ಸರ್ವಪಕ್ಷ ಸಭೆಯಲ್ಲಿ ಅನುಭವ ಧಾರೆಎರೆದ ಆರು ಮಾಜಿ ಸಿಎಂಗಳು!

IMG-20230823-WA0015 (1)
Published on

ಬೆಂಗಳೂರು: ಕಾವೇರಿ ‌ನದಿ ಹಾಗೂ ಮಹದಾಯಿ ವಿಚಾರದಲ್ಲಿ ನಡೆದಿರುವ ಸರ್ವಪಕ್ಷ ಸಭೆಯಲ್ಲಿ ಆರು ಮಾಜಿ ಮುಖ್ಯಮಂತ್ರಿಗಳು ತಮ್ಮ ಅನುಭವವನ್ನು ಸರ್ಕಾರಕ್ಕೆ ಧಾರೆ ಎರೆದಿದ್ದಾರೆ.

ಕಾವೇರಿ ನೀರಿಗಾಗಿ ತಮಿಳುನಾಡು ಸರ್ಕಾರ ಸುಪ್ರಿಂ‌ಮೆಟ್ಟಿಲೇರಿ ಒತ್ತಡ ತಂತ್ರ ಅನುಸರಿಸುತ್ತಿರುವ ಹಿನ್ನೆಲೆ ರಾಜ್ಯಕ್ಕೆ ಸಂಕಷ್ಟ ಪರಿಸ್ಥಿತಿ ಎದುರಾಗುತ್ತಿದ್ದು, ಈ ಕಾರಣಕ್ಕೆ ಸರ್ಕಾರ ಮುಂದೆ ಕೈಗೊಳ್ಳಬೇಕಾದ ನಿರ್ಧಾರದ ಬಗ್ಗೆ ಅಭಿಪ್ರಾಯ ಸಂಗ್ರಹಿಸಲು ಸರ್ವಪಕ್ಷ ಸಭೆ ಕರೆಯಲಾಗಿದೆ.

ಕಾವೇರಿ, ಮೇಕೆದಾಟು ಮತ್ತು ಮಹಾದಾಯಿ ಜಲ ವಿವಾದಗಳ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸರ್ವಪಕ್ಷ ಸಭೆ ಆರಂಭವಾಗಿದೆ.

ತಮ್ಮ ಅವಧಿಯಲ್ಲಿ ಕೈಗೊಂಡ ನಿರ್ಧಾರಗಳು, ಎದುರಾದ ಪರಿಸ್ಥಿತಿ, ಮುಂದೆ ಕೈಗೊಳ್ಳಬೇಕಾದ ತೀರ್ಮಾನದ ಬಗ್ಗೆ ಮಾಜಿ ಸಿಎಂಗಳು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ಸಭೆಯಲ್ಲಿ ಜಲ ಸಂಪನ್ಮೂಲ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್‌, ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಬಿ.ಎಸ್. ಯಡಿಯೂರಪ್ಪ, ಎಚ್.ಡಿ. ಕುಮಾರಸ್ವಾಮಿ, ಜಗದೀಶ ಶೆಟ್ಟರ್, ಡಿ.ವಿ. ಸದಾನಂದಗೌಡ, ವೀರಪ್ಪ ಮೊಯಿಲಿ, ಸಚಿವರಾದ ಎಚ್‌.ಕೆ. ಪಾಟೀಲ, ಚಲುವರಾಯಸ್ವಾಮಿ, ಡಾ. ಜಿ. ಪರಮೇಶ್ವರ, ಕೆ.ಜೆ. ಜಾರ್ಜ್‌, ಕೃಷ್ಣ ಬೈರೇಗೌಡ, ನವದೆಹಲಿಯಲ್ಲಿ ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ ಪಾಲ್ಗೊಂಡು ತಮ್ಮ ಅಭಿಪ್ರಾಯ ಮಂಡಿಸಿದ್ದಾರೆ.

ಎಲ್ಲ ಪಕ್ಷಗಳ ಶಾಸಕರು ಸಂಸದರು, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಡಾ. ರಜನೀಶ್‌ ಗೋಯಲ್‌, ಜಲ ಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್‌ ಸಿಂಗ್‌, ಅಡ್ವೊಕೇಟ್‌ ಜನರಲ್‌ ಶಶಿಕಿರಣ್‌ ಶೆಟ್ಟಿ, ಹಿರಿಯ ವಕೀಲರಾದ ಮೋಹನ್‌ ಕಾತರಕಿ ಮತ್ತು ಇತರ ಕಾನೂನು ತಜ್ಞರು, ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದು ತಮ್ಮ ಅನಿಸಿಕೆಯನ್ನು ಸರ್ಕಾರಕ್ಕೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net