ಪೈಪ್‌ಲೈನ್ ಇದ್ದರೂ ಕುವೆಂಪು ನಗರಕ್ಕಿಲ್ಲ ಕುಡಿಯುವ ನೀರು

kuvempu nagara water problem
ಶಿವಮೊಗ್ಗದ ಕುವೆಂಪುನಗರ ಸುತ್ತಮುತ್ತ ಬಡಾವಣೆಗಳಿಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸುವಂತೆ ಆಗ್ರಹಿಸಿ ಶಾಸಕ ಎಸ್.ಎನ್.ಚನ್ನಬಸಪ್ಪ ಅವರಿಗೆ ಸ್ಥಳೀಯರು ಮನವಿ ಸಲ್ಲಿಸಿದರು. ಕೆ.ಎನ್.ಪ್ರಸನ್ನಕುಮಾರ್, ವೇದಾನಂದ್, ಡಾ. ರಾಜ್‌ಪ್ರಕಾಶ್, ಕೆ.ಬಿ.ಶಾಂತನು, ರಾಘವೇಂದ್ರ, ಪ್ರಕಾಶಪ್ಪ, ಸುಗುಣಾ ಸತೀಶ್, ಶ್ವೇತಾ ವೇದಾನಂದ್, ಯೋಗೀಶ್ ಇದ್ದರು.
Published on

ಶಿವಮೊಗ್ಗ: ನಗರದ ಸವಳಂಗ ರಸ್ತೆಗೆ ಹೊಂದಿಕೊಂಡಿರುವ ಕುವೆಂಪುನಗರ ಸುತ್ತಮುತ್ತ ಬಡಾವಣೆಗಳಲ್ಲಿ ಮಳೆಗಾಲದಲ್ಲೇ ಕುಡಿಯುವ ನೀರಿಗೆ ಹಾಹಾಕಾರ ಸೃಷ್ಟಿಯಾಗಿದೆ. ಸ್ವಲ್ಪ ದೂರದಲ್ಲೇ ತುಂಗಾ ನದಿ ಹರಿದು ಹೋಗಿದ್ದರೂ ಬಡಾವಣೆಗೆ ನೀರಿನ ಪೂರೈಕೆಯೇ ಇಲ್ಲ. ಒಂದೂವರೆ ವರ್ಷದ ಹಿಂದೆ ಪೈಪ್‌ಲೈನ್ ಹಾಕಿದ್ದರೂ ಪ್ರಯೋಜನ ಇಲ್ಲದಂತಾಗಿದೆ.

ಜೆಎನ್‌ಎನ್‌ಇ ಕಾಲೇಜಿನ ಎದುರಿನ ಕುವೆಂಪುನಗರ, ರೆಡ್ಡಿ ಲೇಔಟ್, ಎನ್‌ಎಸ್ ಲೇಔಟ್ ಸೇರಿ ಸುತ್ತಮುತ್ತಿನ ಬಡಾವಣೆಗಳಲ್ಲಿ ಶಿಕ್ಷಕರು, ವೈದ್ಯರು, ಇಂಜಿನಿಯರ್‌ಗಳು ಹೆಚ್ಚಾಗಿ ವಾಸವಾಗಿದ್ದಾರೆ. ಮಹಾನಗರ ಪಾಲಿಕೆ ವ್ಯಾಪ್ತಿಗೆ ಒಳಪಟ್ಟರೂ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧೀನದಲ್ಲಿ ಈಗಾಗಲೇ ಪೈಪ್‌ಲೈನ್‌ಗಳನ್ನು ಹಾಕಿ ಒಂದೂವರ್ಷ ಕಳೆದಿದೆ.
ಮೂರ್ನಾಲ್ಕು ಬಡಾವಣೆಗಳಲ್ಲಿ ನೂರಾರು ಮನೆಗಳಿವೆ. ವಾಣಿಜ್ಯ ಮಳಿಗೆ, ಹಾಸ್ಟೆಲ್‌ಗಳಿವೆ. ಬಹುತೇಕ ಮಂದಿ ನೀರಿಗೆ ಬೋರ್‌ವೆಲ್‌ಗಳನ್ನೇ ಆಶ್ರಯಿಸುವಂತಾಗಿದೆ. ಕೋಟ್ಯಂತರ ರೂ. ಖರ್ಚು ಮಾಡಿ ಬಡಾವಣೆಗಳಿಗೆ ಪೈಪ್‌ಲೈನ್ ಅಳವಡಿಸಿದ್ದರೂ ನೀರು ಪೂರೈಕೆಗೆ ಮೀನಮೇಷ ಎಣಿಸಲಾಗುತ್ತಿದೆ.
ಬೇಸಿಗೆಯಲ್ಲಿ ಅಯೋಮಯ: ಕಳೆದ ಬೇಸಿಗೆಯಲ್ಲಿ ಇಡೀ ರಾಜ್ಯಾದ್ಯಂತ ಬರಗಾಲ ಆವರಿಸಿತ್ತು. ಅದಕ್ಕೆ ಕುವೆಂಪುನಗರ ಸುತ್ತಮುತ್ತಲಿನ ಬಡಾವಣೆಗಳು ಹೊರತಾಗಿರಲಿಲ್ಲ. ಮಳೆ ಇಲ್ಲದೇ ಬೋರ್‌ವೆಲ್‌ಗಳು ಬತ್ತಿಹೋಗಿದ್ದರಿಂದ ಸ್ಥಳೀಯ ನಿವಾಸಿಗಳು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಇತ್ತ ಬೋರ್‌ವೆಲ್‌ಗಳಲ್ಲಿ ನೀರೂ ಇಲ್ಲದೆ, ಅತ್ತ ಪೈಪ್‌ಲೈನ್ ನೀರು ಬಾರದೇ ಸ್ಥಳೀಯರ ಪರಿಸ್ಥಿತಿ ಅಯೋಮಯವಾಗಿತ್ತು. ಸಾವಿರಾರು ರೂ. ಖರ್ಚು ಮಾಡಿ ಟ್ಯಾಂಕರ್‌ಗಳ ಮೂಲಕ ನೀರನ್ನು ಮನೆಗಳಿಗೆ ಹಾಕಿಸಿಕೊಳ್ಳುವಂತಾಗಿತ್ತು ಎನ್ನುತ್ತಾರೆ ಸ್ಥಳೀಯ ನಿವಾಸಿಗಳು.

10 ದಿನಗಳಲ್ಲಿ ನೀರು ಪೂರೈಕೆಗೆ ಕ್ರಮ
ಕುವೆಂಪುನಗರ ಬಡಾವಣೆ, ರೆಡ್ಡಿ ಲೇಔಟ್, ಎನ್.ಎಸ್.ಲೇಔಟ್ ಬಡಾವಣೆಗಳ ನಿವಾಸಿಗಳು ಕುಡಿಯುವ ನೀರಿನ ಸಂಪರ್ಕ ಒದಗಿಸಿಕೊಡಲು ಒತ್ತಾಯಿಸಿ ಶಾಸಕ ಎನ್.ಎಸ್.ಚನ್ನಬಸಪ್ಪ ಅವರಿಗೆ ಶನಿವಾರ ಸಂಜೆ ಶಾಸಕರ ಕಚೇರಿಯಲ್ಲಿ ಮನವಿ ಸಲ್ಲಿಸಿದರು. ಕುಡಿಯುವ ನೀರಿನ ಸಂಪರ್ಕಕ್ಕಾಗಿ ಪೈಪ್‌ಲೈನ್ ವ್ಯವಸ್ಥೆಯನ್ನು ಒಂದೂವರೆ ವರ್ಷದ ಹಿಂದೆಯೇ ಮಾಡಿದ್ದರೂ ಇದುವರೆಗೂ ನೀರನ್ನು ಕೊಟ್ಟಿಲ್ಲ. ಹಾಗಾಗಿ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಿದರು. ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ಚನ್ನಬಸಪ್ಪ, ಸಂಬಂಧಿಸಿದ ಕರ್ನಾಟಕ ನಗರ ನೀರು ಪೂರೈಕೆ ಮತ್ತು ಒಳಚರಂಡಿ ಮಂಡಳಿ ಅಧಿಕಾರಿಗಳೊಂದಿಗೆ ಚರ್ಚಿಸಿ 10 ದಿನದೊಳಗಾಗಿ ಆ ಭಾಗದ ಬಡಾವಣೆಗಳಿಗೆ ನೀರಿನ ಸಂಪರ್ಕ ಒದಗಿಸಿಕೊಡುವುದಾಗಿ ಆಶ್ವಾಸನೆ ನೀಡಿದರು. ಬದುಕು ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೆ.ಎನ್.ಪ್ರಸನ್ನಕುಮಾರ್, ಉಪಾಧ್ಯಕ್ಷ ವೇದಾನಂದ್, ಕಾರ್ಯದರ್ಶಿ ಡಾ. ರಾಜ್‌ಪ್ರಕಾಶ್, ಪ್ರಮುಖರಾದ ಕೆ.ಬಿ.ಶಾಂತನು, ರಾಘವೇಂದ್ರ, ಪ್ರಕಾಶಪ್ಪ, ಸುಗುಣಾ ಸತೀಶ್, ಶ್ವೇತಾ ವೇದಾನಂದ್, ಯೋಗೀಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net