

ಬೆಂಗಳೂರು: ರಾಜ್ಯದಲ್ಲಿ ರಸ್ತೆ ಅಪಘಾತ ಮತ್ತು ಸಾವು ನೋವು ತಡೆಗಟ್ಟುವ ನಿಟ್ಟಿನಲ್ಲಿ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿ ತರಲು ಪೊಲೀಸ್ ಇಲಾಖೆ ಮುಂದಾಗಿದೆ.
ಇತ್ತೀಚೆಗೆ ಹೆಚ್ಚು ಪ್ರಖರ ಬೆಳಕು ಹೊರಹಾಕುವ ಮತ್ತು ಕಣ್ಣು ಕುಕ್ಕುವ ಎಲ್‌ಇಡಿ ದೀಪ ಅಳವಡಿಸಿದ ವಾಹನಗಳ ವಿರುದ್ಧ ರಾಜ್ಯ ವ್ಯಾಪಿ ಕೇಸ್ ದಾಖಲಿಸಲಾಗುತ್ತಿದೆ. ಇದೀಗ ವಿರುದ್ಧ ದಿಕ್ಕು, ಫುಟ್ ಪಾತ್ ಮೇಲೆ ವಾಹನ ಚಾಲನೆ ವಿರುದ್ಧ ಆಗಸ್ಟ್ 1ರಿಂದ ವಿಶೇಷ ಕಾರ್ಯಾಚರಣೆ ನಡೆಸಲು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಸಂಚಾರ ಮತ್ತು ರಸ್ತೆ ಸುರಕ್ಷತೆ) ಅಲೋಕ್‌ಕುಮಾರ್ ಆದೇಶಿಸಿದ್ದಾರೆ.
ರಸ್ತೆ ಅಪಘಾತಗಳನ್ನು ತಡೆಗಟ್ಟುವ ಉದ್ದೇಶಕ್ಕೆ ಎಲ್‌ಇಡಿ ದೀಪ ಅಳವಡಿಸಿದ್ದ ವಾಹನಗಳ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸುವಂತೆ ಸೂಚನೆ ನೀಡಲಾಗಿತ್ತು. ಬೆಂಗಳೂರು ನಗರ, ಮಂಗಳೂರು ನಗರ, ಹುಬ್ಬಳ್ಳಿ-ಧಾರವಾಡ, ಮೈಸೂರು ನಗರ ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಹೆಚ್ಚು ಪ್ರಕರಣ ದಾಖಲಿಸಿರುವುದು ಶ್ಲಾಘನೀಯ ವಿಷಯವಾಗಿದೆ.
ಇದೇ ರೀತಿ ವಿರುದ್ಧ ದಿಕ್ಕಿನಲ್ಲಿ ವಾಹನ ಚಾಲನೆ, ಫುಟ್ ಪಾತ್ ಮೇಲೆ ವಾಹನ ಚಾಲನೆ ಬಗ್ಗೆ ವಿಶೇಷ ಕಾರ್ಯಾಚರಣೆ ನಡೆಸುವುದುರು. ಜೊತೆಗೆ ದೋಷಪೂರಿತ ನಂಬರ್ ಪ್ಲೇಟ್‌ಗಳ ವಿರುದ್ಧ ಆಗಸ್ಟ್ 1 ರಿಂದ ರಾಜ್ಯ ವ್ಯಾಪಿ ವಿಶೇಷ ಕಾರ್ಯಾಚರಣೆ ನಡೆಸಬೇಕು.
ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಿರುದ್ಧ ದಿಕ್ಕಿನಲ್ಲಿ ವಾಹನ ಚಾಲನೆ ಜೀವಕ್ಕೆ ಅಪಾಯವಾಗಿದೆ. ಆದರಿಂದ ಹೆದ್ದಾರಿಗಳ ಮೇಲೆ ವಿರುದ್ಧ ದಿಕ್ಕಿನಲ್ಲಿ ಚಾಲನೆ ಮಾಡುವ ವಾಹನ ಚಾಲಕ/ಸವಾರರ ವಿರುದ್ಧ ಬಿಎನ್‌ಎಸ್ 281 ರ ಅನ್ವಯ ಮತ್ತು ಭಾರತೀಯ ಮೋಟಾರು ವಾಹನ ಕಾಯ್ದೆ 184 ಅನ್ವಯ ಎಫ್ ಐಆರ್ ದಾಖಲಿಸು ಕ್ರಮ ಕೈಗೊಳ್ಳಲು ಅಲೋಕ್ ಕುಮಾರ್ ಪೊಲೀಸರಿಗೆ ಸೂಚಿಸಿದ್ದಾರೆ.
ಬೆಂಗಳೂರು ನಗರ ಸೇರಿದಂತೆ ನಗರ ಪ್ರದೇಶದಲ್ಲಿ ಫುಟ್ ಪಾತ್ ಮೇಲೆ ದ್ವಿಚಕ್ರ ವಾಹನ ಚಾಲನೆ ಮಾಡುವುದು ಸಾಮಾನ್ಯವಾಗಿದೆ. ಇಂತವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಇದಕ್ಕೂ ಮೊದಲು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶಕ್ಕೆ ಸಾಮಾಜಿಕ ಜಾಲತಾಣ, ಕರಪತ್ರ ವಿತರಣೆ ಮತ್ತು ಧ್ವನಿ ವರ್ಧಕಗಳಲ್ಲಿ ತಿಳುವಳಿಕೆ ನೀಡಬೇಕು. ಬಳಿಕ ಆ.1ರಿಂದ ವಿಶೇಷ ಕಾರ್ಯಾಚರಣೆ ಕೈಗೊಂಡು ತಿಂಗಳ ಅಂತ್ಯಕ್ಕೆ ವರದಿ ಸಲ್ಲಿಸುವಂತೆ ಎಲ್ಲ ಘಟಕಗಳಿಗೆ ಎಡಿಜಿಪಿ ಅಲೋಕ್‌ಕುಮಾರ್ ಆದೇಶಿಸಿದ್ದಾರೆ.