

ಬೆಂಗಳೂರು: ತಮ್ಮ ವಿರುದ್ಧ ಎಚ್.ಡಿ.ಕುಮಾರಸ್ವಾಮಿ ಅವರು ಸುದ್ದಿಗೋಷ್ಠಿಯಲ್ಲಿ ಮಾಡಿದಂತಹ ಆರೋಪಗಳು
ಸುಳ್ಳು ಮತ್ತು ದುರುದ್ದೇಶಪೂರಿತವಾಗಿವೆ ಎಂದು ಲೋಕಾಯುಕ್ತ ವಿಶೇಷ ತನಿಖಾ ತಂಡದ ಮುಖ್ಯಸ್ಥ ಎಂ.ಚಂದ್ರಶೇಖರ್ ಎಸ್‌ಐಟಿ ಅಧಿಕಾರಿಗಳಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.
ಎಸ್‌ಐಟಿ ಸಕ್ಷಮ ಪ್ರಾಧಿಕಾರದಿಂದ ಆರೋಪಿಗಳ ಪ್ರಾಸಿಕ್ಯೂಷನ್ ಮಂಜೂರಾತಿಗೆ ಕೋರಿದೆ. ಜಾಮೀನಿನ ಮೇಲಿರುವ ಆರೋಪಿ ಕುಮಾರಸ್ವಾಮಿ ನಮ್ಮ ಕರ್ತವ್ಯ ನಿಭಾಯಿಸದಂತೆ ಈ ರೀತಿ ಮಾಡಿದ್ದಾರೆ. ನನ್ನ ಮೇಲೆ ವಾಗ್ದಾಳಿ ಮಾಡುವ ಮೂಲಕ ಎಸ್‌ಐಟಿ ಅಧಿಕಾರಿಗಳ ಮನಸ್ಸಿನಲ್ಲಿ ಭಯ ಮೂಡಿಸುವುದು ಅವರ ಉದ್ದೇಶವಾಗಿದೆ. ಆದರೆ ಒಬ್ಬ ಆರೋಪಿ, ಅವನು ಎಷ್ಟೇ ಉನ್ನತ ಮತ್ತು ಶಕ್ತಿಶಾಲಿಯಾಗಿದ್ದರೂ, ಅವನು ಒಬ್ಬ ಆರೋಪಿಯಾಗಿರುತ್ತಾನೆ. ಇಂತಹ ಆರೋಪಗಳು ಮತ್ತು ಬೆದರಿಕೆಗಳಿಂದ ನಾವು ನಿರಾಶೆಗೊಳ್ಳಬಾರದು. ನಾನು ಎಸ್‌ಐಟಿ ಮುಖ್ಯಸ್ಥನಾಗಿ ನಾನು ಯಾವುದೇ ಭಯವಿಲ್ಲದೇ, ಯಾರಪರವಾಗಿ ಕೆಲಸ ಮಾಡದೇ ಆರೋಪಿಗಳ ವಿರುದ್ದ ಕ್ರಮ ಜರುಗಿಸುವ ಭರವಸೆಯನ್ನು ನಾನು ನಿಮಗೆ ನೀಡುತ್ತೇನೆ. ಎಲ್ಲಾ ಬಾಹ್ಯ ಪ್ರಭಾವಗಳಿಂದ ನಾನು ನಿಮ್ಮನ್ನು ರಕ್ಷಿಸುತ್ತೇನೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ ಎಂದು ಹೇಳಿದ್ದಾರೆ.
ಹಂದಿಯ ಜತೆ ಗುದ್ದಾಡಬೇಡಿ, ಹಂದಿಯೊಂದಿಗೆ ನೀವು ಕೊಳಕಾಗುತ್ತೀರಿ. ಆದರೆ ಹಂದಿ ಇದನ್ನೇ ಇಷ್ಟಪಡುತ್ತದೆ ಎಂಬ ಬರ್ನಾಡ್ ಶಾ ಹೇಳಿಕೆ ಉಲ್ಲೇಖ ಮಾಡಿರುವ ಅವರು, ನಮ್ಮ ಕರ್ತವ್ಯವನ್ನು ನಿರ್ವಹಿಸುವಾಗ ಆರೋಪಗಳನ್ನು ಎದುರಿಸುವುದರಿಂದ ನಾವು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಕೆಲವೊಮ್ಮೆ ನಾವು ಎದುರಿಸುವ ಅಪರಾಧಿಗಳು ಮತ್ತು ಆರೋಪಿಗಳು ನಮ್ಮ ಮೇಲೆ ಕೊಳಕು ಎಸೆಯುತ್ತಾರೆ. ಇದು ನಮ್ಮ ಕರ್ತವ್ಯವನ್ನು ನಿರ್ವಹಿಸುವುದರಿಂದ ನಮ್ಮನ್ನು ತಡೆಯಬಾರದು. ಭರವಸೆಯನ್ನು ಎಂದಿಗೂ ಕಳೆದುಕೊಳ್ಳಬೇಡಿ ಏಕೆಂದರೆ ಸತ್ಯವು ಯಾವಾಗಲೂ ಜಯಗಳಿಸುತ್ತದೆ. ನಮಗೆ ಸತ್ಯ ಮತ್ತು ದೇವರು ಮತ್ತು ನಮ್ಮ ಕಾನೂನಿನಲ್ಲಿ ನಂಬಿಕೆ ಇರಲಿ ಸತ್ಯಮೇವ ಜಯತೇ ಎಂದು ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.