

| ಕೀರ್ತಿನಾರಾಯಣ ಸಿ. ಬೆಂಗಳೂರು
ವಾಹನ ಚಲಾಯಿಸುವಾಗ ಚಾಲಕನಿಗೆ ತೂಕಡಿಕೆ ಬಂದರೆ, ಮಬ್ಬು ಆವರಿಸಿದರೆ ಅಥವಾ ವಾಹನ ಲೇನ್ ತಪ್ಪಿ ಚಲಿಸಿದಲ್ಲಿ ತಕ್ಷಣವೇ ಆಡಿಯೋ ಅಥವಾ ವಿಡಿಯೋ ಮುಖೇನ ಅಲರ್ಟ್ ಮಾಡುವ ತಂತ್ರಜ್ಞಾನವನ್ನು ಕಡ್ಡಾಯವಾಗಿ ಅಳವಡಿಸುವ ವ್ಯವಸ್ಥೆ ಶೀಘ್ರದಲ್ಲೇ ಅನುಷ್ಠಾನಕ್ಕೆ ಬರಲಿದೆ.
ಕೇಂದ್ರ ಮೋಟಾರು ವಾಹನ ನಿಯಮ 1989ಕ್ಕೆ ತಿದ್ದುಪಡಿ ತಂದಿರುವ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಕರಡು ಅಧಿಸೂಚನೆ ಪ್ರಕಟಿಸಿದೆ. ವಾಣಿಜ್ಯ ವಾಹನಗಳ ಅಪಘಾತ ತಡೆಯುವ ಉದ್ದೇಶದಿಂದ ರಸ್ತೆ ಸುರಕ್ಷತಾ ಮಾನದಂಡಗಳನ್ನು ಹೆಚ್ಚಳ ಮಾಡಲಾಗಿದೆ. ಪ್ರಮುಖವಾಗಿ ಸುಧಾರಿತ ಚಾಲಕ ಸಹಾಯ ವ್ಯವಸ್ಥೆ, ಬ್ರೇಕಿಂಗ್ ತಂತ್ರಜ್ಞಾನ ಮತ್ತು ಸುರಕ್ಷತಾ ತಂತ್ರಜ್ಞಾನವನ್ನು ವಾಣಿಜ್ಯ ವಾಹನಗಳಲ್ಲಿ ಕಡ್ಡಾಯವಾಗಿ ಅಳವಡಿಸಬೇಕೆಂದು ಉಲ್ಲೇಖಿಸಲಾಗಿದೆ.
ಭಾರತದಲ್ಲಿ ರಸ್ತೆ ಅಪಘಾತಗಳ ಪ್ರಮಾಣ ಹೆಚ್ಚಿದೆ. ಕೇಂದ್ರ ಸರ್ಕಾರದ ಮಾಹಿತಿ ಪ್ರಕಾರ 2022ರಲ್ಲಿ ದೇಶಾದ್ಯಂತ 4.22 ಲಕ್ಷ ಅಪಘಾತಗಳು ವರದಿಯಾಗಿವೆ. ಕರ್ನಾಟಕದಲ್ಲಿ ಪ್ರತಿ ಎರಡು ಗಂಟೆಗೆ 9 ಅಪಘಾತಗಳಾಗುತ್ತಿವೆ. 2022ರಲ್ಲಿ ರಾಜ್ಯದಲ್ಲಿ 39,762 ರಸ್ತೆ ಅಪಘಾತಗಳಾಗಿವೆ. ತಮಿಳುನಾಡಿನಲ್ಲಿ 64,105 ಅಪಘಾತಗಳಾಗಿ 17,888 ಮಂದಿ ಮೃತಪಟ್ಟಿದ್ದಾರೆ. ಮಧ್ಯಪ್ರದೇಶದಲ್ಲಿ 54,432 ಅಪಘಾತಗಳಲ್ಲಿ 13,427 ಜನ ಸಾವನ್ನಪ್ಪಿದ್ದಾರೆ. ಉತ್ತರಪ್ರದೇಶದಲ್ಲಿ 41,746 ಅಪಘಾತ ಸಂಭವಿಸಿದ್ದು, 22,595 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಒಟ್ಟಾರೆ ಅಪಘಾತಗಳಲ್ಲಿ ಶೇ.25 ಆಕ್ಸಿಡೆಂಟ್ಗಳು ವಾಣಿಜ್ಯ ವಾಹನಗಳಿಂದಲೇ ನಡೆದಿದೆ. ಓವರ್ಲೋಡ್, ಕಳಪೆ ರಸ್ತೆ, ನಿಯಮ ಉಲ್ಲಂಘಿಸಿ ಚಾಲನೆ, ಸುರಕ್ಷತಾ ನಿಯಮಗಳನ್ನು ಪಾಲಿಸದಿರುವುದರಿಂದ ಅಪಘಾತಗಳು ಸಂಭವಿಸುತ್ತವೆ. ಶೇ.20.4 ಅಪಘಾತಗಳು ರಾತ್ರಿ ವೇಳೆ ಚಾಲಕರ ನಿದ್ರೆಯ ಮಂಪರಿನಲ್ಲೇ ನಡೆದಿವೆ. ಅಪಘಾತ ನಿಯಂತ್ರಿಸುವ ಉದ್ದೇಶದಿಂದಲೇ ಕೇಂದ್ರ ಸರ್ಕಾರ ರಸ್ತೆ ಸುರಕ್ಷತಾ ನಿಯಮಗಳನ್ನು ಇನ್ನಷ್ಟು ಬಿಗಿಗೊಳಿಸಿದೆ. 2026ರ ಏ.1ರ ನಂತರ ಹೊಸದಾಗಿ ತಯಾರಾಗುವ ಎಲ್ಲ ಮಾದರಿಯ ವಾಣಿಜ್ಯ ವಾಹನಗಳಲ್ಲಿ ಹೊಸ ಮಾನದಂಡಗಳನ್ವಯ ಸುರಕ್ಷತಾ ತಂತ್ರಜ್ಞಾನ ವ್ಯವಸ್ಥೆಯನ್ನು ಕಡ್ಡಾಯವಾಗಿ ಅಳವಡಿಸ ಬೇಕು. ಈಗಾಗಲೇ ರಸ್ತೆ ಮೇಲಿರುವ ಹಳೆಯ ವಾಹನಗಳಿಗೆ 2026ರ ಅ.1ರಿಂದ ತಿದ್ದುಪಡಿ ನಿಯಮದ ಅನ್ವಯ ಸೇಫ್ಟಿ ತಂತ್ರಜ್ಞಾನ ವ್ಯವಸ್ಥೆ ಅಳವಡಿಸಿಕೊಳ್ಳಲು ಅವಕಾಶ ಕಲ್ಪಿಸಲು ಕರಡು ಅಧಿಸೂಚನೆಯಲ್ಲಿ ವಿವರಿಸಲಾಗಿದೆ.
ಬೆಂಗಳೂರಿನಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ರಸ್ತೆ ಅಪಘಾತಗಳು ಮತ್ತು ಸಾವಿನ ಸಂಖ್ಯೆ ದ್ವಿಗುಣಗೊಂಡಿದೆ. 2020ರಲ್ಲಿ 1,928 ರಸ್ತೆ ಅಪಘಾತ ಪ್ರಕರಣಗಳು ವರದಿಯಾಗಿತ್ತು. ಆದರೆ, 2024ರಲ್ಲಿ 3,969 ಅಪಘಾತಗಳಾಗಿವೆ. 2020ರಲ್ಲಿ 344 ಮಂದಿ ಮೃತಪಟ್ಟಿದ್ದರೆ 2024ರಲ್ಲಿ 723 ಜನ ಜೀವತೆತ್ತಿದ್ದಾರೆ.
ಶಾಲಾ ಬಸ್ಗಳ ಅಪಘಾತಗಳ ಪ್ರಮಾಣವೂ ಹೆಚ್ಚಿರುವು ದರಿಂದ ಸುರಕ್ಷತಾ ನಿಯಮಗಳನ್ನು ಕಠಿಣಗೊಳಿಸಲಾಗಿದೆ. ಆಂಟಿ ಬ್ರೇಕ್ ಲಾಕಿಂಗ್ ವ್ಯವಸ್ಥೆ ಸೇರಿ ಕಡ್ಡಾಯವಾಗಿ ಕೆಲವೊಂದು ಸೇಫ್ಟಿ ತಂತ್ರಜ್ಞಾನ ಅಳವಡಿಸಿಕೊಳ್ಳಲು ಗಡುವು ನೀಡಲಾಗಿತ್ತು. ಈ ಗಡುವನ್ನು 2025ರ ಅಕ್ಟೋಬರ್ವರೆಗೂ ಕೇಂದ್ರ ಸರ್ಕಾರ ವಿಸ್ತರಣೆ ಮಾಡಿದೆ.