿ, ಡಾ.ವಿವೇಕ್ ಹಾಜರಿದ್ದರು.