ಬಂಕ್​ ಮಾಲೀಕನ ಮನೆಗೆ ನುಗ್ಗಿ ಹಣ ದೋಚಿದ ಖದೀಮನಿಗೆ ಕಂಟಕವಾಯ್ತು ಏರ್ ಕಂಡೀಷನರ್​!

Theft
Published on

ವಿಜಯವಾಡ: ಕಳ್ಳತನ ಮಾಡಲೆಂದು ಮನೆಗೆ ನುಗ್ಗಿದ ಯುವಕನೊಬ್ಬ ನಿದ್ರೆ ಜಾರುವ ಮೂಲಕ ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.

ಬಂಧಿತನನ್ನು ಸೂರಿ ಬಾಬು (21) ಎಂದು ಗುರುತಿಸಲಾಗಿದೆ. ಆಂಧ್ರದ ಪೂರ್ವ ಗೋದಾವರಿ ಜಿಲ್ಲೆಯ ಗೊಕವರಂ ಗ್ರಾಮದ ನಿವಾಸಿಯಾದ ಈತ ಜಿಲ್ಲೆಯ ಪೆಟ್ರೋಲ್​ ಬಂಕ್​ ಮಾಲೀಕರೊಬ್ಬರ ಮನೆಯಲ್ಲಿ ಕದಿಯಲು ಹೋಗಿದ್ದ. ಮನೆಯ ಸುತ್ತಲಿನ ಚಲನಾವಲನಗಳನ್ನು ಸೂಕ್ಷ್ಮವಾಗಿ ಗಮನಿಸಿದ್ದ ಬಾಬು, ಕರೊನಾ ವೈರಸ್​ ಲಾಭ ಪಡೆದುಕೊಂಡು ಮುಖಕ್ಕೆ ಮಾಸ್ಕ್​ ಧರಿಸಿ ಮನೆಯನ್ನು ಹೊಕ್ಕಿದ್ದ. ಬಂಕ್​ ಮಾಲೀಕ ಪ್ರತಿನಿತ್ಯ ತಾನೂ ಸಂಪಾದಿಸಿದ ಹಣವನ್ನು ಎಲ್ಲಿ ಇಡುತ್ತಾನೆ ಎಂಬ ಮಾಹಿತಿಯನ್ನು ಪಡೆದುಕೊಂಡಿದ್ದ.

ಮೊದಲೇ ಆರ್ಥಿಕ ಸಂಕಷ್ಟದಲ್ಲಿದ್ದ ಬಾಬು ತನ್ನ ಹೊರೆಯನ್ನು ಇಳಿಸಿಕೊಳ್ಳುವುದಕ್ಕಾಗಿ ಸಂಚು ರೂಪಿಸಿದ್ದ. ಸೆಪ್ಟೆಂಬರ್​ 12ರಂದು ತನ್ನ ಸಂಚನ್ನು ಕಾರ್ಯರೂಪಕ್ಕೆ ತಂದು, ಬಂಕ್​ ಮಾಲೀಕ ನಿದ್ರೆಗೆ ಜಾರಿರುವುದನ್ನು ಗಮನಿಸಿ, ನಸುಕಿನ ಜಾವ 4 ಗಂಟೆಗೆ ಬಾಬು ಮನೆಯೊಕ್ಕಿದ್ದ. ಪ್ರತಿದಿನ ಬಾಕ್ಸ್​ ಒಂದರಲ್ಲಿ ಹಣವನ್ನು ಭದ್ರವಾಗಿ ಇಡುತ್ತಿದ್ದ ಬಂಕ್​ ಮಾಲೀಕ ಆ ದಿನ ಮಾತ್ರ ಟೇಬಲ್​ ಒಂದರ ಮೇಲೆ ಇಟ್ಟು ಮಲಗಿದ್ದ. ಇದು ಬಾಬು ಬಾಯಿಗೆ ಲಾಡು ಬಿದ್ದಂತಾಗಿತ್ತು.

ತನ್ನ ಕಾರ್ಯ ಅಂದುಕೊಂಡಿದ್ದಕ್ಕಿಂತ ಸುಲಭವಾಯಿತಲ್ಲ ಎಂಬ ಖುಷಿಯಲ್ಲಿ ಬಾಬು ಮೈಮರೆತಿದ್ದ. ಮೊದಲೇ ದಣಿದಿದ್ದರಿಂದ ಕೋಣೆಯೊಳಗೆ ಆನ್​ ಆಗಿದ್ದ ಏರ್​ ಕಂಡೀಷನರ್ ಬಾಬುವನ್ನು ಸವಿ ನಿದ್ರೆಗೆ ಜಾರಿಸಿತು. ಅಚ್ಚರಿಯೆಂದರೆ ಮಾಲೀಕ ಬೆಡ್​ ಅಡಿಯಲ್ಲಿ ಸ್ವಲ್ಪ ಮಲಗೋಣವೆಂದು ತಲೆಯನ್ನು ನೆಲಕ್ಕೆ ಒರಗಿಸಿದ ಬಾಬುಗೆ ಗಾಢ ನಿದ್ರೆ ಆವರಿಸಿತು.

ಬಾಬು ಸುಮ್ಮನ್ನೇ ಮಲಗಿದ್ದರೆ ಏನು ಆಗುತ್ತಿರಲಿಲ್ಲ. ಆದರೆ, ಮನೆಯ ಛಾವಣೆ ಕಿತ್ತು ಹೋಗುವಷ್ಟು ಗೊರಕೆ ಹೊಡೆಯುತ್ತಿದ್ದ. ಇದನ್ನು ಕೇಳಿ ಎದ್ದ ಮಾಲೀಕ ಖದೀಮ ಬಾಬು ಇರುವುದನ್ನು ನೋಡಿ ಕೋಣೆಯನ್ನು ಲಾಕ್​ ಮಾಡಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬೆಳಗ್ಗೆ ಸುಮಾರು 7.30ರ ಸುಮಾರಿಗೆ ಪೊಲೀಸರು ಬಾಬುವನ್ನು ಬಂಧಿಸಿ ಕರೆದೊಯ್ದಿದ್ದಾರೆ.

ಆರ್ಥಿಕ ಸಂಕಷ್ಟ ಹಾಗೂ ಸಾಲದ ಹೊರೆಯಿಂದಾಗಿ ಕಳ್ಳತನಕ್ಕೆ ಕೈಹಾಕಿದೆ ಎಂದು ಬಾಬು ತಪ್ಪೊಪ್ಪಿಕೊಂಡಿದ್ದಾರೆ. ಸದ್ಯ ಪ್ರಕರಣ ದಾಖಲಿಸಿರುವ ಪೊಲೀಸರು, ಬಾಬು ವೃತ್ತಿಪರ ಖದೀಮನಾಗಿರಬಹುದಾ ಎಂಬುದರ ತನಿಖೆ ನಡೆಸುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net