'ಪುಷ್ಪ 2' ಗೆಲುವಿನ ಬೆನ್ನಲ್ಲೇ ರಾಜಕೀಯಕ್ಕೆ ಎಂಟ್ರಿ ಕೊಟ್ರಾ ಅಲ್ಲು ಅರ್ಜುನ್​? ಪ್ರಶಾಂತ್ ಕಿಶೋರ್ ಜತೆ ಚರ್ಚೆ!? | Allu Arjun ​

ವಿಜಯವಾಣಿ - 2024-12-12T203028.442
Published on

ಆಂಧ್ರಪ್ರದೇಶ: ಪ್ರಸ್ತುತ ಸುಕುಮಾರ್​ ನಿರ್ದೇಶನದ ಪ್ಯಾನ್ ಇಂಡಿಯಾ 'ಪುಷ್ಪ 2' ಚಿತ್ರವು ಜಾಗತಿಕ ಬಾಕ್ಸ್ ಆಫೀಸ್​ನಲ್ಲಿ ಅಬ್ಬರಿಸುತ್ತಿದ್ದು, ಹಿಂದಿನ ದಾಖಲೆಗಳನ್ನು ಹಿಂದಿಕ್ಕುವಲ್ಲಿ ಮುಂಚೂಣಿಯಲ್ಲಿದೆ. ಟಾಲಿವುಡ್​ ಐಕಾನ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ಮತ್ತು ರಶ್ಮಿಕಾ ಮಂದಣ್ಣ ಮುಖ್ಯಭೂಮಿಕೆಯಲ್ಲಿರುವ ಈ ಸಿನಿಮಾಗೆ ಸಿನಿಪ್ರೇಕ್ಷಕರು ಫಿದಾ ಆಗಿದ್ದಾರೆ. ಬಿಡುಗಡೆಗೊಂಡ ಮೊದಲ ವಾರಕ್ಕೆ ಒಂದು ಸಾವಿರ ಕೋಟಿ ರೂ. ಕ್ಲಬ್​ ಸೇರಿರುವ ಪುಷ್ಪ 2, ಅಲ್ಲು ಅರ್ಜುನ್​ಗೆ ಮತ್ತೊಂದು ಭರ್ಜರಿ ಗೆಲುವು ನೀಡಿದೆ. ಸದ್ಯ ಚಿತ್ರದ ಯಶಸ್ಸಿನಲ್ಲಿರುವ ನಟ, ರಾಜಕೀಯ ಅಖಾಡಕ್ಕಿಳಿಯಲಿದ್ದಾರೆ ಎಂಬ ಸುದ್ದಿ ಇದೀಗ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಿದೆ.

ಇಂದು ಬೆಳಗ್ಗೆಯಿಂದಲೇ ಅಲ್ಲು ಅರ್ಜುನ್ ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆ ಎಂಬ ಸುದ್ದಿ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಸ್ಟೈಲಿಶ್ ಸ್ಟಾರ್​ ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರೊಂದಿಗೆ ರಾಜಕೀಯ ಪಕ್ಷವನ್ನು ಕಟ್ಟುವ ವಿಚಾರವಾಗಿ ಮಾತುಕತೆ ನಡೆಸಿದ್ದಾರೆ ಎಂಬ ಸುದ್ದಿ ವರದಿಯಾಗಿದೆ. ಸಾಮಾಜಿಕ ಕಾರ್ಯಗಳಲ್ಲಿ, ಜನಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ ಎಂದು ಕಿಶೋರ್​ ಅಲ್ಲು ಅರ್ಜುನ್​ಗೆ ಹೇಳಿದ್ದಾರೆ ಎನ್ನಲಾಗಿದೆ. ಆದರೆ, ಈ ಬಗ್ಗೆ ಅಲ್ಲು ಅರ್ಜುನ್​ ಅವರ ತಂಡ ಪ್ರತಿಕ್ರಿಯಿಸಿದ್ದು, ವದಂತಿಗಳನ್ನು ನಂಬಬೇಡಿ ಎಂದು ಸ್ಪಷ್ಟವಾಗಿ ಹೇಳಿದೆ.

ತಂಡ ಕೊಟ್ಟ ಸ್ಪಷ್ಟನೆ

ಇದೆಲ್ಲ ಒಂದು ಸುಳ್ಳು ಸುದ್ದಿ. ಮಾಧ್ಯಮಗಳು ಆದಷ್ಟು ಸತ್ಯ ಸಂಗತಿಗಳನ್ನು ಅಳೆದು ತೂಗಿ ನೋಡಬೇಕು. ಸುಖಾಸುಮ್ಮನೆ ವದಂತಿಗಳನ್ನು ನಂಬಿ, ತಪ್ಪು ಮಾಹಿತಿ ಹರಡಬೇಡಿ. ಸರಿಯಾದ ಮಾಹಿತಿಗಾಗಿ ಅವರ ಅಧಿಕೃತ ಜಾಲತಾಣದ ಖಾತೆ ಅಥವಾ ನಟನ ಹೇಳಿಕೆಯನ್ನು ಪರಿಗಣಿಸಿ. ಇದೊಂದು ಫೇಕ್ ನ್ಯೂಸ್ ಅಲ್ಲದೆ ಬೇರೇನೂ ಅಲ್ಲ ಎಂದು ಅಲ್ಲು ಅರ್ಜುನ್​ ತಂಡ ಟ್ವೀಟ್ (ಪ್ರಸ್ತುತ ಎಕ್ಸ್​) ಮಾಡಿ ತಿಳಿಸಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net