

ನವದೆಹಲಿ: ಟೆಕ್ ದೈತ್ಯ ಕಂಪನಿಗಳಾದ ಟಿಸಿಎಸ್, ಮೈಕ್ರೋಸಾಫ್ಟ್, ಇನ್ಫೋಸಿಸ್ ಕೆಲವು ತಿಂಗಳುಗಳ ಹಿಂದಷ್ಟೇ ತನ್ನ ಉದ್ಯೋಗಿಗಳನ್ನು ಕೆಲಸದಿಂದ ಹೊರನೂಕಿತು (Lay Off ). ಇದಕ್ಕೆ ಸಂಸ್ಥೆಗಳು ಕೊಟ್ಟ ಕಾರಣ ಹಲವು. ಆದರೆ, ಮುಖ್ಯ ಕಾರಣವೇನು? ಎಂದು ನೋಡುವುದಾದರೆ ಅದು ಕೃತಕ ಬುದ್ಧಿಮತ್ತೇ (ಎಐ). ಇದೀಗ ಆ ಸಾಲಿಗೆ ಅಮೆಜಾನ್ ಕೂಡ ಸೇರ್ಪಡೆಯಾಗಿದೆ.
ವಜಾಗೊಳಿಸುವ ಪ್ರಕ್ರಿಯೆಗೆ ದಾಪುಗಾಲು ಇಟ್ಟಿರುವ ಅಮೆಜಾನ್, ತನ್ನ ಸಂಸ್ಥೆಯ ಮಾನವ ಸಂಪನ್ಮೂಲ (HR) ಸಿಬ್ಬಂದಿ ವರ್ಗದಲ್ಲಿ ಶೇ.15ರಷ್ಟು ಕಡಿತಗೊಳಿಸಲು ಮುಂದಾಗಿದೆ ಎಂದು ವರದಿಯಾಗಿದೆ. ಈ ಕಟು ನಿರ್ಧಾರಕ್ಕೆ ಹತ್ತು ಹೆಜ್ಜೆ ಮುಂದಿರುವ ಎಐ ಟೆಕ್ನಾಲಜಿ ಮತ್ತು ಕ್ಲೌಡ್ ಬಳಕೆಯೇ ಕಾರಣ ಎನ್ನಲಾಗಿದೆ. ಇದರ ಮೇಲೆ ಹೆಚ್ಚು ಅವಲಂಬಿತವಾಗಿರುವ ಅಮೆಜಾನ್, ಶೀಘ್ರವೇ ಉದ್ಯೋಗಿಗಳಿಗೆ ಗೇಟ್ಪಾಸ್ ಕೊಡಲಿದೆ.
ಆಂತರಿಕವಾಗಿ ಪೀಪಲ್ ಎಕ್ಸ್‌ಪೀರಿಯೆನ್ಸ್ ಅಂಡ್ ಟೆಕ್ನಾಲಜಿ (PXT) ಟೀಮ್ ಎಂದು ಕರೆಯಲ್ಪಡುವ ಮಾನವ ಸಂಪನ್ಮೂಲ ವಿಭಾಗವು ಜಾಗತಿಕವಾಗಿ 10,000ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ. ಇದರಲ್ಲಿ ನೇಮಕಾತಿ ತಂಡ, ಟೆಕ್ನಿಕಲ್ ಟೀಮ್ ಮತ್ತು ಇತರ ವಿಭಾಗಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಸೇರಿದ್ದಾರೆ. ಆದಾಗ್ಯೂ, ಸಂಸ್ಥೆ ನಿಖರವಾಗಿ ಎಷ್ಟು ಸಂಖ್ಯೆಯ ಉದ್ಯೋಗಿಗಳನ್ನು ಕೈಬಿಡುತ್ತಿದ್ದೇವೆ ಹಾಗೂ ಯಾವಾಗ? ಎಂಬ ಮಾಹಿತಿಯನ್ನು ಇನ್ನೂ ಸ್ಪಷ್ಟಪಡಿಸಿಲ್ಲ.
ಅಮೆಜಾನ್‌ನ ಪ್ರಮುಖ ಗ್ರಾಹಕ ವ್ಯವಹಾರ ಸೇರಿ ಇತರ ಕೆಲವು ಕ್ಷೇತ್ರಗಳ ಮೇಲೂ ವಜಾ ಪ್ರಕ್ರಿಯೆ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ವರದಿ ಉಲ್ಲೇಖಿಸಿದೆ. ಈ ವರ್ಷದ ಆರಂಭದಲ್ಲಿ, ಕಂಪನಿಯು ಗ್ರಾಹಕ ಸಾಧನಗಳ ಘಟಕ, ವಂಡರಿ ಪಾಡ್‌ಕ್ಯಾಸ್ಟ್ ವಿಭಾಗ ಮತ್ತು ಅಮೆಜಾನ್ ವೆಬ್ ಸರ್ವೀಸ್ಗೆ ಸಂಬಂಧಿಸಿದ ಕೆಲವು ಉದ್ಯೋಗಿಗಳನ್ನು ವಜಾಗೊಳಿಸಿತು. 2025ರಲ್ಲಿ ಎಐ ಮತ್ತು ಕ್ಲೌಡ್ ಮೇಲೆ ಹೆಚ್ಚು ಬಂಡವಾಳ ಹೂಡಲು ಸಂಸ್ಥೆ ನಿರ್ಧರಿಸಿದ್ದು, 100 ಬಿಲಿಯನ್ ಡಾಲರ್ ವ್ಯಯಿಸಲು ಚಿಂತಿಸಿದೆ ಎಂದು ವರದಿಯಾಗಿದೆ,(ಏಜೆನ್ಸೀಸ್).