ಮೌಲ್ಯಾಂಕನದಲ್ಲಿ ಲೋಪ ಆರೋಪ: ವರದಿ ಕೇಳಿದ ಪರೀಕ್ಷಾ ಮಂಡಳಿ

SSLC Exam
Published on

ಬೆಂಗಳೂರು 5,8 ಮತ್ತು 9ನೇ ತರಗತಿ ಮೌಲ್ಯಾಂಕನಕ್ಕೆ ಸಂಬಂಧಿಸಿದಂತೆ ಆಗಿರುವ ಲೋಪಗಳ ಬಗ್ಗೆ ವರದಿ ನೀಡುವಂತೆ ಜಿಲ್ಲಾ ಉಪ ನಿರ್ದೇಶಕರಿಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ವರದಿ ಕೇಳಿದೆ.

ಮೌಲ್ಯಾಂಕನದ ಮೌಲ್ಯಮಾಪನ ಕಾರ್ಯ ನಿರ್ವಹಿಸುವ ಸಂಪೂರ್ಣ ಜವಾಬ್ದಾರಿಯು ಜಿಲ್ಲಾ ಉಪನಿರ್ದೇಶಕರದಾಗಿತ್ತು. ನಿಗದಿತ ದಿನಾಂಕದೊಳಗೆ ಬ್ಲಾಕ್ ಹಂತದಲ್ಲಿ ಮೌಲ್ಯಮಾಪನ ಕಾರ್ಯವನ್ನು ಪೂರ್ಣಗೊಳಿಸಿ ಉತ್ತರ ಪತ್ರಿಕೆಗಳನ್ನು ಸಂಬಂಧಿಸಿದ ಶಾಲೆಗಳಿಗೆ ಮರು ರವಾನಿಸಲು ಸೂಚಿಸಲಾಗಿತ್ತು.

ಪ್ರಸ್ತುತ 5,8 ಮತ್ತು 9ನೇ ತರಗತಿಯ ಮೌಲ್ಯಾಂಕನಗೊಂಡ ಉತ್ತರ ಪತ್ರಿಕೆಗಳನ್ನು ಆಯಾ ಶಾಲೆಗಳಿಗೆ ಮರು ರವಾನಿಸಲಾಗಿದೆ. ಇದರಲ್ಲಿ ಸರಿ ಉತ್ತರ ಬರೆದಿದ್ದರೂ ಸೂಕ್ತ ಅಂಕ ನೀಡದಿರುವುದು, ಉತ್ತಮವಾಗಿ ಓದುವ ಮಕ್ಕಳಿಗೆ ಕಡಿಮೆ ಅಂಕ ನೀಡಿರುವುದು, ಲಿತಾಂಶದ ಅಂಕಿ-ಅಂಶಗಳ ಲೆಕ್ಕವನ್ನೇ ತಪ್ಪಾಗಿ ಮಾಡಿರುವುದು, ಕೆಲ ವಿಷಯಗಳಲ್ಲಿ ಗರಿಷ್ಠ ಅಂಕಗಳಿಗಿಂತ ಹೆಚ್ಚು ಅಂಕಗ ನೀಡಿರುವ ಪ್ರಕರಣಗಳು ಕಂಡುಬಂದಿವೆ. ಎಂಬುದಾಗಿ ಶಾಲಾ ಆಡಳಿತ ಮಂಡಳಿಗಳು ಮಾಹಿತಿ ನೀಡಿವೆ ಎಂದು ಖಾಸಗಿ ಶಾಲಾ ಸಂಘಟನೆ ಕ್ಯಾಮ್ಸ್ ಆರೋಪಿಸಿರುವುದಾಗಿ ಪತ್ರಿಕೆಗಳಲ್ಲಿ ಪ್ರಕಟವಾಗಿದೆ.

ಈ ಹಿನ್ನೆಲೆಯಲ್ಲಿ 2023-24ನೇ ಸಾಲಿನ 5,8 ಮತ್ತು 9ನೇ ತರಗತಿಯ ಮೌಲ್ಯಮಾಪನದಲ್ಲಿ ಆಗಿರುವ ಲೋಪದೋಷಗಳ ಬಗ್ಗೆ ಕೂಲಂಕಶವಾಗಿ ಅಗತ್ಯವಿದ್ದಲ್ಲಿ ಉತ್ತರ ಪತ್ರಿಕೆಗಳ ಮರು ಮೌಲ್ಯಮಾಪನ ಮಾಡಿಸಲು ಹಾಗೂ ಸರಿಯಾಗಿ ಮೌಲ್ಯಮಾಪನ ಮಾಡದ ತಪ್ಪಿತಸ್ಥ ಶಿಕ್ಷಕರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಏ.15ರೊಳಗೆ ವರದಿ ನೀಡುವಂತೆ ಮಂಡಳಿ ಅಧ್ಯಕ್ಷರು ಸೂಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net