ಅಗ್ನಿಪರೀಕ್ಷೆ ಗೆದ್ದು ಬನ್ನಿ ಮಕ್ಕಳೇ...

Vijayeebhava
Published on
ಕರೊನಾ ಗದ್ದಲದ ನಡುವೆ ಶೈಕ್ಷಣಿಕ ವರ್ಷ ಮುಕ್ತಾಯದ ಹಂತಕ್ಕೆ ತಲುಪಿರುವಂತೆಯೇ ಎಸ್​ಎಸ್​ಎಲ್​ಸಿ ಪರೀಕ್ಷೆಯೂ ಬಂದುಬಿಟ್ಟಿದೆ. ಸೋಮವಾರದಿಂದ 8 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ. ಎಲ್ಲ ಓದಿ ಮುಗಿಸಿದ್ದೇನೆಂದುಕೊಂಡರೂ ಬಹುಪಾಲು ಮಕ್ಕಳಲ್ಲಿ ಆತಂಕ, ಗೊಂದಲ, ಉದ್ವೇಗ, ಭಯ ಕಾಡುವುದು ಸಹಜ. ಪಾಲಕರ ಒತ್ತಡ ಮತ್ತೊಂದು ಕಡೆ. ಹೀಗಿರುವಾಗ ಈ ಪರೀಕ್ಷೆ ಎಂಬ ಅಗ್ನಿಪರೀಕ್ಷೆಯನ್ನು ಎದುರಿಸುವುದು ಹೇಗೆ? ಎದುರಾಗುವ ಸವಾಲುಗಳೇನು? ಅದನ್ನು ದಾಟುವುದು ಹೇಗೆಂಬ ಬಗ್ಗೆ ನಾಡಿನ ಗಣ್ಯಮಾನ್ಯರು ವಿಜಯವಾಣಿ ವೇದಿಕೆ ಮೂಲಕ ವಿಚಾರ ಮಂಡಿಸಿದ್ದಾರೆ.

ಮನಸ್ಸು ಗೆಳೆಯನಾಗುತ್ತದೆ!

| ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಶ್ರೀ ಆದಿಚುಂಚನಗಿರಿ ಮಠ

ಎರಡು ವರ್ಷ ಕರೊನಾ ಮಕ್ಕಳ ಕಲಿಕೆ ವಿಧಾನವನ್ನೇ ಬದಲಿಸಿದೆ. ಹಲವಾರು ಸಮಸ್ಯೆಗಳ ಜತೆಯಲ್ಲಿಯೇ ಆಧುನಿಕ ತಂತ್ರಜ್ಞಾನವನ್ನೂ ಪರಿಣಾಮಕಾರಿ ರೀತಿಯಲ್ಲಿ ಉಪಯೋಗಿಸಿಕೊಳ್ಳುವ ಅನಿವಾರ್ಯತೆ ಸೃಷ್ಟಿಸಿದೆ. ಈ ವರ್ಷದ 10ನೇ ತರಗತಿ ಪರೀಕ್ಷೆ ಬರೆಯಲು ಹೊರಟಿರುವ ಮಕ್ಕಳು ಹಿಂದಿನ 8 ಮತ್ತು 9ನೇ ತರಗತಿ ಮುಖ್ಯ ಪರೀಕ್ಷೆ ಬರೆಯದೆ ಅದರ ಅನುಭವ ಇಲ್ಲದೆ ಎಸ್ಸೆಸ್ಸೆಲ್ಸಿಗೆ ಅರ್ಹತೆ ಪಡೆದಿರುವವರು. ಆದ್ದರಿಂದ ಮಕ್ಕಳಿಗೆ ನೇರ 10ನೇ ತರಗತಿಯ ಮುಖ್ಯ ಪರೀಕ್ಷೆ ಬರೆಯುವುದು ಸ್ವಲ್ಪ ಸವಾಲಿನ ವಿಷಯವಾದರೂ ಭಯಪಡುವ ಅಗತ್ಯವಿಲ್ಲ. ಈ ಭಯದ ನಿವಾರಣೆಗಾಗಿ 3 ಬಾರಿ ಪೂರ್ವಪರೀಕ್ಷೆ ನಡೆಸಲಾಗಿದೆ. ಮುಖ್ಯವಾಗಿ ಮಕ್ಕಳಿಗೆ ಬೇಕಾಗಿರುವುದು ಆತ್ಮವಿಶ್ವಾಸ. ಪರೀಕ್ಷೆ ಸಮೀಪಿಸಿದ ಕೊನೆಯ ಕ್ಷಣದಲ್ಲಿ ಕಲಿಕೆಯ ಯಾವುದೇ ಹೊಸ ಪ್ರಯೋಗ ಮಾಡದೆ ಇದುವರೆಗೂ ಓದಿದ್ದನ್ನು ಮತ್ತಷ್ಟು ನೆನಪಿನಲ್ಲಿ ದೃಢಗೊಳಿಸಿಕೊಂಡು ಹೋಗುವುದು ಒಳಿತು. ಪರೀಕ್ಷಾ ಕಾಲದಲ್ಲಿ ಓದಿದ ಪುಸ್ತಕಗಳನ್ನು, ನೋಟ್ಸ್​ಗಳನ್ನು ಬದಲಿಸದೇ ಇರುವುದು ಒಳ್ಳೆಯದು. 10ನೇ ತರಗತಿಯ ಮುಖ್ಯ ಪರೀಕ್ಷೆ ಮುಂದಿನ ವಿದ್ಯಾಭ್ಯಾಸಕ್ಕೆ ಬಹುಮುಖ್ಯವಾದ ಮೆಟ್ಟಿಲು. ಆದರೆ ಇದು ನಮ್ಮ ಮನಸ್ಸನ್ನು ಸುಸ್ಥಿರವಾಗಿ, ಸಮಚಿತ್ತದಿಂದ ಕಾಯ್ದಿರಿಸಿಕೊಳ್ಳುವ ಪರೀಕ್ಷೆಯೂ ಹೌದು. ಮನಸ್ಸು ಗಲಿಬಿಲಿಗೊಳ್ಳದೇ ಶಾಂತ ಚಿತ್ತವಾಗಿದ್ದು, ಆತಂಕ ಉದ್ವೇಗವಿಲ್ಲದೇ ಇದ್ದರೆ ಕಲಿತ ವಿಷಯಗಳನ್ನು ಸೂಕ್ಷ್ಮವಾಗಿ ಬರೆಯಲು ಅನುಕೂಲವಾಗುತ್ತದೆ. ಅತಿಯಾದ ನಿರೀಕ್ಷೆ ಇಟ್ಟುಕೊಂಡು ಸ್ವಯಂ ಒತ್ತಡಕ್ಕೆ ಒಳಗಾಗಬಾರದು. ಪರೀಕ್ಷೆಗೂ ಮುನ್ನ ಕೆಲಕಾಲ ಮನಸ್ಸನ್ನು ಧ್ಯಾನಸ್ಥ ಸ್ಥಿತಿಯಲ್ಲಿರಿಸಿಕೊಂಡರೆ ನಮ್ಮ ಮನಸು ನಮಗೆ ಸಹಾಯ ಮಾಡುವ ಉತ್ತಮ ಗೆಳೆಯನಾಗುತ್ತದೆ. ಭವ್ಯ ದೇಶದ ಭವಿಷ್ಯದ ಆಸ್ತಿಯಾಗಿರುವ ಪ್ರೀತಿಯ ಮಕ್ಕಳೆಲ್ಲರಿಗೂ ಯಶಸ್ಸಿನ ಶುಭ ಹಾರೈಸುತ್ತೇವೆ.

ಪರೀಕ್ಷೆಗೂ ಮುನ್ನ ಕೆಲಕಾಲ ಮನಸ್ಸನ್ನು ಧ್ಯಾನಸ್ಥ ಸ್ಥಿತಿಯಲ್ಲಿರಿಸಿಕೊಂಡರೆ ನಮ್ಮ ಮನಸ್ಸು ನಮಗೆ ಸಹಾಯ ಮಾಡುವ ಉತ್ತಮ ಗೆಳೆಯನಾಗುತ್ತದೆ. ಭವ್ಯ ದೇಶದ ಭವಿಷ್ಯದ ಆಸ್ತಿಯಾಗಿರುವ ಪ್ರೀತಿಯ ಮಕ್ಕಳೆಲ್ಲರಿಗೂ ಯಶಸ್ಸಿನ ಶುಭ ಹಾರೈಸುತ್ತೇವೆ. | ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಶ್ರೀ ಆದಿ ಚುಂಚನಗಿರಿ ಮಠ

ಹಿಜಾಬ್ ಗೊಂದಲಕ್ಕೂ ಪರೀಕ್ಷೆಗೂ ಸಂಬಂಧವಿಲ್ಲ

ಬೊಳುವಾರು ಮಹಮದ್ ಕುಂಞಿ, ಸಾಹಿತಿ

ಎಲ್ಲ ಮಕ್ಕಳಿಗೆ ಸಲಹೆ ಕೊಡುವ ಸ್ಥಿತಿಯಲ್ಲಿ ನಾನಿಲ್ಲ. ಮುಸ್ಲಿಂ ಹೆಣ್ಣುಮಕ್ಕಳ ವಿಚಾರವಾಗಿ ನನ್ನ ಅಭಿಪ್ರಾಯ ಹೇಳುವುದಾದರೆ, ನನ್ನ ಪ್ರೀತಿಯ ಮಕ್ಕಳೇ, ನಿಮ್ಮ ಹೆತ್ತವರನ್ನು ನಾನು ಬೇಡಿಕೊಂಡದ್ದು ವ್ಯರ್ಥವಾಗಿದೆ. ಆದ್ದರಿಂದ ನಿಮ್ಮನ್ನೇ ಬೇಡಿಕೊಳ್ಳುತ್ತಿದ್ದೇನೆ. ಸವೋಚ್ಛ ನ್ಯಾಯಾಲಯದ ತೀರ್ಪು ಮರೀಚಿಕೆಯೆನ್ನಿಸುತ್ತಿದೆ. ನನಗೆ ಬಂದಿರುವ ಮಾಹಿತಿಗಳಂತೆ, ಹಿಜಾಬ್ ಗೊಂದಲಕ್ಕೂ ನಿಮ್ಮ ಪರೀಕ್ಷೆಗೂ ಸಂಬಂಧವಿಲ್ಲವೆಂದು ಅಭಿಪ್ರಾಯ ವ್ಯಕ್ತಪಡಿಸಿದೆ. ನಿಮ್ಮ ಪರೀಕ್ಷೆ ಮುಗಿಯುವವರೆಗೆ ಅಂತಿಮ ತೀರ್ಪು ಬರುವುದು ಅನುಮಾನ. ಆದ್ದರಿಂದ ಹೇಗಾದರೂ ಮಾಡಿ, ನಿಮ್ಮ ಹೆತ್ತವರಿಂದ ಅನುಮತಿ ಪಡೆದು, ದಯವಿಟ್ಟು ಹಿಜಾಬ್ ತೆಗೆದಿರಿಸಿ ಇದೊಂದು ಬಾರಿಯಾದರೂ ಪರೀಕ್ಷೆ ಬರೆಯಿರಿ. ಬರೆಯದೆ ನೀವಿಂದು ಸೋತರೆ, ನಿಮ್ಮ ಮುಂದಿನ ಬದುಕಿನಲ್ಲಿ ಎದುರಿಸಬೇಕಾದ ಸಂಕಟಗಳನ್ನು, ಅಳುತ್ತ ಅನುಭವಿಸಬೇಕಾದವರು ನೀವು ಮಾತ್ರ. ಆಗ ನಿಮ್ಮ ಜತೆಗೆ ಯಾರೂ ಇರುವುದಿಲ್ಲ. ಹಿಜಾಬ್ ತೆಗೆದಿರಿಸಿ ಪರೀಕ್ಷೆ ಬರೆದರೆ, ದಯಾನಿಧಿಯಾದ ಅಲ್ಲಾಹುಗೆ ಸಿಟ್ಟು ಬರುವುದಿಲ್ಲ ಹಾಗೊಂದು ವೇಳೆ ಅಲ್ಲಾಹುಗೆ ಸಿಟ್ಟು ಬಂದರೆ, ನಿಮ್ಮ ಪರವಾಗಿ ಶಿಕ್ಷೆ ಅನುಭವಿಸಲು ನಾನು ಸಿದ್ಧನಿರುವೆನೆಂದು ಬಹಿರಂಗವಾಗಿ ಪ್ರಮಾಣ ಮಾಡುವೆ. ಪ್ಲೀಸ್ ಮಕ್ಕಳೆ..

ಒತ್ತಡ ಓವರ್​ಟೇಕ್ ಮಾಡಲು ಬಿಡದಿರಿ

ರಮೇಶ್ ಅರವಿಂದ್, ಖ್ಯಾತ ಚಿತ್ರನಟ

ಎಸ್​ಎಸ್​ಎಲ್​ಸಿ ಮಕ್ಕಳಿಗೆ ಬೇಕಾಗಿರುವುದು ಶಾಂತಿಯುತ ಏಕಾಗ್ರತೆ. ಪ್ರಶ್ನೆಪತ್ರಿಕೆ ನೋಡಿದ ತಕ್ಷಣ ಕೆಲವಕ್ಕೆ ಉತ್ತರ ಗೊತ್ತಿರುವುದರಿಂದ ಖುಷಿಯಾಗುತ್ತದೆ. ಕೆಲವು ಪ್ರಶ್ನೆಗಳಿಗೆ ಉತ್ತರ ಗೊತ್ತಿರುವುದಿಲ್ಲ. ಆಗ ಒತ್ತಡ ಹೆಚ್ಚಾಗುತ್ತದೆ. ಆ ಒತ್ತಡ ನಿಮ್ಮನ್ನು ಓವರ್​ಟೇಕ್ ಮಾಡಲು ಬಿಡಬೇಡಿ. ಇದರಿಂದ ಗೊತ್ತಿರುವ ಉತ್ತರವನ್ನೂ ತಪ್ಪಾಗಿ ಬರೆಯುವ ಸಾಧ್ಯತೆ ಇರುತ್ತದೆ. ಪರೀಕ್ಷೆ ಮುಗಿಯುವವರೆಗೆ ಒಳ್ಳೆಯ ಮನಸ್ಥಿತಿಯಲ್ಲಿ ಇರುತ್ತೇನೆ ಎಂದು ನಿಮಗೆ ನೀವೇ ಪ್ರಾಮಿಸ್ ಮಾಡಿಕೊಳ್ಳಿ. ಒತ್ತಡ ಹೆಚ್ಚಾದಷ್ಟೂ ತಪು್ಪಗಳು ಜಾಸ್ತಿಯಾಗುವ ಸಾಧ್ಯತೆ ಇದೆ. ಪರೀಕ್ಷೆ ಮುಗಿದ ಮೇಲೆ ಸ್ನೇಹಿತರೊಂದಿಗೆ ಚರ್ಚೆ ಮಾಡಿ. ಮತ್ತೆ ಮತ್ತೆ ನೀವು ಮಾಡಿದ ತಪು್ಪಗಳ ಬಗ್ಗೆ ಕೊರಗುತ್ತ ಕೂರಬೇಡಿ. ಮುಂದಿನ ಪರೀಕ್ಷೆ ಬಗ್ಗೆ ಯೋಚಿಸಿ. ಮನಸ್ಸಲ್ಲಿ ಶಾಂತಿ, ಯೋಚನೆಯಲ್ಲಿ ಸ್ಪಷ್ಟತೆ, ಸಮಯದ ಮೇಲೆ ಗಮನ ನಿಮಗಿರುವ ಬ್ರಹ್ಮಾಸ್ತ್ರಗಳು. ಆಲ್ ದಿ ಬೆಸ್ಟ್ ಮಕ್ಕಳೇ.

ಕೋರ್ಟ್ ಆದೇಶವನ್ನು ಪಾಲಿಸಬೇಕು. ಸಂವಿಧಾನವನ್ನು ಗೌರವಿಸಬೇಕು. ಯಾವುದೇ ಕಾರಣಕ್ಕೂ ನಿಯಮ ಉಲ್ಲಂಘಿಸುವಂತಿಲ್ಲ. ಶಾಲೆಗಳಲ್ಲಿ ಸಮಾನ ಮನೋಭಾವ ಇರಬೇಕು. ಈ ನಿಟ್ಟಿನಲ್ಲಿ ಸರ್ಕಾರವು ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಮವಸ್ತ್ರ ಧರಿಸಿ ಬರಬೇಕೆಂಬುದಾಗಿ ವಿದ್ಯಾರ್ಥಿಗಳಿಗೆ ಸೂಚಿಸಿದೆ. ಅದರಂತೆ, ವಿದ್ಯಾರ್ಥಿಗಳು ಸಮವಸ್ತ್ರ ಧರಿಸಿಯೇ ಪರೀಕ್ಷೆಗೆ ಹಾಜರಾಗಬೇಕು. ಕಾನೂನಿಗಿಂತ ಯಾರೂ ದೊಡ್ಡವರಲ್ಲ. | ಡಾ.ಕೆ.ಸುಧಾಕರ್ ಆರೋಗ್ಯ ಸಚಿವ

ಹೆತ್ತವರು ಮಕ್ಕಳ ಪರೀಕ್ಷೆ ಬಗ್ಗೆ ಗಮನಹರಿಸಬೇಕು. ಮುಸ್ಲಿಂ ವಿದ್ಯಾರ್ಥಿನಿಯರು ಶಿಕ್ಷಣದಿಂದ ವಂಚಿತರಾಗುವ ಹಂತ ತಲುಪಿದ್ದಾರೆ, ಎಸ್ಸೆಸ್ಸೆೆಲ್ಸಿ ಪರೀಕ್ಷೆ ವಿದ್ಯಾರ್ಥಿ ಜೀವನಲ್ಲಿ ಮಹತ್ವದ ಘಟ್ಟ, ಎಲ್ಲರೂ ಪರೀಕ್ಷೆಗಳನ್ನು ಬರೆಯಬೇಕು. ಸರ್ಕಾರ, ನ್ಯಾಯಾಲಯದ ಜತೆ ಸಂಘರ್ಷಕ್ಕೆ ಇಳಿಯುವುದು ಬೇಡ. ಸುಪ್ರೀಂ ಕೋರ್ಟಿನಲ್ಲಿ ಪ್ರಕರಣ ಇತ್ಯರ್ಥಗೊಂಡು ನಮಗೆ ನ್ಯಾಯ ಸಿಗುವ ಭರವಸೆ ಇದೆ. | ಎ.ಪಿ.ಅಬೂಬಕರ್ ಮುಸ್ಲಿಯಾರ್ ಕಾಂತಪುರಂ ಇಂಡಿಯನ್ ಗ್ರ್ಯಾಂಡ್ ಮುಫ್ತಿ

ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿ

ಪ್ರವೀಣ್ ಸೂದ್, ರಾಜ್ಯ ಪೊಲೀಸ್ ಮಹಾನಿರ್ದೇಶಕ

ಎಸ್ಸೆಸ್ಸೆಲ್ಸಿ ಪರೀಕ್ಷೆ, ಫಲಿತಾಂಶದ ಮೇಲೆ ಭವಿಷ್ಯ ನಿರ್ಧಾರವಾಗುತ್ತದೆ. ವಿದ್ಯಾರ್ಥಿಗಳು ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಯಾವುದೇ ಒತ್ತಡವಿಲ್ಲದೆ ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿದರೆ ಉತ್ತಮ ಫಲಿತಾಂಶ ಪಡೆದುಕೊಳ್ಳಲು ಸಹಕಾರಿಯಾಗುತ್ತದೆ. ಭವಿಷ್ಯದಲ್ಲಿ ಐಎಎಸ್, ಐಪಿಎಸ್ ಅಧಿಕಾರಿ, ಇಂಜಿನಿಯರ್, ವೈದ್ಯರು, ಪ್ರತಿಷ್ಠಿತ ಕಂಪನಿಗಳ ಉನ್ನತ ಹುದ್ದೆ ಗಿಟ್ಟಿಸಿಕೊಳ್ಳಬೇಕು ಎಂಬುದು ಬಹಳಷ್ಟು ಮಕ್ಕಳ ಕನಸಾಗಿರುತ್ತದೆ. ಈ ಕನಸನ್ನು ನನಸು ಮಾಡಲು ಪರೀಕ್ಷೆಯ ಪ್ರತಿ ವಿಷಯದ ಮೇಲೂ ಗಮನ ಕೇಂದ್ರಿಕರಿಸಬೇಕು. ಉತ್ತಮ ಅಂಕ ಗಳಿಸಿದರೆ ತಾವು ಬಯಸಿದ ವಿಷಯಗಳಲ್ಲಿ ಮುಂದಿನ ವ್ಯಾಸಂಗ ಮಾಡಲು ಸಾಧ್ಯವಾಗುತ್ತದೆ. ಜತೆಗೆ ಹೆಚ್ಚಿನ ಆಯ್ಕೆಗಳು ವಿದ್ಯಾರ್ಥಿಗಳ ಮುಂದೆ ಇರುತ್ತದೆ. ಅದೇ, ಕಡಿಮೆ ಅಂಕ ಬಂದರೆ ಆಯ್ಕೆಗಳೂ ಕಡಿಮೆಯಾಗುತ್ತ ಹೋಗುತ್ತವೆ. ಪ್ರತಿ ವಿದ್ಯಾರ್ಥಿಯೂ ಇದನ್ನು ಗಮನದಲ್ಲಿಟ್ಟುಕೊಂಡು ಉತ್ತಮ ಅಂಕ ಗಳಿಸಲು ಪ್ರಯತ್ನಿಸಬೇಕು. ಎಲ್ಲ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೂ ಒಳ್ಳೆಯದಾಗಲಿ.

ಬೆಲ್ ಹೊಡೆದ ಸಚಿವ!

ಬಾಗಲಕೋಟೆ ಜಿಲ್ಲೆ ಜಮಖಂಡಿ ನಗರದ ಬಾಲಕರ ಸರ್ಕಾರಿ ಪರಶುರಾಮಬಾವು ಪ್ರೌಢಶಾಲೆಯ ಎಸ್​ಎಸ್​ಎಲ್​ಸಿ ಪರೀಕ್ಷಾ ಕೇಂದ್ರಕ್ಕೆ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಭಾನುವಾರ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಅವರು, 1863ರಲ್ಲಿ ಮಹಾರಾಜರು ಇಂಗ್ಲೆಂಡ್​ನಿಂದ ತರಿಸಿ ಶಾಲೆಯಲ್ಲಿ ಅಳವಡಿಸಿರುವ ಘಂಟೆಯನ್ನು ಬಾರಿಸಿದರು. ಶಾಸಕ ಆನಂದ ನ್ಯಾಮಗೌಡ, ಎಂಎಲ್​ಸಿ ಅರುಣ ಶಹಾಪುರ ಇದ್ದರು.

ಹಿಜಾಬ್​ಗಿಲ್ಲ ಅವಕಾಶ: ಹಿಜಾಬ್ ವಿಚಾರ ಸುಪ್ರೀಂ ಕೋರ್ಟ್​ನಲ್ಲಿದೆ. ಹೈಕೋರ್ಟ್ ಅಂತಿಮ ತೀರ್ಪು ಕೊಟ್ಟಿದ್ದು, ಸರ್ಕಾರದ ನೋಟಿಫಿಕೇಶನ್ ಎತ್ತಿ ಹಿಡಿದಿದೆ. ಹೈಕೋರ್ಟ್ ತನ್ನ ಆದೇಶದಲ್ಲಿ ಮೂರು ವಿಷಯ ಸ್ಪಷ್ಟವಾಗಿ ಹೇಳಿದೆ. ಹೀಗಾಗಿ ಶಾಲೆಯ ಕ್ಲಾಸ್ ರೂಮ್ಳಲ್ಲಿ ಸಮವಸ್ತ್ರ ಕಡ್ಡಾಯ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ. ಕರ್ನಾಟಕ ಶಿಕ್ಷಣ ಕಾಯ್ದೆ ಪ್ರಕಾರ ಸಮವಸ್ತ್ರದಲ್ಲಿ ಯಾವುದೇ ಧಾರ್ವಿುಕ ವಸ್ತ್ರ ಇರಬಾರದು. ಹೀಗಾಗಿ ಪರೀಕ್ಷೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳು ಆಯಾ ಶಾಲೆಗಳು ನಿಗದಿ ಪಡಿಸಿದ ಸಮವಸ್ತ್ರ ಧರಿಸಿ ಬರುವುದು ಕಡ್ಡಾಯ ಎಂದು ತಿಳಿಸಿದ್ದಾರೆ. ಸಿಎಂ ಬೊಮ್ಮಾಯಿ ಕೂಡ ಹಿಜಾಬ್ ವಿಚಾರವಾಗಿ ಈಗಾಗಲೇ ಕೋರ್ಟ್ ತೀರ್ಪು ನೀಡಿದ್ದು, ಎಲ್ಲರೂ ಆದೇಶ ಪಾಲನೆ ಮಾಡಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net