ಕೆ.ಆರ್.ವಾಟರ್ ವರ್ಕ್ಸ್‌ನ ಆಲಂನ ಟ್ರೀಟ್‌ಮೆಂಟ್ ಘಟಕ ಶಿಥಿಲ: ವಸಂತಕುಮಾರ್

k.v.vasanthkumar
ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ.ವಿ.ವಸಂತಕುಮಾರ್
Published on

ಶಿವಮೊಗ್ಗ: ಕಳೆದ 15 ದಿನಗಳಿಂದ ನ್ಯೂಮಂಡ್ಲಿಯ ಕೆ.ಆರ್.ವಾಟರ್ ವರ್ಕ್ಸ್‌ನ ನೀರು ಶುದ್ಧೀಕರಣ ಮತ್ತು ಸರಬರಾಜು ಘಟಕದಲ್ಲಿ ಸರಿಯಾಗಿ ನೀರು ಶುದ್ಧೀಕರಣ ಆಗುತ್ತಿಲ್ಲ. ನೀರು ಶುದ್ಧೀಕರಣ ಘಟಕದಲ್ಲಿ ಸರಿಯಾದ ಯಂತ್ರಗಳೇ ಇಲ್ಲ ಎಂದು ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ.ವಿ.ವಸಂತಕುಮಾರ್ ಹೇಳಿದರು.

ವಿಶ್ವ ಆರೋಗ್ಯ ಸಂಸ್ಥೆ ಮತ್ತು ಭಾರತೀಯ ಕುಡಿಯುವ ನೀರಿನ ಮಾನದಂಡಗಳ ಪ್ರಕಾರ ನೀರು ಶುದ್ಧೀಕರಣ ಪ್ರಕ್ರಿಯೆ ಮೂರು ಹಂತದಲ್ಲಿ ನಡೆಯುತ್ತದೆ. ಆದರೆ ಇಲ್ಲಿ ದೋಷಪೂರಿತ ಕಾರ್ಯನಿರ್ವಹಣೆಯಿಂದ ಮಣ್ಣು ಮಿಶ್ರಿತ ನೀರು ಪೂರೈಕೆಯಾಗುತ್ತಿದೆ. ಇದರಿಂದ ಸಾವಿರಾರು ಜನರಿಗೆ ಆರೋಗ್ಯದಲ್ಲಿ ತೊಂದರೆ ಉಂಟಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು. ಈ ಹಿಂದೆ ಉಪಯೋಗಿಸುತ್ತಿದ್ದ ಆಲಂ ಕೇಕ್‌ನ ಬದಲಾಗಿ ಅಲ್ಯೂಮಿನಿಯಂ ಕ್ಲೋರೈಡ್ ಬಳಸಲಾಗುತ್ತಿದೆ. ಈ ಕಾರ್ಯ ಕೂಡ ಅಪೂರ್ಣವಾಗಿ ನಡೆಯುತ್ತಿದ್ದು, ಮಣ್ಣು ಮಿಶ್ರಿತ ನೀರು ಟ್ಯಾಂಕ್‌ಗೆ ಸರಬರಾಜಾಗುತ್ತಿದೆ. ಆಲಂನ ಟ್ರೀಟ್‌ಮೆಂಟ್ ಘಟಕ ಶಿಥಿಲವಾಗಿದೆ. ಇದರಲ್ಲಿ ನಿರ್ವಹಣೆ ಕೊರತೆ ಎದ್ದು ಕಾಣುತ್ತಿದೆ ಎಂದು ದೂರಿದರು. ಘಟಕದ ಎಲ್ಲ ಯಂತ್ರಗಳು ಹಾಗೂ ಶುದ್ಧೀಕರಣದ ವಿಧಾನ 50 ವರ್ಷ ಹಿಂದಿನದ್ದಾಗಿದೆ. ಯಂತ್ರಗಳೆಲ್ಲ ತುಕ್ಕು ಹಿಡಿದಿವೆ. ಅನೇಕ ಯಂತ್ರಗಳು ಕೆಲಸ ಮಾಡುತ್ತಿಲ್ಲ. ನದಿಯಿಂದ ಸರಬರಾಜಾಗುವ ಮಣ್ಣು ಮಿಶ್ರಿತ ನೀರನ್ನು ಈ ಯಂತ್ರಗಳು ಬೇರ್ಪಡಿಸಬೇಕು. ಆದರೆ ಆ ಕೆಲಸ ಆಗುತ್ತಿಲ್ಲ ಎಂದರು. ಒಕ್ಕೂಟದ ಸಂಚಾಲಕ ಡಾ. ಸತೀಶ್‌ಕುಮಾರ್ ಶೆಟ್ಟಿ ಮಾತನಾಡಿ, ನೀರಿನ ಶುದ್ಧೀಕರಣ ಘಟಕದ ಒಳ ಮತ್ತು ಹೊರಭಾಗಗಳಲ್ಲಿ ನಿರ್ವಹಣೆ ಅಸಮರ್ಪಕವಾಗಿದೆ. ಕೆಲವು ವರ್ಷಗಳಿಂದ ಈ ಸಮಸ್ಯೆ ಉಂಟಾಗುತ್ತಿದ್ದರೂ ಗಮನಹರಿಸಿಲ್ಲ. ಹಾಗಾಗಿ ಜನರಲ್ಲಿ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಿದೆ. ಪ್ರಮುಖವಾಗಿ ಯಾವುದೇ ಪ್ರಯೋಗಾಲಯಗಳು, ನುರಿತ ತಜ್ಞರಿಲ್ಲ. ನುರಿತ ರಾಸಾಯನಿಕ ತಜ್ಞರ ಅವಶ್ಯಕತೆ ಇದೆ. ನೀರಿನಲ್ಲಿ ಕ್ಲೋರಿನ್ ಪ್ರಮಾಣ ಹೆಚ್ಚಾದರೆ ಜಾಂಡೀಸ್ ಸೇರಿ ಅನೇಕ ಕಾಯಿಲೆಗಳು ತಗುಲುತ್ತವೆ ಎಂದು ಹೇಳಿದರು. ಸಾರ್ವಜನಿಕರ ಆರೋಗ್ಯದ ಜತೆ ಚೆಲ್ಲಾಟವಾಡದೆ ಕೂಡಲೇ ಶಾಸಕ ಎಸ್.ಎನ್.ಚನ್ನಬಸಪ್ಪ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಒಂದೆರಡು ದಿನಗಳಲ್ಲೇ ಜಲಮಂಡಳಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಶೀಘ್ರವೇ ಸಮಸ್ಯೆ ಬಗೆಹರಿಸಬೇಕು. ಇಲ್ಲದಿದ್ದರೆ ದೊಡ್ಡಮಟ್ಟದ ಹೋರಾಟ ಹಮ್ಮಿಕೊಳ್ಳುತ್ತದೆ ಎಂದು ಎಚ್ಚರಿಸಿದರು. ಒಕ್ಕೂಟದ ಅಧ್ಯಕ್ಷ ಎಸ್.ಆರ್.ಗೋಪಾಲ್, ಪ್ರಮುಖರಾದ ಇಕ್ಬಾಲ್ ನೇತಾಜಿ, ಸೀತಾರಾಮ್, ನಾಗರಾಜ್ ಗೋರೆ, ಚನ್ನವೀರಪ್ಪ ಗಾಮನಕಟ್ಟೆ, ರಘುಪತಿ ಸುದ್ದಿಗೋಷ್ಠಿಯಲ್ಲಿದ್ದರು.

- ಡಾ. ಸತೀಶ್‌ಕುಮಾರ್ ಶೆಟ್ಟಿ, ಹಿತರಕ್ಷಣಾ ವೇದಿಕೆ ಒಕ್ಕೂಟದ ಸಂಚಾಲಕಮುಂದಿನ ಹತ್ತು ದಿನಗಳಲ್ಲಿ ದೋಷಪೂರಿತ ವ್ಯವಸ್ಥೆಗಳು ದುರಸ್ತಿಗೊಂಡು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಬೇಕು. ಜಲಮಂಡಳಿಯಿಂದ ಆಗದಿದ್ದರೆ ಬೆಂಗಳೂನಲ್ಲಿರುವಂತೆ ಹೊರಗುತ್ತಿಗೆ ನೀಡಿ ಶುದ್ಧ ನೀರು ಕೊಡಬೇಕು. ಅಗದಿದ್ದರೆ ನಮಗೆ ಕೊಟ್ಟರೆ ಸಾರ್ವಜನಿಕರಿಂದ ವಂತಿಕೆ ಸಂಗ್ರಹಿಸಿ ನಾವೇ ಹೊಸ ಯಂತ್ರಗಳನ್ನು ಖರೀದಿಸಿ ನಿರ್ವಹಣೆ ಮಾಡಿ ಶುದ್ಧ ನೀರು ಕೊಡುತ್ತೇವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net