

ಸಾಲವನ್ನು ಹೆಚ್ಚು ಮಾಡಿಕೊಳ್ಳುತ್ತ ಹೋಗುವುದು ಉತ್ತಮ ಅರ್ಥವ್ಯವಸ್ಥೆಯ ನಡೆ ಅಲ್ಲ. ಕಳೆದ ಹಲವು ವರ್ಷಗಳಿಂದ ಕೃಷಿ, ಗ್ರಾಮೀಣಾಭಿವೃದ್ಧಿಯ ಬಗ್ಗೆ ಮಾತನಾಡುತ್ತಿದ್ದೇವೆ. ಆದರೆ ಮತ್ತೆ ಮತ್ತೆ ಅದೇ ವಿಚಾರ ಹೇಳುವುದನ್ನು ನೋಡಿದಾಗ ತಳಮಟ್ಟದಲ್ಲಿ ಯೋಜನೆಗಳು ತಲುಪಿಲ್ಲ ಎಂಬುದು ಅರ್ಥವಾಗುತ್ತದೆ. ಬೊಮ್ಮಾಯಿ ಅವರು ಯೋಜನೆಗಳನ್ನು ತಳಮಟ್ಟಕ್ಕೆ ಹೇಗೆ ತಲುಪಿಸಲಿದ್ದಾರೆ ಎಂಬುದರ ಪ್ರಸ್ತಾಪ ಮಾಡಿಲ್ಲ. ಕಲ್ಯಾಣ ಕರ್ನಾಟಕ ಭಾಗಕ್ಕೆ ಸ್ವಲ್ಪ ಒತ್ತು ನೀಡಿದ್ದಾರೆ.
ಆದರೆ ಉಳಿದ ಪ್ರದೇಶಗಳ ಅಭಿವೃದ್ಧಿಗೆ ಒತ್ತು ಕಂಡು ಬರುತ್ತಿಲ್ಲ. ಗ್ರಾಮೀಣಾಭಿವೃದ್ಧಿಯ ವಿಚಾರಕ್ಕೆ ಬಂದಾಗ ಕೃಷಿ ಕ್ಷೇತ್ರಕ್ಕೆ ಸ್ವಲ್ಪ ಪ್ರಮಾಣದ ಒತ್ತು ಸಿಕ್ಕಿದೆ. ಕೃಷಿ ವಲಯದಲ್ಲಿ ಕೆಲವೊಂದು ಯೋಜನೆಗಳನ್ನು ಜಾರಿಗೆ ತರುತ್ತಿರುವುದು ಸ್ವಾಗತಾರ್ಹ ಸಂಗತಿ. ಕೃಷಿ ಮತ್ತು ಪೂರಕ ವಲಯಕ್ಕೆ 33,700 ಕೋಟಿ ರೂ.ಗಳನ್ನು ಒದಗಿಸಿದ್ದಾರೆ. ಡೈರಿ ಸೆಕ್ಟರ್ಗೆ ನೀಡಿರುವ ಆದ್ಯತೆ ಒಳ್ಳೆಯದಾಗಿದೆ.