MLC Election: ದ.ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಕೆ.ವಿವೇಕಾನಂದ ಗೆಲುವು!

kv
Published on

ಮೈಸೂರು: ತೀವ್ರ ಕುತೂಹಲ ಮೂಡಿಸಿದ್ದ ವಿಧಾನಪರಿಷತ್‌ನ ದಕ್ಷಿಣ ಶಿಕ್ಷಕರ ಕ್ಷೇತ್ರದ ಫಲಿತಾಂಶ ಪ್ರಕಟವಾಗಿದ್ದು, ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಹೀನಾಯ ಸೋಲನುಭವಿಸಿದೆ.  ಜೆಡಿಎಸ್​- ಬಿಜೆಪಿ ಮೈತ್ರಿ ಅಭ್ಯರ್ಥಿ ವಿವೇಕಾನಂದ ಅವರು ಮೊದಲ ಪ್ರಾಶಸ್ತ್ಯ ಮತಗಳಲ್ಲಿ ಗೆಲುವು ಸಾಧಿಸಿದ್ದಾರೆ. ಇದರಿಂದ ಸಿಎಂಗೆ ಮತ್ತೊಮ್ಮೆ ಮುಖಭಂಗವಾಗಿದೆ.

ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೇಗೌಡ ವಿರುದ್ಧ  ವಿವೇಕಾನಂದ ಅವರು ಬರೋಬ್ಬರಿ 4622 ಮತಗಳ ಭಾರೀ ಅಂತರಿಂದ ಮೊದಲ ಪ್ರಾಶಸ್ತ್ಯದಲ್ಲೇ ಗೆಲುವು ಸಾಧಿಸಿದ್ದಾರೆ. ಈ ಮೂಲಕ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣಾ ಇತಿಹಾಸದಲ್ಲಿ ಮೊದಲ ಪ್ರಾಶಸ್ತ್ಯ ಮತದಲ್ಲಿ ಗೆದ್ದ ವಿವೇಕಾನಂದ ಹೊಸ ದಾಖಲೆ ಬರೆದಿದ್ದಾರೆ.

ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಮೊದಲ ಪ್ರಾಶಸ್ತ್ಯದ ಮತಗಳಲ್ಲಿ ಮೈತ್ರಿ ಪಕ್ಷ ಗೆಲವು ದಾಖಲಿಸಿದೆ. ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೇಗೌಡ ಗೆಲುವಿನ ನಾಗಾಲೋಟಕ್ಕೆ ಮೈತ್ರಿ ಅಭ್ಯರ್ಥಿ ಬ್ರೇಕ್‌ ಹಾಕಿದ್ದಾರೆ. ಸತತ ನಾಲ್ಕು ಬಾರಿ ಮರಿತಿಬ್ಬೇಗೌಡ ಗೆದ್ದಿದ್ದರು. ಕಳೆದ ಬಾರಿ ಜೆಡಿಎಸ್‌ನಿಂದ ಗೆದ್ದು ನಂತರದ ದಿನಗಳಲ್ಲಿ ಪಕ್ಷಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್‌ ಸೇರಿದ್ದರು.

ಜೆಡಿಎಸ್‌ ಅಭ್ಯರ್ಥಿ ವಿವೇಕಾನಂದಗೆ 10,823 ಮತ ಬಂದಿದ್ದು, ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೇಗೌಡಗೆ 6,201 ಮತ ಬಂದಿವೆ, ವಾಟಾಳ್ ನಾಗರಾಜ್ 84 ಮತ ಗಳಿಸಿದ್ದಾರೆ. ಈ ಮೂಲಕ 4,622 ಮತಗಳ ಭಾರಿ ಅಂತರದಿಂದ ಮೊದಲ ಪ್ರಾಶಸ್ತ್ಯ ಮತಗಳಲ್ಲೇ ಜೆಡಿಎಸ್‌ ಅಭ್ಯರ್ಥಿ ವಿವೇಕಾನಂದ ಗೆಲುವು ದಾಖಲಿಸಿದ್ದಾರೆ. ಕ್ಷೇತ್ರದಲ್ಲಿ 1049 ಕುಲಗೆಟ್ಟ ಮತಗಳು (ತಿರಸ್ಕೃತ) ದಾಖಲಾಗಿವೆ.

ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಮೈಸೂರು, ಮಂಡ್ಯ, ಹಾಸನ ಹಾಗೂ ಚಾಮರಾಜನಗರ ಜಿಲ್ಲೆಗಳು ಬರುತ್ತವೆ. ಒಟ್ಟು 20,549 ಮತದಾರರ ಪೈಕಿ 18,979 ಮತಗಳು ಚಲಾವಣೆಯಾಗಿದ್ದವು. ಈ ಚುನಾವಣೆಯಲ್ಲಿ ವಿವೇಕಾನಂದ ಹಾಗೂ ಮರೀತಿಬ್ಬೇಗೌಡ ನಡುವೆ ನೇರ ಪೈಪೋಟಿ ಏರ್ಪಟ್ಟಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net