ಕನ್ನಡದ ಕಾರ್ಯದಲ್ಲಿ ಸದಾ ಮುಂದಿರಿ

24 ಎಸ್ಕೆಪಿ 1 ಸನ್ಮಾನ
ಶಿಕಾರಿಪುರದ ಕಪ್ಪನಹಳ್ಳಿಯಲ್ಲಿ ಕನ್ನಡ ಯುವಕ ಸಂಘದಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರನ್ನು ಸನ್ಮಾನಿಸಲಾಯಿತು. ನವೀನ್, ವೆಂಕಟೇಶ್, ಜಗದೀಶ್, ಅಜಿತ್ ಬಾಬು ಇತರರಿದ್ದರು.
Published on

ಶಿಕಾರಿಪುರ: ಕನ್ನಡ ಭಾಷೆಗೆ ಸಹಸ್ರಾರು ವರ್ಷಗಳ ಇತಿಹಾಸವಿದೆ. ಕನ್ನಡದ ನೆಲ, ಜಲ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಇಂತಹ ಕಾರ್ಯಕ್ರಮಗಳ ಅಗತ್ಯವಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.

ತಾಲೂಕಿನ ಕಪ್ಪನಹಳ್ಳಿಯಲ್ಲಿ ಕನ್ನಡ ಯುವಕ ಸಂಘ, ಗ್ರಾಪಂ ಮತ್ತು ಗ್ರಾಮಸ್ಥರ ಸಹಯೋಗದಲ್ಲಿ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಕನ್ನಡದ ಮೊದಲ ಸಾಮ್ರಾಜ್ಯದ ನಿರ್ಮಾತೃ ಮಯೂರ ವರ್ಮನ ಜನ್ಮ ಸ್ಥಳ ಶಿಕಾರಿಪುರ ತಾಲೂಕು. ಈ ಮಣ್ಣಿನಲ್ಲಿ ಕನ್ನಡದ ಸುಗಂಧ ಪಸರಿಸುತ್ತಿದೆ ಎಂದು ತಿಳಿಸಿದರು.

ಕನ್ನಡ ಸಾಹಿತ್ಯ ಅತ್ಯಂತ ಶ್ರೀಮಂತವಾದುದು. ನಮ್ಮ ಮನೆ ಮನೆಗಳಲ್ಲಿ ಕನ್ನಡದ ಕವಿಗಳ ಕವಯಿತ್ರಿಯರ ಪುಸ್ತಕಗಳಿರಬೇಕು. ನಮ್ಮ ತನುಮನ ಕನ್ನಡವಾಗಿರಬೇಕು. ನಾನು ಕನ್ನಡಿಗ ಎನ್ನುವ ಹೆಮ್ಮೆ ನಮಗಿರಲಿ, ಕನ್ನಡದ ಕಾರ್ಯ ಬಂದಾಗ ನಮ್ಮ ಹೆಜ್ಜೆಗಳು ಸದಾ ಮುಂದಿರಬೇಕು. ಕನ್ನಡವನ್ನು ನಾವು ಆರಾಧಿಸಬೇಕು. ನಮ್ಮ ತಾಯಿ ಭಾಷೆ, ಹೃದಯದ ಭಾಷೆ ಎಂದರು.

ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡಿ ಕನ್ನಡತನ ಮೆರೆದರು. ತಾಲೂಕು, ಜಿಲ್ಲೆ, ರಾಜ್ಯದ ಕನ್ನಡ ಸಾಹಿತ್ಯ ಸಮ್ಮೇಳನಗಳಿಗೆ ಅನುದಾನ ನೀಡಿ ಕನ್ನಡದ ಜಾತ್ರೆ ಅದ್ದೂರಿಯಾಗಿ ನಡೆಯುವಂತೆ ಮಾಡಿದರು ಎಂದು ಹೇಳಿದರು.

ಪ್ರಮುಖರಾದ ಗಾಯತ್ರಿದೇವಿ ಮಲ್ಲಪ್ಪ, ಬಸವರಾಜ್, ವೀರೇಂದ್ರ ಪಾಟೀಲ್, ಮಹೇಶ್ ನಾಯ್ಡು, ವೀರನ ಗೌಡ, ಪ್ರವೀಣ್ ಬೆಣ್ಣೆ, ದರ್ಶನ್, ಕನ್ನಡ ಸಂಘದ ಅಧ್ಯಕ್ಷ ನವೀನ್, ವೆಂಕಟೇಶ, ಜಗದೀಶ್, ಗೌರವಾಧ್ಯಕ್ಷ ಅಜಿತ್ ಬಾಬು, ಮಹೇಶ್, ಹರೀಶ್, ರಾಕೇಶ್, ಲೋಹಿತ್, ಸತೀಶ್, ಬಸವರಾಜ್, ಹೇಮಂತ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net