

ಮದ್ದೂರು : ಸಮಾಜದಲ್ಲಿ ಶೋಷಣೆಗೆ ಒಳಗಾದ ಎಲ್ಲ್ಲ ಸಮುದಾಯಗಳನ್ನು ದಲಿತರು ಎಂದು ಕರೆಯುತ್ತಾರೆ. ದಲಿತ ಪ್ರಜ್ಞೆ ಎಲ್ಲ ಸಮುದಾಯಗಳ ಅನುಭವಗಳ ಜೀವ ಪ್ರಜ್ಞೆಯಾಗಿದೆ ಎಂದು ಜಿಲ್ಲಾ ದಲಿತ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹುರಗಲವಾಡಿ ರಾಮಯ್ಯ ಅಭಿಪ್ರಾಯಪಟ್ಟರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ದಲಿತ ಸಾಹಿತ್ಯ ಪರಿಷತ್ ತಾಲೂಕು ಘಟಕ ಉದ್ಘಾಟನೆ, ಸಾಮಾಜಿಕ ಕ್ರಾಂತಿ ಹರಿಕಾರ ನಾರಾಯಣ ಗೌಡ ಜನ್ಮ ದಿನಾಚರಣೆ ಮತ್ತು ದಲಿತ ಸಾಹಿತ್ಯ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಾಮ ಫಲಕ ಅನಾವರಣ ಮಾಡಿ ಮಾತನಾಡಿದರು.
ಶೋಷಿತ ಸಮುದಾಯಗಳ ಅನುಭವ ಕಥನಗಳನ್ನು ಹಾಗೂ ಸಂವೇದನೆಗಳನ್ನು ರಚನೆ ಮಾಡುವುದೇ ದಲಿತ ಸಾಹಿತ್ಯ. ಜತೆಗೆ ಅನ್ಯಾಯದ ವಿರುದ್ಧ ಮಾತನಾಡುವುದು ಮತ್ತು ಬರೆಯುವುದೇ ಬಂಡಾಯ ಸಾಹಿತ್ಯ. 70 ದಶಕದಲ್ಲಿ ಹುಟ್ಟಿಕೊಂಡ ದಲಿತ ಚಳವಳಿಯೇ ದಲಿತ ಮತ್ತು ಬಂಡಾಯ ಸಾಹಿತ್ಯವನ್ನು ಹುಟ್ಟುಹಾಕಿದೆ. ದಲಿತ ಚಳವಳಿಯೇ ನಿಜವಾದ ಜಾತ್ಯತೀತ ಚಳವಳಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ದಲಿತ ಸಾಹಿತ್ಯ ಪರಿಷತ್ತು, ಕನ್ನ್ನಡ ಸಾಹಿತ್ಯ ಪರಿಷತ್ತು ಸೇರಿದಂತೆ ಇನ್ಯಾವುದೇ ಸಂಘಟನೆಗೆ ಪರ್ಯಾಯ ಸಂಘಟನೆ ಅಲ್ಲ. ದಲಿತರ ಪರವಾಗಿ ಯಾರು ಚಿಂತನೆವುಳ್ಳವರು ಈ ಪರಿಷತ್ತಿನ ಒಡನಾಡಿಗಳು, ಬಂಧುಗಳಾಗಿದ್ದಾರೆ ಎಂದು ಹೇಳಿದರು.
ದಲಿತ ಕೇವಲ ಜಾತಿ ಸೂಚಕ ಪದವಲ್ಲ. ತುಳಿತಕ್ಕೊಳಗಾದ, ದೌರ್ಜನ್ಯಕ್ಕೊಳಗಾದ, ನೊಂದವರೆಲ್ಲರೂ ದಲಿತರಾಗಿದ್ದಾರೆ. ತಮಗಾಗುತ್ತಿರುವ ದೌರ್ಜನ್ಯದ ವಿರುದ್ಧ ದನಿ ಎತ್ತುವುದೇ ದಲಿತ ಸಾಹಿತ್ಯದ ತಿರುಳಾಗಿದೆ ಎಂದರು.
ಸಾಹಿತಿ ಬಿ.ವಿ.ಹಳ್ಳಿ ನಾರಾಯಣ ಮಾತನಾಡಿ, ನಾರಾಯಣ ಗುರು ಅಸ್ಪೃಶ್ಯತೆಗೆ ಒಳಗಾಗಿದ್ದ ಈ ಕೆಳ ಸಮುದಾಯದ ವಿಮೋಚನೆಗಾಗಿ ದುಡಿದ ಮಹನೀಯ. ಜಾತಿ ತಾರತಮ್ಯವನ್ನು ಹೋಗಲಾಡಿಸಿ, ಸಮಾನತೆಯನ್ನು ದೇಶಕ್ಕಂಚಿದ ದಾರ್ಶನಿಕ ಎಂದು ಬಣ್ಣಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಡಯಟ್ ನಿವೃತ್ತ ಶಿಕ್ಷಕ ಗುರುಮೂರ್ತಿ ಮಾತನಾಡಿ, ದಲಿತ ಸಾಹಿತ್ಯ ಹೋರಾಟದ ಹಾಡುಗಳ ಮೂಲಕ ಹುಟ್ಟಿಕೊಂಡ ಸಾಹಿತ್ಯವಾಗಿದೆ. ವ್ಯವಸ್ಥೆಯ ವಿರುದ್ಧ ಪ್ರಶ್ನೆ ಮಾಡುವುದರ ಮೂಲಕ ದಲಿತ ಪ್ರಜ್ಞೆ ಹುಟ್ಟಿಕೊಂಡಿತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ದಲಿತ ಸಾಹಿತ್ಯ ರತ್ನ ಪ್ರಶಸ್ತಿ ಪುರಸ್ಕೃತ ಡಾ.ಹೊಂಬಯ್ಯ ಮಾತನಾಡಿ, ವಿದ್ಯಾರ್ಥಿಯಾಗಿದ್ದಾಗಲೇ ದಲಿತ ಚಳವಳಿಯ ಆಕರ್ಷಣೆಗೊಳಗಾದೆ. ಮೈಸೂರು ದಲಿತ ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ಎಲ್ಲ ಸಮುದಾಯದ ಜನರನ್ನು ಒಳಗೊಂಡು ವೇದಿಕೆ ಕಲ್ಪಿಸಿಕೊಡುವ ಸಂಘಟನೆಯಾಗಿ ದಲಿತ ಸಾಹಿತ್ಯ ಪರಿಷತ್ತು ರೂಪುಗೊಳ್ಳಲಿ. ಎಲ್ಲ ಪ್ರಶಸ್ತಿ ಗಳಿಗಿಂತಲೂ ದಲಿತ ಸಾಹಿತ್ಯ ರತ್ನ ಪ್ರಶಸ್ತಿ ನನಗೆ ತುಂಬ ಸಂತೋಷ ತಂದಿದೆ. ಈ ಕಾರಣಕ್ಕೆ ನನ್ನ ತಂದೆಯ ಹೆಸರಿನಲ್ಲಿ ಜನಪದ ವೈದ್ಯ ಪ್ರಶಸ್ತಿ ನೀಡಲು ರಾಜ್ಯ ಘಟಕಕ್ಕೆ 25 ಸಾವಿರ ರೂ. ದತ್ತಿ ನೀಡುತ್ತೇನೆ ಎಂದರು.
ರಾಣಿ ಐಶ್ವರ್ಯ ಡೆವಲಪರ್ಸ್ ಮಾಲೀಕ ಎಚ್.ಎಲ್. ಸತೀಶ್ ಅವರು ದಲಿತ ಸಾಹಿತ್ಯ ಸಂವೇದನೆಯ ಲೇಖಕರಾದ ಡಾ.ಹೊಂಬಯ್ಯ ಹೊನ್ನಲಗೆರೆ, ಬಿ.ಎಲ್.ಮಧುಸೂದನ್ ಮದ್ದೂರು ಮತ್ತು ಸರೋಜಮ್ಮ ಅವರಿಗೆ ದಲಿತ ಸಾಹಿತ್ಯ ರತ್ನ ಪ್ರಶಸ್ತಿ ನೀಡಿ ಗೌರವಿಸಿದರು.
ದಸಾಪ ತಾಲೂಕು ಗೌರವ ಅಧ್ಯಕ್ಷ ಹನುಮಂತ ರಾಯಪ್ಪ, ದಲಿತ ಸಾಹಿತ್ಯ ಪರಿಷತ್ತಿನ ತಾಲೂಕು ಗೌರವಾಧ್ಯಕ್ಷೆ ಸುಶೀಲಮ್ಮ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೇವರಾಜ್ ಕೊಪ್ಪ, ತಾಲೂಕು ಅಧ್ಯಕ್ಷ ಕೆ.ಟಿ. ಶಿವಕುಮಾರ್, ಬಿಇಒ ಧನಂಜಯ, ಮುಖಂಡರಾದ ಡಿ.ಸಿ.ಮಹೇಂದ್ರ, ಬಿ.ಎಂ.ಸತ್ಯ, ಪಿ.ಶಶಿ ಕುಮಾರ್, ಕೆ.ಜೆ.ಗೋವಿಂದ ರಾಜ್, ರಾಚಯ್ಯ, ಶ್ರೀನಿವಾಸ, ಚಂದ್ರಶೇಖರ್ ಮದ್ದೂರು, ಡಾ.ಎಚ್.ಎಚ್. ಮಲ್ಲೀಕೇಶ್, ಡಾ.ಬಿ.ಕೆ.ಪ್ರಕಾಶ್ ಇದ್ದರು.