VIDEO: ಪುಟಾಣಿಗೊಂದು ಸಲಾಂ: ಕೃತಕ ಕಾಲಿನೊಂದಿಗೆ ದಿನವೂ 10ಕಿ.ಮೀ ನಡೆಯೋದೇಕೆ ಗೊತ್ತಾ?

child
Published on

ಲಂಡನ್​: ಈತ ಐದು ವರ್ಷದ ಬಾಲಕ. ಹೆಸರು ಟೋನಿ ಹಡ್ಗೆಲ್. ಲಂಡನ್​ದ ಕೆಂಟ್‌ನವೆಸ್ಟ್ ಮಾಲಿಂಗ್​ ನಿವಾಸಿ ಈತ.

ಮುದ್ದು ಮುದ್ದಾಗಿರುವ ಈ ಬಾಲಕನ ಬದುಕೇ ದೊಡ್ಡ ದುರಂತ. ಈತನಿಗೆ ಸ್ವಂತ ಅಪ್ಪ-ಅಮ್ಮ ಇಲ್ಲ. ಈತನನ್ನು ಸಾಕುವುದಾಗಿ ಪಡೆದ ದಂಪತಿ ಅದ್ಯಾವುದೋ ಸಿಟ್ಟಿನಲ್ಲಿ ಬಾಲಕನಿಗೆ ಕೊಟ್ಟ ಹಿಂಸೆ ಅಷ್ಟಿಷ್ಟಲ್ಲ. ಅವರಿಂದ ಸಿಕ್ಕಾಪಟ್ಟೆ ಹಲ್ಲೆಗೆ ಒಳಗಾದ ಟೋನಿ ಕೇವಲ 41 ದಿನಗಳ ಶಿಶು ಇರುವಾಗಲೇ ದೇಹದ ಮೇಲೆಲ್ಲಾ ಗಾಯಗಳೇ ತುಂಬಿ ಹೋಗಿದ್ದವು. ಇದರಿಂದಾಗಿ ಬಾಲಕ ಆಗಲೇ ತನ್ನ ಎರಡೂ ಕಾಲುಗಳನ್ನು ಕಳೆದುಕೊಂಡ.

ಇದು ಭಾರಿ ಸುದ್ದಿಯಾದ್ದರಿಂದ ಹೆದರಿದ ಆತನ ಪೋಷಕರು, ಚಿಕಿತ್ಸೆ ಕೊಡಿಸಿ, ಕೃತಕ ಕಾಲನ್ನು ಜೋಡಿಸಿದರು. ಕೃತಕ ಕಾಲಿನ ಮೂಲಕವೇ ಬೆಳೆದ ಈ ಬಾಲಕನ ಮನೋಸ್ಥೈರ್ಯ ಮಾತ್ರ ಎಂಥವರನ್ನೂ ದಿಗಿಲಾಗಿಸುತ್ತದೆ.

ಇದೀಗ ಈ ಬಾಲಕನಿಗೆ ಕೇವಲ ಐದು ವರ್ಷ. ದಿನವೂ ಈಗ 10 ಕಿ.ಮೀ ಕೃತಕ ಕಾಲುಗಳ ನಹಾಯದಿಂದ ನಡೆಯುತ್ತಿದ್ದಾನೆ. ಸಾಮಾಜಿಕ ಜಾಲತಾಣಗಳಲ್ಲಿ ಚಾಲೆಂಜ್​ ನೀಡುವ ಟ್ರೆಂಡ್​ ಶುರುವಾಗಿದೆ. ಆದರೆ ಅದು ಬೇರೆಯವರಿಗೆ ನೀಡುವ ಚಾಲೆಂಜ್​. ಆದರೆ ಈ ಪುಟಾಣಿ, ತನಗೆ ತಾನೇ ಚಾಲೆಂಜ್​ ಕೊಟ್ಟಿದ್ದಾನೆ. ಅದೇ ನಡೆಯುವ ಚಾಲೆಂಜ್​.

ಅಷ್ಟಕ್ಕೂ ಈತ ತನ್ನ ಕಾಲ ಮೇಲೆ ನಿಂತುಕೊಳ್ಳುವ ಸಾಮರ್ಥ್ಯಕ್ಕಾಗಿ ನಡೆಯುವುದನ್ನು ರೂಢಿಸಿಕೊಂಡಿದ್ದಾನೆ ಎಂದುಕೊಂಡರೆ ಅದು ಸಂಪೂರ್ಣ ಸತ್ಯವಲ್ಲ. ಏಕೆಂದರೆ, ಈತ ನಡೆಯುತ್ತಿರುವ ಹಿಂದೆ ದೊಡ್ಡ ಉದ್ದೇಶವೇ ಇದೆ. ಅದೇನೆಂದರೆ, ಎವೆಲಿನಾ ಲಂಡನ್ ಆಸ್ಪತ್ರೆಗೆಂದು 500 ಪೌಂಡ್‌ನಷ್ಟು ಹಣವನ್ನು ಸಂಗ್ರಹಿಸುವ ಉದ್ದೇಶ ಹೊಂದಿದ್ದಾನೆ ಈ ಪುಟಾಣಿ. ತನ್ನಂತೆಯೇ ಕಾಲು ಇಲ್ಲದವರಿಗೆ ಕೃತಕ ಕಾಲನ್ನು ಉಚಿತವಾಗಿ ನೀಡುವ ಉದ್ದೇಶದಿಂದ ಬಾಲಕ ನಡೆದುಕೊಂಡು ಹೋಗಿ ನಿಧಿ ಸಂಗ್ರಹ ಮಾಡುತ್ತಿದ್ದಾನೆ.

ಒಳ್ಳೆಯ ಮನಸ್ಸಿನಿಂದ ಕೆಲಸ ಮಾಡಿದರೆ, ಶ್ರೇಯಸ್ಸು ಸಿಕ್ಕೇ ಸಿಗುತ್ತದೆ ಎನ್ನುವುದಕ್ಕೆ ಈ ಬಾಲಕನೇ ಉದಾಹರಣೆ. ಏಕೆಂದರೆ ಈಗಾಗಲೇ ಈತ 2,500 ಪೌಂಡ್ (ಸುಮಾರು ಎರಡೂವರೆ ಲಕ್ಷ ರೂಪಾಯಿ) ಸಂಗ್ರಹಿಸಿದ್ದಾನೆ. ಈತನ ಸಾಧನೆ ಹಾಗೂ ಒಳ್ಳೆಯ ಉದ್ದೇಶ ಕಂಡು ಜನರು ಬಾಲಕನಿಗೆ ಧನ ಸಹಾಯ ಮಾಡುತ್ತಿದ್ದಾರೆ.

ಈತನ ಕುರಿತು ಪಾಲ್​ ಬೇಬಿ ಎನ್ನುವವರು ಟ್ವೀಟ್​ ಮಾಡಿದ್ದು, ಇದೀಗ ಭಾರಿ ವೈರಲ್​ ಆಗಿದೆ. ಬಾಲಕನ ಕಾರ್ಯಕ್ಕೆ ಶ್ಲಾಘನೆಗಳ ಸುರಿಮಳೆಯೇ ಬರುತ್ತಿದೆ (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net