

ಈ ಬಗೆಯ ‘ಯೋಗಮಾರ್ಗ’ವನ್ನು ಕಲ್ಯಾಣದಲ್ಲಿ ಸಮಸ್ತ ಶರಣರಿಗೂ ತಿಳಿಸಿಕೊಟ್ಟವನೇ ಪರಮಪ್ರಭು ಅಲ್ಲಮ. ಇವನು ಕಲ್ಯಾಣದಲ್ಲಿ ಮಾತ್ರವಲ್ಲ ಅಖಂಡ ಭಾರತವನ್ನೆಲ್ಲಾ ಸಂಚರಿಸಿದ ಮಹಾಯೋಗಯಾತ್ರಿಕ! ಅಲ್ಲಮನು ಅಸೇತು ಹಿಮಾಚಲಪರ್ಯಂತ ಮಹಾಯಾತ್ರೆಯನ್ನು ಕೈಗೊಂಡಿದ್ದಕ್ಕೆ ಅಂತಃಸಾಕ್ಷ್ಯಗಳಿವೆ. ನೀವೊಮ್ಮೆ ಈ ವಚನವನ್ನು ಪರಾಂಬರಿಸಿ. ಕಡೆಯಿಲ್ಲದ ದೇಶವ ತಿರುಗಿದೆನು,/ಹವಣಿಲ್ಲದ ಕಂಥೆಯ ತೊಟ್ಟಿನು/ಹಸಿವಿಲ್ಲದ ಕಪ್ಪರವ ಹಿಡಿದು/ ಭಕ್ತಿಭಿಕ್ಷವ ಬೇಡಿ ಬಂದೆ/ಗುಹೇಶ್ವರ ಹಸಿದನು ಉಣಲಿಕ್ಕೇಳಾ ಸಂಗನ ಬಸವಣ್ಣ (ಅಲ್ಲಮ- ವ.ಚ.ಚಂದ್ರಿಕೆ 1123)
ಈ ವಚನದಲ್ಲಿ ಎರಡು ಸಂಗತಿಗಳಿವೆ. ಮೊದಲನೆಯದು ಅಲ್ಲಮನ ಯಾತ್ರೆಯ ವಿಸ್ತಾರವನ್ನು ತಿಳಿಸಿದರೆ; ಎರಡನೆಯದು ಯಾತ್ರೆಯನ್ನು ಮುಗಿಸಿ ಬಸವಣ್ಣನ ಬಳಿಗೆ ಬಂದ ಸಂಗತಿಯನ್ನು ತಿಳಿಸುತ್ತದೆ. ಅಲ್ಲಮನು ಹಲವು ಬಗೆಯ ಜನರನ್ನು ಕಂಡನಷ್ಟೆ. ಅವರವರ ಭವರೋಗದ ವೈವಿಧ್ಯವನ್ನು ಗೊತ್ತುಪಡಿಸಿಕೊಂಡ. ಅವರವರಿಗೆ ಸೂಕ್ತವಾದ ಆಧ್ಯಾತ್ಮಿಕ ಚಿಕಿತ್ಸೆಯನ್ನು ಕೊಟ್ಟು, ಅವರು ಶಿವಯೋಗ ಮಾರ್ಗದಲ್ಲಿ ನಿತ್ಯರಾಗುವಂತೆ ಮಾಡಿದ. ಅಲ್ಲಮನು ಯಾವ ಸಂದರ್ಭದಲ್ಲೂ ಪರಮತಖಂಡನೆಯನ್ನು ಮಾಡಲಿಲ್ಲ; ದ್ವೇಷವನ್ನೂ ಮಾಡಲಿಲ್ಲ. ಅವನ ವಚನಗಳ ಅಂತರಂಗ ಪ್ರವೇಶ ಮಾಡಿದರೆ ಇದು ನಮ್ಮ ಅರಿವಿಗೆ ಬರುತ್ತದೆ. ಇಂಥ ಮಹಾನುಭಾವ ಕೇವಲ ವಚನಕಾರರಲ್ಲೇ ಅಲ್ಲ; ಇಡೀ ಭಾರತದ ‘ಧಾರ್ಮಿಕಚರಿತ್ರೆಯಲ್ಲಿ ಹಲವರು ಇಲ್ಲ’ ಎಂಬ ಡಾ.ಎಲ್ ಬಸವರಾಜು ಅವರ ಮಾತು ಸತ್ಯಸ್ಯಸತ್ಯ.
ಅಲ್ಲಮನು ಮೂರು ಬಾರಿ ಭಾರತದ ಪರಿಕ್ರಮವನ್ನು ಮಾಡಿದ್ದಾನೆ. ಈ ಸಂಗತಿಯು ಅಲ್ಲಮನ ವಚನಗಳಿಂದಲೂ ಶಿವಗಣಪ್ರಸಾದಿ ಮಹಾದೇವಯ್ಯನ ಶೂನ್ಯಸಂಪಾದನೆಯಿಂದಲೂ ಚಾಮರಸನ ಪ್ರಭುಲಿಂಗಲೀಲೆಯಿಂದಲೂ ಯಲಂದೂರನ ಪ್ರಭುದೇವರ ಪುರಾಣದಿಂದಲೂ ನಮ್ಮ ಅರಿಕೆಗೆ ಬರುತ್ತದೆ. ಅವನ ಮೊದಲ ಪರಿಕ್ರಮ ಬಳ್ಳಿಗಾವೆಯಿಂದ ಪ್ರಾರಂಭವಾಗುತ್ತದೆ. ಅವನು ಅಲ್ಲಿಂದ ಬನವಾಸಿಗೆ ಬರುತ್ತಾನೆ. ಆನಂತರ ತಮಿಳುನಾಡಿನ ರಾಮೇಶ್ವರಕ್ಕೆ ಬಂದು ಕೊಡಗು ರಾಜ್ಯಕ್ಕೆ ಬರುತ್ತಾನೆ. ಮರಳಿ ಬಳ್ಳಿಗಾವಿಗೆ ಬರುವುದು ಸ್ಪಷ್ಟವಿದೆ. ಅಲ್ಲಮಪ್ರಭುವಿನ ಎರಡನೆಯ ಮಹಾಯಾತ್ರೆ ಪ್ರಾರಂಭವಾಗುವುದು ಬಳ್ಳಿಗಾವಿಯಿಂದಲೇ. ಅಷ್ಟರಲ್ಲಿ ಅಲ್ಲಮನ ಖ್ಯಾತಿ ಎಲ್ಲೆಲ್ಲೂ ಹಬ್ಬಿರುತ್ತದೆ. ಬಳ್ಳಿಗಾವಿಯಿಂದ ಹೊರಟು ಅಜಗಣ್ಣನ ಸಹೋದರಿ ಮುಕ್ತಾಯಿಯನ್ನು ಕಾಣಲು ಅಡಕಕ್ಕೆ ಬರುತ್ತಾನೆ. ಅಲ್ಲಿಂದ ಸಿದ್ಧರಾಮನ ಕ್ರಿಯಾಕ್ಷೇತ್ರವಾದ ಸೊನ್ನಲಿಗೆಗೆ ಬಂದು ಸಿದ್ಧರಾಮನನ್ನು ಕಾಣುತ್ತಾನೆ.
ಅಲ್ಲಿಂದ ಕಲ್ಯಾಣಕ್ಕೆ ಬರುತ್ತಾನೆ. ಅಲ್ಲಮನು ಕಲ್ಯಾಣಕ್ಕೆ ಮೊದಲಸಲ ಬಂದದ್ದಕ್ಕೂ ಎರಡನೆಯ ಸಲ ಬಂದುದಕ್ಕೂ ಹನ್ನೆರಡುವರ್ಷಗಳ ಅಂತರವುಂಟೆಂದು ಡಾ.ಎಲ್.ಬಸವರಾಜು ಅಭಿಪ್ರಾಯ ಪಡುತ್ತಾರೆ. ಇದಕ್ಕೆ ಅವರು ಆಧಾರವೇನೂ ಕೊಟ್ಟಿಲ್ಲ. ಕಲ್ಯಾಣದಿಂದ ಈ ಬಾರಿ ಉತ್ತರಭಾರತದ ಯಾತ್ರೆಯನ್ನು ಕೈಗೊಳ್ಳುತ್ತಾನೆ. ಕಾಶಿ- ಕೇದಾರ- ಗಯಾ- ನೇಪಾಳ- ಹಿಮಾಲಯ ಅಲ್ಲಿಂದ ಶ್ರೀಶೈಲಕ್ಕೆ ಬಂದು ಕಲ್ಯಾಣದಲ್ಲಿ ನೆಲೆ ನಿಲ್ಲುತ್ತಾನೆ. ಇನ್ನು ಮೂರನೆಯ ಹಾಗೂ ಅಂತಿಮ ಪರಿಕ್ರಮ ಕಲ್ಯಾಣದಿಂದ ಹೊರಟು ಶ್ರೀಶೈಲಕ್ಕೆ ಬಂದು ಕದಳಿಯಲ್ಲಿ ಐಕ್ಯಗೊಳ್ಳುತ್ತಾನೆ. ಅಲ್ಲಮನ ಆಧ್ಯಾತ್ಮಿಕವನ್ನೊಳಗೊಂಡ ಸಾಂಸ್ಕೃತಿಕ ಮಹಾಯಾತ್ರೆಯ ಪರಿಕ್ರಮ ಹೀಗೆ ಕೊನೆಗೊಳ್ಳುತ್ತದೆ.
ಎರಡನೆಯ ಬಾರಿಗೆ ಕಲ್ಯಾಣಕ್ಕೆ ಬಂದ ಅಲ್ಲಮನು ಬಸವಣ್ಣ, ಚೆನ್ನಬಸವಣ್ಣ, ಮಡಿವಾಳ ಮಾಚಿದೇವರಿಗೆ ಮಹಾಜ್ಞಾನವನ್ನು ಬೋಧಿಸುತ್ತಾನೆ. ಇಷ್ಟಲಿಂಗ-ಪ್ರಾಣಲಿಂಗದ ಉಪಾಸನಾ ಮಾರ್ಗವನ್ನು ಸಮಸ್ತ ಶರಣರಿಗೆ ತಿಳಿಸಿಕೊಡುತ್ತಾನೆ. ಆಮೇಲೆ ಅಲ್ಲಿದ್ದ ಸಕಲ ಪುರಾತನರನ್ನು ಕೃತಾರ್ಥರನ್ನಾಗಿ ಮಾಡುತ್ತಾನೆ. ತನ್ನ ಜೊತೆ ಸೊನ್ನಲಿಗೆಯಿಂದ ಬಂದ ಸಿದ್ಧರಾಮನಿಗೆ ನಿಜ ಸಮಾಧಿಯ ನಿರ್ಣಯವನ್ನು ತಿಳಿಸಿಕೊಡುತ್ತಾನೆ. ಅವನು ಸೊನ್ನಲಿಗೆಗೆ ಪ್ರಯಾಣ ಬೆಳೆಸುತ್ತಾನೆ. ಅಲ್ಲಮನು ಪ್ರಯಾಣಿಸುವಾಗ ಶರಣರೆಲ್ಲರಿಗೂ ಏಕಾಗ್ರಚಿತ್ತದಿಂದ ನಾದಬಿಂದು ಕಲಾಪ್ರಪಂಚದ ಮಾರ್ಗವನ್ನು ನಿಮ್ಮಲ್ಲಿ ನೀವೇ ಸಾಧಿಸಿಕೊಳ್ಳಬೇಕೆಂದು ಅರುಹುತ್ತಾನೆ. ನಾನು ಮರಳಿ ಬಂದು ನಿಮ್ಮ ಏಕಾಗ್ರಚಿತ್ತದ ಸಿದ್ಧಿಯನ್ನು ಪರೀಕ್ಷಿಸುವೆನೆಂದು ಹೇಳುತ್ತಾನೆ. ಆಗ ಅಲ್ಲಮನ ಮಾತಿಗೆ ಎಲ್ಲರೂ ಮುದಗೊಂಡರು. ಸಾಷ್ಟಾಂಗಸಹಿತವಾಗಿ ಅಲ್ಲಮಗುರುವಿನ ಪಾದಗಳಿಗೆ ತಮ್ಮ ದೇಹಗಳನ್ನು ಈಡಾಡುತ್ತಾರೆ. ಅನಂತರ ಅಲ್ಲಮನು ಉಳಿದ ಮರ್ತ್ಸಲೋಕದವರನ್ನು ಪಾವನಗೊಳಿಸುವೆನೆಂದು ಹೇಳುತ್ತ ಕಲ್ಯಾಣದಿಂದ ನಿರ್ಗಮಿಸುತ್ತಾನೆ. ಅಲ್ಲಮನ ನಿಜದ ಮಹಾಯಾತ್ರೆ ಈಗ ಪ್ರಾರಂಭವಾಗುತ್ತದೆ.