ಮೈತ್ರಿಯಿಂದ ಜೆಡಿಎಸ್‌ಗೆ ಮುಳುವು; ಪ್ರತ್ಯೇಕ ಸಭೆ ನಡೆಸಲು ನಿರ್ಧಾರ, ಸಾಮೂಹಿಕ ರಾಜೀನಾಮೆ ತೀರ್ಮಾನ

JDS Cartoon
Published on

ಬೆಂಗಳೂರು; ಬಿಜೆಪಿ ಜತೆಗಿನ ಮೈತ್ರಿ ಜೆಡಿಎಸ್‌ಗೆ ಮುಳುವಾಗಿದೆ. ಜಾತ್ಯತೀತ ಪಕ್ಷ ಎಂಬ ಹಿನ್ನೆಲೆಯಲ್ಲಿ ಬೆಂಬಲಿಸಿದ್ದ ಅಲ್ಪಸಂಖ್ಯಾತ ಸಮುದಾಯ ಜೆಡಿಎಸ್‌ನಿಂದ ದಿನೇ ದಿನೆ ದೂರ ಸರಿಯುತ್ತಿದೆ.

ಬಿಜೆಪಿ ಜತೆಗೆ ಮೈತ್ರಿ ೋಷಣೆಯಾದ ಮೇಲೆ ಒಬ್ಬರಾದ ಮೇಲೊಬ್ಬರಂತೆ ಜೆಡಿಎಸ್‌ನಲ್ಲಿರುವ ಮುಸ್ಲಿಂ ಮುಖಂಡರು ರಾಜೀನಾಮೆ ನೀಡುತ್ತಿದ್ದಾರೆ. ಈಗಾಗಲೇ ಇಬ್ಬರು ಪಕ್ಷದ ಪ್ರಮುಖ ಪದಾಧಿಕಾರಿಗಳು ಹುದ್ದೆ ತೊರೆದಿದ್ದಾರೆ. ಇನ್ನು ಕೆಲವರು ಶೀಘ್ರದಲ್ಲೇ ಜೆಡಿಎಸ್‌ನಲ್ಲಿರುವ ಅತೃಪ್ತ ಶಾಸಕರು, ಮಾಜಿ ಶಾಸಕರು, ಮುಖಂಡರ ಸಭೆ ನಡೆಸಲು ನಿರ್ಧರಿಸಿದ್ದಾರೆ. ವಿಶೇಷವಾಗಿ ಮುಸ್ಲಿಂ ಮುಖಂಡರಿಗೆ ಬಿಜೆಪಿ ಜತೆಗಿನ ಮೈತ್ರಿಯನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಅಸಮಾಧಾನ ಶಮನಕ್ಕೆ ಖುದ್ದು ದೇವೇಗೌಡರೇ ಅಖಾಡಕ್ಕಿಳಿದ್ದರೂ ಮುಸ್ಲಿಂ ಸಮುದಾಯದ ನಾಯಕರು ಸುತಾರಾಂ ಒಪ್ಪುತ್ತಿಲ್ಲ. ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಜೆಡಿಎಸ್ ನಾಯಕರ ಜತೆ ಅಂತರ ಕಾಯ್ದುಕೊಂಡಿದ್ದಾರೆ. ಅಲ್ಲದೆ, ಪ್ರತ್ಯೇಕ ಸಭೆ ನಡೆಸಿ ಚರ್ಚಿಸಲೂ ಸಿದ್ಧರಾಗಿದ್ದಾರೆ.

ದೊಡ್ಡ ಸಂಖ್ಯೆ ನಾಯಕರು ಗುಡ್ ಬೈ

ಈ ನಡುವೆ ಮೈಸೂರಿನಲ್ಲಿ ಅಲ್ಪಸಂಖ್ಯಾತ ಸಮುದಾಯದ ದೊಡ್ಡ ಸಂಖ್ಯೆಯ ಮುಖಂಡರು ಜೆಡಿಎಸ್‌ಗೆ ಗುಡ್ ಬೈ ಹೇಳಿದ್ದಾರೆ. ಕಲಬುರಗಿಯಲ್ಲಿ ಮುಸ್ಲಿಂ ಮುಖಂಡರು ಕೊತ ಕೊತ ಕುದಿಯುತ್ತಿದ್ದಾರೆ. ಬಹಿರಂಗವಾಗಿಯೇ ರಾಜೀನಾಮೆ ನೀಡುವುದಾಗಿ ೋಷಿಸಿದ್ದಾರೆ. ಅಲ್ಲದೆ, ಸಾಮೂಹಿಕವಾಗಿ ಬೆಂಗಳೂರಿಗೆ ತೆರಳಿ ಪಕ್ಷಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ.

ಕುಮಾರಸ್ವಾಮಿ ಹೇಳಿಕೆಯಿಂದ ಕೆಂಡ

ಈ ನಡುವೆ ‘ಮತಕ್ಕಾಗಿ ಯಾವುದೇ ಒಂದು ಸಮುದಾಯ ಓಲೈಕೆ ಮಾಡಲಾರೆ’ ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ಅಲ್ಪಸ ಂಖ್ಯಾತ ಮುಖಂಡರಲ್ಲಿ ತೀವ್ರ ಬೇಸರ ಉಂಟು ಮಾಡಿದೆ. ವಿಧಾನ ಪರಿಷತ್ ಸದಸ್ಯ ಬಿ.ಎಂ.ಾರೂಕ್ ಮಾತ್ರ ಮೈತ್ರಿಯಿಂದ ಮುಸ್ಲಿಮರಿಗೆ ಯಾವುದೇ ಸಮಸ್ಯೆ ಇಲ್ಲ ಎಂಬ ಹೇಳಿಕೆ ನೀಡಿದ್ದಾರೆ. ಆದರೂ ಬಿಜೆಪಿ ಜತೆಗಿನ ಮೈತ್ರಿಯನ್ನು ಜೆಡಿಎಸ್‌ನಲ್ಲಿರುವ ಬಹು ದೊಡ್ಡ ಸಂಖ್ಯೆ ಕಾರ್ಯಕರ್ತರು, ನಾಯಕರಿಗೆ ಮಾತ್ರ ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ.

ಅ.8ಕ್ಕೆ ಮುಸ್ಲಿಂ ಮುಖಂಡರ ಸಭೆ

ಅ.8 ಕ್ಕೆ ಜೆಡಿಎಸ್‌ನಲ್ಲಿರುವ ಮುಸ್ಲಿಂ ಮುಖಂಡರು ಜೆಡಿಎಸ್ ವರಿಷ್ಠರನ್ನು ಬಿಟ್ಟು ಪ್ರತ್ಯೇಕ ಸಭೆ ನಡೆಸಲು ನಿರ್ಧರಿಸಿದ್ದಾರೆ. ಈ ಸಭೆಯಲ್ಲಿ ತೆಗೆದುಕೊಳ್ಳುವ ತೀರ್ಮಾನ ಮಹತ್ವದ್ದಾಗಿದೆ. ಈ ಸಭೆಯ ಮುನ್ಸೂಚನೆ ಮಾಜಿ ಸಿಎಂ ಕುಮಾರಸ್ವಾಮಿಗೂ ಇರುವುದರಿಂದ ಅವರು ಯಾವ ಹೆಜ್ಜೆ ಇಡುತ್ತಾರೆ ಎಂಬುದು ರಾಜ್ಯ ರಾಜಕೀಯದಲ್ಲಿ ಕುತೂಹಲ ಕೆರಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net