ನಂದಿನಿ ಮೊಸರು ಪ್ಯಾಕೆಟ್‌ನಲ್ಲಿ ಜಿಯೋ ಸಿಮ್ ಕಾರ್ಡ್ ಪತ್ತೆ ಆರೋಪ: ವೈರಲ್ ವಿಡಿಯೋದ ಅಸಲಿಯತ್ತೇನು? | Nandini curd packet

Nandini curd packet
ನಂದಿನಿ ಮೊಸರು ಪ್ಯಾಕೆಟ್‌ನಲ್ಲಿ ಜಿಯೋ ಸಿಮ್ ಕಾರ್ಡ್ ಪತ್ತೆ ಆರೋಪ
Published on: 
Summary
  • ಮದ್ದೂರಿನಲ್ಲಿ ನಂದಿನಿ ಮೊಸರು ಪ್ಯಾಕೆಟ್‌ನಲ್ಲಿ ಜಿಯೋ ಸಿಮ್ ಕಾರ್ಡ್ ಪತ್ತೆ?

  • ಗ್ರಾಹಕನ ಆರೋಪವನ್ನು ತಳ್ಳಿಹಾಕಿದ ಮಂಡ್ಯ ಜಿಲ್ಲಾ ಹಾಲು ಒಕ್ಕೂಟ

  • ಅಪಪ್ರಚಾರ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ವಾರ್ನ್​

ಮಂಡ್ಯ: ನಂದಿನಿ ಮೊಸರು ಪ್ಯಾಕೆಟ್‌ನಲ್ಲಿ ಜಿಯೋ ಸಿಮ್ ಕಾರ್ಡ್ ಪತ್ತೆಯಾಗಿದೆ ಎಂಬ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಈ ಆರೋಪವನ್ನು ಮಂಡ್ಯ ಜಿಲ್ಲಾ ಹಾಲು ಒಕ್ಕೂಟ (Manmul) ಸಂಪೂರ್ಣವಾಗಿ ತಳ್ಳಿಹಾಕಿದೆ.

ಮಂಡ್ಯ ಜಿಲ್ಲೆಯ ಮದ್ದೂರು ಪಟ್ಟಣದ ನಿವಾಸಿ ಅರುಣ್ ಎಂಬುವವರು ಸ್ಥಳೀಯ ನಂದಿನಿ ಬೂತ್‌ನಲ್ಲಿ ಮೊಸರು ಪ್ಯಾಕೆಟ್ ಖರೀದಿಸಿದ್ದರು. ಈ ಪ್ಯಾಕೆಟ್ ಒಳಗೆ ಜಿಯೋ ಸಿಮ್ ಕಾರ್ಡ್ ಸಿಕ್ಕಿದೆ ಎಂದು ಆರೋಪಿಸಿ ಅವರು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ಕೆಲವರು ಇದನ್ನು ರಾಜಕೀಯ ಟೀಕೆಗಳಿಗೂ ಬಳಸಿಕೊಂಡು ಶೇರ್ ಮಾಡಿದ್ದರು.

ಮನ್‌ಮುಲ್ ಹೇಳಿದ್ದು ಏನು?

ಈ ವೈರಲ್ ವಿಡಿಯೋ ಬಗ್ಗೆ ಪ್ರತಿಕ್ರಿಯಿಸಿರುವ ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ರಘು ಅವರು, ಗ್ರಾಹಕನ ಆರೋಪವನ್ನು ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ಡೈರಿ ಘಟಕದಲ್ಲಿ ಸಂಪೂರ್ಣ ಸ್ವಯಂಚಾಲಿತವಾಗಿ ಮೊಸರು ಪ್ಯಾಕಿಂಗ್ ಮಾಡುವಾಗ ಇಂತಹ ಹೊರಗಿನ ವಸ್ತುಗಳು ಪ್ಯಾಕೆಟ್ ಒಳಗೆ ಸೇರಲು ಯಾವುದೇ ಅವಕಾಶವಿರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ಕಾನೂನು ಕ್ರಮದ ಎಚ್ಚರಿಕೆ

ನಂದಿನಿ ಉತ್ಪನ್ನಗಳ ಗುಣಮಟ್ಟಕ್ಕೆ ಧಕ್ಕೆ ತರುವ ಹಾಗೂ ಅಪಪ್ರಚಾರ ಮಾಡುವ ಉದ್ದೇಶದಿಂದ ಯಾರೋ ಬೇಕೆಂದೇ ಈ ರೀತಿ ಮಾಡಿರುವ ಶಂಕೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಟೈಗರ್ ಶ್ರಾಫ್ ಫೈರಿಂಗ್ ಕೇಸ್: ಪತ್ರಕರ್ತರ ಪ್ರಶ್ನೆಗೆ ಜಾಕಿ ಶ್ರಾಫ್ ರಿಯಾಕ್ಷನ್ ಹೇಗಿತ್ತು ಗೊತ್ತಾ? | Jackie Shroff

ಸುಳ್ಳು ಆರೋಪ ಮಾಡಿದ ವ್ಯಕ್ತಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ತನಿಖೆಗೆ ಮನವಿ ಸಲ್ಲಿಸಲಾಗುವುದು ಎಂದು ಮನ್‌ಮುಲ್ ಎಂಡಿ ಎಚ್ಚರಿಕೆ ನೀಡಿದ್ದಾರೆ. ಸೀಲ್ ಮಾಡಿದ ನಂದಿನಿ ಮೊಸರು ಪ್ಯಾಕೆಟ್ ಒಳಗೆ ಸಿಮ್ ಕಾರ್ಡ್ ಬಂದಿದೆ ಎಂಬುದಕ್ಕೆ ಯಾವುದೇ ಅಧಿಕೃತ ಪುರಾವೆಗಳಿಲ್ಲ.