

ಸಾಗರ: ನಮ್ಮ ದೇಶದಲ್ಲಿ ಶೇ.90 ರಷ್ಟು ಜನ ಮದ್ಯಸೇವನೆ ಮಾಡದೆ ಬದುಕುತ್ತಿದ್ದಾರೆ. ಶೇ.9ರಷ್ಟು ಜನರಿಂದ ಶೇ.23ರಷ್ಟು ಕುಟುಂಬಗಳ ಸಂಸಾರ ಹಾಳಾಗುತ್ತಿದೆ ಎಂದು ಸಮೀಕ್ಷೆಯಿಂದ ಬಯಲಾಗಿದೆ ಎಂದು ಮಾಜಿ ಸಚಿವ ಹರತಾಳು ಹಾಲಪ್ಪ ಹೇಳಿದರು.
ಸಾಗರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮದ್ಯವರ್ಜನ ಶಿಬಿರದ ವ್ಯವಸ್ಥಾಪನಾ ಸಮಿತಿ, ಅವಿನಹಳ್ಳಿ ವಲಯದಿಂದ ಚಿಪ್ಪಳಿ ಗ್ರಾಮದಲ್ಲಿ ಆಯೋಜಿಸಿದ್ದ ಮದ್ಯವರ್ಜನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಕುಡಿತದಿಂದ ಮನೆಗಳು ಹಾಳಾಗುತ್ತಿವೆ. ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತರಾಗುತ್ತಿದ್ದಾರೆ. ಇದನ್ನು ಮನಗಂಡ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರು ಕುಡಿತದ ಚಟಕ್ಕೆ ಬಲಿಯಾದವರನ್ನು ಸಮಾಜದ ಮುಖ್ಯವಾಹಿನಿಗೆ ಕರೆ ಸಲುವಾಗಿ ಶಿಬಿರಗಳನ್ನು ಆಯೋಜಿಸಿ ಮದ್ಯವ್ಯಸನಿಗಳನ್ನು ಅದರಿಂದ ಮುಕ್ತಗೊಳಿಸುತ್ತಿದ್ದಾರೆ. ಅವರ ಸಂಕಲ್ಪದಿಂದ ಸಾವಿರಾರು ಕುಟುಂಬಗಳಿಗೆ ಪುನಃ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತಿದೆ ಎಂದರು.
ಧರ್ಮಸ್ಥಳ ಯೋಜನೆಯ ಶಿರಸಿ ಜಿಲ್ಲಾ ವಿಭಾಗದ ನಿರ್ದೇಶಕ ದಿನೇಶ್ ಮಾತನಾಡಿ, ಜನಜಾಗೃತಿ ವೇದಿಕೆಯ ಮೂಲಕ ಆಯೋಜಿಸುವ ಮದ್ಯವರ್ಜನ ಶಿಬಿರದಿಂದ ರಾಜ್ಯಾದಂತ 1.31 ಲಕ್ಷ ಮಂದಿ ಹೊಸ ಬದುಕು ಕಟ್ಟಿಕೊಂಡಿದ್ದಾರೆ ಮನುಷ್ಯನ ದೇಹದ ಇಂಜಿನ್‌ಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಬದುಕು, ಗೌರವ, ಆರ್ಥಿಕತೆ ತಂದುಕೊಡುವ ಕಾರ್ಯಕ್ರಮವೇ ಮದ್ಯವರ್ಜನ ಶಿಬಿರ ಎಂದರು.
ನಗರಸಭೆ ಅಧ್ಯಕ್ಷ ಮೈತ್ರಿ ಪಾಟೀಲ್ ಮಾತನಾಡಿ, ನಮಗೂ ಒಂದು ಕುಟುಂಬ, ಸಂಸಾರ ಇದೆ ಎಂಬ ಅರಿವು ಮದ್ಯ ಸೇವನೆ ಮಾಡುವವರಿಗೆ ಇರಬೇಕು. ಹೆಣ್ಣು ಮಕ್ಕಳಿಗೆ ಬದುಕುವ ಚೈತನ್ಯವನ್ನು ಧರ್ಮಸ್ಥಳ ಯೋಜನೆ ಕಲ್ಪಿಸಿಕೊಟ್ಟಿದೆ ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ಜನಜಾಗೃತಿ ವೇದಿಕೆ ಗೌರವ ಸಲಹೆಗಾರ ಟಿ.ಡಿ.ಮೇಘರಾಜ್, ಮದ್ಯವರ್ಜನ ಶಿಬಿರದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸುರೇಶ್ ಶೆಟ್ಟಿ, ಕಲ್ಮನೆ ಗ್ರಾಪಂ ಅಧ್ಯಕ್ಷ ಅಮರನಾಥ್, ಸದಸ್ಯರಾದ ಸುರೇಶ್ ಗೌಡ, ಮಮತಾ, ಸಂಧ್ಯಾ ಗಣಪತಿ, ಭೀಮನಕೋಣೆ ಗ್ರಾಪಂ ಅಧ್ಯಕ್ಷ ನಾಗರಾಜ್, ಬಿಲ್ಲವ ಸಮಾಜದ ಉಪಾಧ್ಯಕ್ಷ ಬಿ.ಎಸ್.ಸುಂದರ್, ಮಲ್ಲಿಕಾರ್ಜುನ್ ಹಕ್ರೆ ಇತರರಿದ್ದರು.