ಓದಿನ ಜತೆಗೆ ಪ್ರಾಪಂಚಿಕ ಜ್ಞಾನ ಅಗತ್ಯ

upanyasa
ಮೋಹನ್‌ಕುಮಾರ್
Published on

ಶಿವಮೊಗ್ಗ: ಜಗತ್ತಿನ ಎಲ್ಲ ವೃತ್ತಿಗಳಲ್ಲಿ ಅತ್ಯಂತ ಶ್ರೇಷ್ಟ, ಗೌರವಯುತ ಕೆಲಸ ಎಂದರೆ ಶಿಕ್ಷಕ ವೃತ್ತಿ. ಅಕ್ಷರದಾನ ಮಾಡುವಂತಹ ಪವಿತ್ರ ಕಾರ್ಯವಿದು ಎಂದು ಶಿವಮೊಗ್ಗ ಸ್ಪರ್ಧಾ ಕರ್ನಾಟಕ ಅಕಾಡೆಮಿಯ ಮೋಹನ್‌ಕುಮಾರ್ ಹೇಳಿದರು.

ಶಿಕಾರಿಪುರದ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆ, ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯ, ಐಕ್ಯೂಎಸಿ ಸಂಯೋಜಿತ ಮತ್ತು ಉದ್ಯೋಗ ಮಾರ್ಗದರ್ಶನ ಘಟಕದಿಂದ ಆಯೋಜಿಸಿದ್ದ ಪುನಶ್ಚೇತನ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಎದೆಯೊಳಗೆ ಅಕ್ಷರ ಮೂಡಿಸಿ, ಸಾಕ್ಷರರನ್ನಾಗಿ ಮಾಡುವ ಭವಿಷ್ಯದ ಶಿಕ್ಷಕರಾದ ನೀವು ಹೆಚ್ಚು ಅಧ್ಯಯನದ ಕಡೆಗೆ ನಿಮ್ಮನ್ನು ತೊಡಗಿಸಿಕೊಳ್ಳಬೇಕು. ಅಧ್ಯಯನ ಮಾತ್ರದಿಂದ ಉತ್ತಮ ಅಧ್ಯಾಪನ ಮಾಡಲು ಸಾಧ್ಯ ಎಂದರು.

ಬದಲಾಗುತ್ತಿರುವ ಶೈಕ್ಷಣಿಕ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳು ನಿರಂತರ ಅಭ್ಯಾಸ ಮಾಡಿದರೆ ಮಾತ್ರ ಯಶಸ್ಸನ್ನು ಪಡೆಯಲು ಸಾಧ್ಯ. ಬಿ.ಇಡಿ ಮುಗಿದ ನಂತರ ಮುಂದೇನು, ಸರ್ಕಾರಿ ಹುದ್ದೆ ಪಡೆಯುವುದು ಹೇಗೆ ಎಂಬ ಪ್ರಶ್ನೆಗಳನ್ನು ಇಟ್ಟುಕೊಂಡು ಜೀವನದ ಪ್ರಶ್ನೆಗಳನ್ನು ಕಂಡುಕೊಳ್ಳುವ ಅನಿವಾರ್ಯತೆ ಇದೆ ಎಂದು ಹೇಳಿದರು.

ನಮ್ಮಲ್ಲಿ ಮುಖ್ಯವಾಗಿ ಸಂಕಲ್ಪಶಕ್ತಿ ವೃದ್ಧಿ ಆಗಬೇಕು. ನಾವೊಬ್ಬ ಶ್ರೇಷ್ಠ ಗುರಿಕಾರನಾದಾಗ ಮಾತ್ರ ಯಶಸ್ಸು ನಮ್ಮನ್ನು ಹಿಂಬಾಲಿಸುತ್ತದೆ. ಸಿಇಟಿ ಮತ್ತು ಟಿಇಟಿ, ಯುಪಿಎಸ್‌ಇ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳುವಾಗ ಆ ಬಗ್ಗೆ ನಾವು ಅತ್ಯಂತ ಗಂಭೀರವಾಗಿ ಪರಿಗಣಿಸಿ, ಮುಂದಡಿ ಇಡಬೇಕು ಎಂದು ಹೇಳಿದರು.

ಸ್ಪರ್ಧಾತ್ಮಕ ಯುಗದಲ್ಲಿ ಕೇವಲ ಪಠ್ಯವನ್ನು ಮಾತ್ರ ಓದದೇ ಪ್ರಾಪಂಚಿಕ ಜ್ಞಾನವನ್ನು ತಿಳಿದುಕೊಳ್ಳಬೇಕು. ಅಬ್ದುಲ್ ಕಲಾಂ ಹೇಳಿದಂತೆ ನಾನು ಉತ್ತಮ, ನಾನು ಮಾಡುತ್ತೇನೆ, ದೇವರು ನನ್ನೊಂದಿಗೆ ಇದ್ದಾನೆ, ನಾನು ಈ ಕೆಲಸವನ್ನು ಮಾಡಿಯೇ ತೀರುತ್ತೇನೆ ಎಂಬ ಸಂದೇಶ ನಮಗೆ ನಿತ್ಯಮಂತ್ರವಾಗಬೇಕು ಎಂದರು.

ಸಹಾಯಕ ಪ್ರಾಧ್ಯಾಪಕ ಡಾ. ವೈ.ದೇವರಾಜ ಮಾತನಾಡಿ, ಬದಲಾಗುತ್ತಿರುವ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪರೀಕ್ಷೆಗಳು ಅನಿವಾರ್ಯ. ಸವಾಲುಗಳನ್ನು ಎದುರಿಸುವಂತೆ ವಿದ್ಯಾರ್ಥಿಗಳನ್ನು ತಯಾರಿ ಮಾಡುವ ಗುರುತರ ಜವಾಬ್ದಾರಿ ನಮ್ಮ ಶಿಕ್ಷಣ ಮಹಾವಿದ್ಯಾಲಯದ್ದಾಗಿದೆ. ಪಠ್ಯದ ಜತೆಗೆ ಭವಿಷ್ಯದಲ್ಲಿ ಎದುರಿಸಬಹುದಾದ ಜೀವನದ ಸವಾಲುಗಳನ್ನೂ ಎದುರಿಸಲು ಮಕ್ಕಳನ್ನು ತಯಾರು ಮಾಡುವುದೂ ಅಷ್ಟೇ ಮುಖ್ಯ ಎಂದರು. ಡಾ. ಕೆ.ಎಸ್.ಕಿರಣ್ ಕುಮಾರ್, ಡಾ. ಎಚ್.ರವಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net