ಪ್ರಭಾಸ್​ ಮುಂದೆ ಹೃತಿಕ್​ ರೋಷನ್​ ಏನೇನೂ ಅಲ್ಲ! ಏಟಿಗೆ ಎದುರೇಟು ಅಂದ್ರೆ ಇದೇನಾ?

ವಿಜಯವಾಣಿ - 2024-08-23T091009.053
Published on

ತೆಲಂಗಾಣ: ಇತ್ತೀಚೆಗಷ್ಟೇ ನಡೆದ ಸಂದರ್ಶನವೊಂದರಲ್ಲಿ ಬಾಲಿವುಡ್​ ನಟ ಅರ್ಷದ್​ ವಾರ್ಸಿ ಮಾತನಾಡಿ, 'ಕಲ್ಕಿ 2898 ಎಡಿ' ಚಿತ್ರದಲ್ಲಿ ಟಾಲಿವುಡ್​ನ ಡಾರ್ಲಿಂಗ್ ನಟ ಪ್ರಭಾಸ್​ ಅಭಿನಯವನ್ನು ಟೀಕಿಸಿ, ಜೋಕರ್​ ಎಂದು ಕರೆದಿದ್ದರು. ಅರ್ಷದ್​ ಅವರ ಈ ಹೇಳಿಕೆ ವೈರಲ್​ ಆಗುತ್ತಿದ್ದಂತೆ ಅಭಿಮಾನಿಗಳು ಪ್ರಭಾಸ್​ ಪರ ಧ್ವನಿ ಎತ್ತಿದ್ದು, ತಕ್ಷಣವೇ ಅರ್ಷದ್ ಪ್ರಭಾಸ್​ರ ಬಳಿ​ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು. ತೆಲುಗು ಚಿತ್ರರಂಗದ ರೆಬೆಲ್​ ಸ್ಟಾರ್​ ವಿರುದ್ಧ ವ್ಯಂಗ್ಯವಾಡಿದ ಬಾಲಿವುಡ್​ ನಟನ ವಿರುದ್ಧ ಇದೀಗ ಸೌತ್​ ನಿರ್ಮಾಪಕರು ಸೇರಿದಂತೆ ಸ್ಟಾರ್​ ಹೀರೋಗಳು ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಇವರ ಬೆನ್ನಲ್ಲೇ ರಾಷ್ಟ್ರಪ್ರಶಸ್ತಿ ವಿಜೇತ ನಟ, ಐಕಾನ್ ಸ್ಟಾರ್​ ಅಲ್ಲು ಅರ್ಜುನ್ ಈ ಹಿಂದೆ ಪ್ರಭಾಸ್ ಮತ್ತು ಹೃತಿಕ್ ರೋಷನ್ ಹೋಲಿಸಿ ಮಾತನಾಡಿದ್ದ ವಿಡಿಯೋವೊಂದು ಈ ಸಮಯಕ್ಕೆ ಸರಿಯಾಗಿ ಮುನ್ನೆಲೆಗೆ ಬಂದಿದ್ದು, ​ ಸದ್ಯ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಸದ್ಯ ಪ್ರಭಾಸ್​ ಪರ ಬ್ಯಾಟ್ ಬೀಸುತ್ತಿರುವ ಟಾಲಿವುಡ್​ ನಟರ ಮಧ್ಯೆ ಇದೀಗ ಅಲ್ಲು ಅರ್ಜುನ್ ಧ್ವನಿ ಕೂಡ ಪರೋಕ್ಷವಾಗಿ ಸೇರಿಕೊಂಡಿದ್ದು, ಅರ್ಷದ್​ ಹೇಳಿಕೆಗೆ ತಿರುಗೇಟು ನೀಡಲು ಹಾಗೂ ಬಾಲಿವುಡ್ ಮಂದಿಗೆ ಭಾರೀ ಮುಖಭಂಗ ಉಂಟುಮಾಡುವ ಸಲುವಾಗಿ ಪ್ರಭಾಸ್​ಗೆ ಹೋಲಿಸಿದರೆ ಹೃತಿಕ್ ರೋಷನ್ ಏನೇನೂ ಅಲ್ಲ ಎಂದು ಅಲ್ಲು ಅರ್ಜುನ್​ ಹೇಳಿದ್ದ ಹಳೆಯ ವಿಡಿಯೋವೊಂದು ಸದ್ಯ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಈ ತುಣುಕನ್ನು ನೋಡಿದ ನೆಟ್ಟಿಗರು ಅಲ್ಲು ಅರ್ಜುನ್​ ಅಂದೇ ಇವರಿಗೆ ತಕ್ಕ ಉತ್ತರ ನೀಡಿದ್ದಾರೆ ಅಂದಮೇಲೆ ಈಗ ಇದಕ್ಕೆ ಪ್ರತಿಕ್ರಿಯಿಸುವ ಅವಕಾಶವಿಲ್ಲ ಎಂದು ಕಮೆಂಟ್ ಮಾಡಿದ್ದಾರೆ.

ವಿಡಿಯೋ ತುಣುಕಿನಲ್ಲಿ ಅಲ್ಲು ಅರ್ಜುನ್​, "ಪ್ರಭಾಸ್​ ಮಾಡುವ ಫೈಟಿಂಗ್ ಸೀನ್​, ಸಾಹಸಮಯ ದೃಶ್ಯಗಳಲ್ಲಿ ಅಭಿನಯಿಸುವಲ್ಲಿ ಅವರೇ ನಂಬರ್ ಒನ್. ಬಾಲಿವುಡ್​ ನಟರಾದ ಹೃತಿಕ್ ರೋಷನ್​ ನಮ್ಮ ಪ್ರಭಾಸ್​ ಮುಂದೆ ಏನೇನೂ ಅಲ್ಲ" ಎಂದು ಎಸ್​​ಎಸ್​. ರಾಜಮೌಳಿ ನೋಡುತ್ತ ಹೇಳಿದರು. ಈ ವೇಳೆ ಕ್ಯಾಮರಾ ಪ್ರಭಾಸ್​ನತ್ತ ಪ್ಯಾನ್​ ಮಾಡಿದಾಗ ನಟನ ಮುಗುಳು ನಗೆ ನೋಡುಗರ ಹುಬ್ಬೇರಿಸುತ್ತದೆ. ಸದ್ಯ ಹಳೆಯ ವಿಡಿಯೋವೊಂದು ಇಷ್ಟರ ಮಟ್ಟಿಗೆ ಚರ್ಚೆಯಾಗುತ್ತಿದ್ದು, ಅಲ್ಲು ಅರ್ಜುನ್ ವಿರುದ್ಧ ಹೃತಿಕ್ ಅಭಿಮಾನಿಗಳು ತೀವ್ರ ಗರಂ ಆಗಿದ್ದಾರೆ. ಅರ್ಷದ್​ ಕೊಟ್ಟ ಒಂದೇ ಒಂದು ಹೇಳಿಕೆ ಸದ್ಯ ಇಷ್ಟೆಲ್ಲಾ ವಿವಾದವನ್ನೇ ಹುಟ್ಟುಹಾಕಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net