

ಅಮರಾವತಿ: ಐಕಾನ್ ಸ್ಟಾರ್ ಅಲ್ಲು ಅರ್ಜುನ್ ತಮ್ಮ ಸ್ನೇಹಿತೆ, ವೈಎಸ್‌ಆರ್‌ಸಿಪಿ ಅಭ್ಯರ್ಥಿ ಶಿಲ್ಪಾ ರವಿಚಂದ್ರ ಕಿಶೋರ್ ರೆಡ್ಡಿ ಅವರ ಗೆಲುವಿಗಾಗಿ ನಂದ್ಯಾಲದಲ್ಲಿ ಪ್ರಚಾರ ನಡೆಸಿದ್ದು, ವ್ಯಾಪಕ ಟೀಕೆಗೆ ಗುರಿಯಾಗಿದ್ದರು. ಆದರೆ ಅವರು ನಡೆಸಿದ ಪ್ರಚಾರ ಶಿಲ್ಪಾಗೆ ಪ್ರಯೋಜನಕ್ಕೆ ಬಂದಿಲ್ಲ. ಈಗ ಮತ್ತೊಮ್ಮೆ ಅವರು ನೆಟ್ಟಿಗರ ಟ್ರೋಲ್ಗೆ ಗುರಿಯಾಗುತ್ತಿದ್ದಾರೆ.
ಈ ಬಾರಿಯ ಚುನಾವಣೆಯಲ್ಲಿ ಚಿತ್ರರಂಗದ ಹಲವು ನಟರು ಕೆಲ ರಾಜಕೀಯ ಪಕ್ಷಗಳ ಪರ ಪ್ರಚಾರ ನಡೆಸಿದ್ದಾರೆ. ಆದರೆ ಅತಿ ಹೆಚ್ಚು ಟೀಕೆಗೆ ಗುರಿಯಾದವರು ಅಲ್ಲು ಅರ್ಜುನ್. ಏಕೆಂದರೆ ಅವರ ಹತ್ತಿರದ ಸಂಬಂಧಿ, ನಟ ಮತ್ತು ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಅವರು ಪಿಠಾಪುರದಿಂದ ಸ್ಪರ್ಧಿಸುತ್ತಿರುವಾಗ, ಅವರ ಪರ ಪ್ರಚಾರ ಮಾಡುವ ಬದಲು, ನಂದ್ಯಾಲದಲ್ಲಿ ವೈಎಸ್‌ಆರ್‌ಸಿಪಿ ಅಭ್ಯರ್ಥಿ ಶಿಲ್ಪಾ ಪರ ಪ್ರಚಾರಕ್ಕೆ ತೆರಳಿ ಈಗ ಮುಖಭಂಗ ಅನುಭವಿಸುವಂತಾಗಿದೆ.
ಶಿಲ್ಪಾ ಪ್ರಚಾರಕ್ಕೆ ಆಹ್ವಾನಿಸದಿದ್ದರೂ, ಅಲ್ಲುಅರ್ಜುನ್ ಗೆಲ್ಲಬೇಕೆಂದು ತಾನೇ ಸ್ವಿಚ್ಚೆಯಿಂದ ಹೋಗಿ ಪ್ರಚಾರ ನಡೆಸಿದ್ದರು. ಆದರೆ ಈ ಪ್ರವಾಸ ಬಹಳ ವಿವಾದಾತ್ಮಕವಾಯಿತು. ಚುನಾವಣಾಧಿಕಾರಿಗಳಿಗೆ ಮತ್ತು ಪೊಲೀಸರಿಗೆ ತಿಳಿಸದೆ ಕನಿಷ್ಠ ಚುನಾವಣಾ ಆಯೋಗಕ್ಕೂ ತಿಳಿಸದೆ ಅಲ್ಲು ಅರ್ಜುನ್ ನಂದ್ಯಾಲಕ್ಕೆ ತೆರಳಿ ಅಲ್ಲಿ ನೂರಾರು ಅಭಿಮಾನಿಗಳೊಂದಿಗೆ ಪ್ರಚಾರ ನಡೆಸಿದ್ದು, ದೊಡ್ಡ ವಿವಾದವಾಗಿತ್ತು. ಈ ಸಂಬಂಧ ಆಯೋಗ ದೂರನ್ನೂ ದಾಖಲಿಸಿತ್ತು.
ಇದು ಮೆಗಾಸ್ಟಾರ್ ಚಿರಂಜೀವಿ ಕುಟುಂಬಕ್ಕೆ ಸ್ವಲ್ಪ ಹಿನ್ನಡೆ ಉಂಟಾಗಿತ್ತು. ಮೆಗಾ ಅಭಿಮಾನಿಗಳು ಅಲ್ಲು ಅರ್ಜುನ್ ನಡೆಯನ್ನು ಟ್ರೋಲ್ ಮಾಡಿದ್ದರು. ಅದೇ ಸಮಯಕ್ಕೆ ಅಲ್ಲು ಅರ್ಜುನ್ ಮಾಡಿದ ತಪ್ಪಿಗೆ ಅವರ ತಂತೆ ಅಲ್ಲು ಅರವಿಂದ್ ರಾಮ್ ಚರಣ್ ಮತ್ತು ಸುರೇಖಾ ಜೊತೆಗೆ ಪಿಠಾಪುರಕ್ಕೆ ತೆರಳಿ ಪವನ್ ಕಲ್ಯಾಣ್ ಗೆ ಶುಭಾಶಯ ಕೋರಿದ್ದರು.
ಅಲ್ಲು ಅರ್ಜುನ್ ಭೇಟಿಯಿಂದ ಗೆಳತಿಗೆ ಯಾವುದೇ ಪ್ರಯೋಜನವಾಗಲಿಲ್ಲ. ಆಕೆ ಸೋತಿದ್ದಾರೆ. ಅಲ್ಲಿ ತೆಲುಗು ದೇಶಂ ಅಭ್ಯರ್ಥಿ ಎನ್.ಫಾರೂಕ್ ಗೆದ್ದಿದ್ದು, ಅಲ್ಲು ಅರ್ಜುನ್ ನಂದ್ಯಾಲ ಪ್ರಚಾರ ಬರೀ ವಿವಾದಗಳಲ್ಲಿಯೇ ಮುಗಿದಿದೆ.
ಅಲ್ಲು ಅರ್ಜುನ್ ನಿಷ್ಪ್ರಯೋಜಕನಾಗಿದ್ದಾನೆ ಎಂಬ ಮಾತು ಇಂಡಸ್ಟ್ರಿಯಲ್ಲಿ ಕೇಳಿ ಬರುತ್ತಿದೆ. ಹಾಗಾಗಿಯೇ ಪವನ್ ಕಲ್ಯಾಣ್ ಗೆದ್ದಿದ್ದಾರೆ ಎಂದು ನೆಟ್ಟಿಗರು ಅಭಿಪ್ರಾಯ ಹೊರಹಾಕುತ್ತಿದ್ದಾರೆ. ಆದರೆ ಫಲಿತಾಂಶ ಹೊರಬರುತ್ತಿದ್ದಂತೆ ಅಲ್ಲು ಅರ್ಜುನ್ ಸಾಮಾಜಿಕ ಜಾಲತಾಣ 'ಎಕ್ಸ್'ನ ತನ್ನ ಖಾತೆಯಲ್ಲಿ ಪವನ್ ಕಲ್ಯಾಣ್ ಅವರನ್ನು ಅಭಿನಂದಿಸಿ ತಕ್ಷಣವೇ ಪೋಸ್ಟ್ ಮಾಡಿದ್ದಾರೆ. ಇದು ಚರ್ಚೆಗೆ ಗ್ರಾಸೊದಗಿಸಿದೆ.