

ಶಿವಮೊಗ್ಗ: ಹೊಸತನದ ಸಂಶೋಧನೆ ಮತ್ತು ನಾವೀನ್ಯ ಬದಲಾವಣೆಗಳ ಮೂಲಕ ಎಲ್ಲ ಇಂಜಿನಿಯರಿಂಗ್ ವಿಭಾಗಗಳು ವಿಶ್ವಾದ್ಯಂತ ಉದ್ಯೋಗ ಸೃಷ್ಟಿಸುವಲ್ಲಿ ಸಫಲವಾಗಿದೆ ಎಂದು ಜೆಎನ್‌ಎನ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ. ಪಿ.ಮಂಜುನಾಥ ಹೇಳಿದರು.
ನಗರದ ಜೆಎನ್‌ಎನ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಭಾನುವಾರ ಸಿಇಟಿ, ಕಾಮೆಡ್-ಕೆ ಸಂವಾದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಇಂಜಿನಿಯರಿಂಗ್ ಸೇರುವಾಗ ಯಾವ ಕೋರ್ಸ್ ಹೆಚ್ಚು ಪ್ಲೇಸ್ಮೆಂಟ್ ನೀಡುತ್ತದೆ ಎಂಬ ಪ್ರಶ್ನೆ ಸಹಜ. ಎಲ್ಲ ಕೋರ್ಸ್‌ಗಳು ತನ್ನದೇ ಪ್ರಾಮುಖ್ಯತೆ ಪಡೆದಿದ್ದು, ಕೋರ್ಸ್ ಅಧ್ಯಯನದಲ್ಲಿ ನಾವೆಷ್ಟು ತೊಡಗಿಸಿಕೊಂಡಿದ್ದೇವೆ ಎಂಬುದು ಮುಖ್ಯ. ಐಟಿ ಕ್ಷೇತ್ರ ಎಲ್ಲ ಕೋರ್ಸ್‌ಗಳ ವಿದ್ಯಾರ್ಥಿಗಳಿಗೂ ಮುಕ್ತವಾಗಿ ಅವಕಾಶ ನೀಡುತ್ತದೆ ಎಂದರು.
ಯಾವುದೇ ಕಾಲೇಜುಗಳಿಗೆ ಪ್ರವೇಶಾತಿ ಪಡೆಯುವಾಗ ರಾಷ್ಟ್ರೀಯ ಮಾನ್ಯತಾ ಮಂಡಳಿ ಮತ್ತು ನ್ಯಾಕ್ ಮಾನ್ಯತೆ ಪಡೆದಿದೆಯೇ ಎಂದು ಪರಿಶೀಲಿಸಿಕೊಳ್ಳಬೇಕು. ವೆಬ್‌ಸೈಟ್ ಮೂಲಕ ಬೋಧಕ ಸಿಬ್ಬಂದಿ, ಉದ್ಯೋಗವಕಾಶ ಚಟುವಟಿಕೆಗಳ ಕುರಿತು ಮಾಹಿತಿ ಪಡೆದುಕೊಳ್ಳಬೇಕು. ಇದರಿಂದ ವಿದ್ಯಾಸಂಸ್ಥೆಗಳ ಅಧ್ಯಾಪನದ ಗುಣಮಟ್ಟ ತಿಳಿಯಲು ಸಾಧ್ಯವಾಗಲಿದೆ. ಜತೆಗೆ ಸರ್ಕಾರ ಮತ್ತು ಕೆಲವು ಖಾಸಗಿ ಕಂಪನಿಗಳು ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಉತ್ತಮ ವಿದ್ಯಾರ್ಥಿ ವೇತನ ನೀಡುತ್ತಿದೆ. ಲಕ್ಷಾಂತರ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯುತ್ತಿದ್ದಾರೆ. ವಿದ್ಯಾರ್ಥಿ ವೇತನಗಳು ಸರ್ಕಾರದಿಂದ ನೇರವಾಗಿ ವಿದ್ಯಾರ್ಥಿಗಳ ಖಾತೆಗೆ ಹಣ ಸಂದಾಯವಾಗುವ ವ್ಯವಸ್ಥೆ ಮಾಡಲಾಗಿದೆ ಎಂದರು.
ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ವಿಭಾಗದ ಸಹ ಪ್ರಾಧ್ಯಾಪಕ ನರೇಂದ್ರ ಮಾತನಾಡಿ, ಸಿಇಟಿ ಮೂಲಕ ಕಾಲೇಜು ಮತ್ತು ಕೋರ್ಸ್‌ಗಳ ಆಯ್ಕೆ ಪ್ರಕ್ರಿಯೆಯಲ್ಲಿ ಆಪ್ಷನ್ ಎಂಟ್ರಿ ಮುಖ್ಯ ಘಟ್ಟವಾಗಿದ್ದು, ಆಯ್ಕೆ ಪ್ರಕ್ರಿಯೆಯ ವೇಳೆ ಎಚ್ಚರಿಕೆಯಿಂದಿರಿ ಎಂದು ಸಲಹೆ ನೀಡಿದರು.
ಜೆಎನ್‌ಎನ್‌ಸಿಇ ಪ್ರವೇಶಾತಿ ಸಮಿತಿ ಮುಖ್ಯಸ್ಥ ಡಾ. ಸುರೇಂದ್ರ, ರಸಾಯನವಿಜ್ಞಾನ ವಿಭಾಗದ ಮುಖ್ಯಸ್ಥ ಮೋಯಿನುದ್ದಿನ್ ಖಾನ್, ವಿವಿಧ ವಿಭಾಗಗಳ ಮುಖ್ಯಸ್ಥರಾದ ಡಾ. ಸಂಜೀವ್ ಕುಂಟೆ, ಡಾ. ಎಸ್.ವಿ.ಸತ್ಯನಾರಾಯಣ, ಡಾ. ತೇಜಸ್ವಿ, ಡಾ. ಈ.ಬಸವರಾಜ್, ಡಾ. ನಿರ್ಮಲಾ, ಡಾ. ಆನಂದರಾಮ್, ಪ್ರವೇಶಾತಿ ಸಮಿತಿಯ ಎಸ್.ಬಿ.ಹರೀಶ್, ಶಿವಾನಂದಪ್ಪ, ಮಂಜುನಾಥ ಆಚಾರ್, ಸಾಗರ್, ಅಭಿಜಿತ್, ಹೇಮಲತಾ, ಲೋಕೇಶ್, ಎನ್‌ಇಎಸ್ ಸಾರ್ವಜನಿಕ ಸಂಪರ್ಕಾಧಿಕಾರಿ ಸಿ.ಎಂ.ನೃಪತುಂಗ ಉಪಸ್ಥಿತರಿದ್ದರು. ನೂರಾರು ವಿದ್ಯಾರ್ಥಿಗಳು ಮತ್ತು ಪಾಲಕರು ಪ್ರವೇಶಾತಿ, ಆಪ್ಷನ್ ಎಂಟ್ರಿ ಕುರಿತ ಗೊಂದಲಗಳ ಕುರಿತು ಚರ್ಚಿಸಿದರು.