

ಶಿವಮೊಗ್ಗ: ಸಾಗರದ ಜಂಬಗಾರು ರೈಲ್ವೆ ನಿಲ್ದಾಣಕ್ಕೆ ರಾಮಮನೋಹರ ಲೋಹಿಯಾ ಹೆಸರಿಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕೆಂದು ಆಗ್ರಹಿಸಿ ಶುಕ್ರವಾರ ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್ ಪದಾಧಿಕಾರಿಗಳು ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಲೋಹಿಯಾ 1951ರ ಜೂ.13ರಂದು ಜಂಬಗಾರು ರೈಲ್ವೆ ನಿಲ್ದಾಣದಲ್ಲಿ ಹಲವು ಚಳವಳಿಗಾರೊಂದಿಗೆ ಬಂಧನಕ್ಕೊಳಪಟ್ಟಿದ್ದರು. ಇದರಿಂದ ಗೇಣಿದಾರರ ಪರ ಹೋರಾಟಕ್ಕೆ ಹೊಸ ಶಕ್ತಿ ಬಂದಿತ್ತು. ಮುಂದೆ ಅದು ಯಶಸ್ವಿಯಾಯಿತು. ಹೀಗಾಗಿ ರೈಲು ನಿಲ್ದಾಣಕ್ಕೆ ಅವರ ಹೆಸರಿಡಬೇಕೆಂದು ಒತ್ತಾಯಿಸಿದರು.
ಈ ಹಿಂದೆ ನಮ್ಮ ಬೇಡಿಕೆಯನ್ನು ಮಾಜಿ ಕೇಂದ್ರ ಸಚಿವ ಶ್ರೀನಿವಾಸ್ ಪ್ರಸಾದ್ ಅವರ ಮೂಲಕ ಕೇಂದ್ರ ಸರ್ಕಾರದ ಗಮನಕ್ಕೆ ತರಲಾಗಿತ್ತು. ಆದರೆ ಈವರೆಗೂ ಅದು ಕಾರ್ಯರೂಪಕ್ಕೆ ಬಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಟ್ರಸ್ಟ್‌ನ ವ್ಯವಸ್ಥಾಪಕ ಟ್ರಸ್ಟಿ ಕಲ್ಲೂರು ಮೇಘರಾಜ್, ಪ್ರಮುಖರಾದ ಎಚ್.ಎಂ.ಸಂಗಯ್ಯ, ಎಸ್.ವಿ.ರಾಜಮ್ಮ, ಕೆ.ಆರ್.ಶಿವಣ್ಣ, ಶಂಕ್ರಾ ನಾಯ್ಕ, ನರಸಿಂಹಮೂರ್ತಿ, ಬಿ.ಟಿ. ಸೋಮಶೇಖರಯ್ಯ, ಪುಷ್ಪಲತಾ ಇತರರಿದ್ದರು.