

ಬೆಂಗಳೂರು: ವಿಧಾನಸೌಧದ ಒಳಗಡೆ ಬಂದಿದ್ದ ವ್ಯಕ್ತಿಯೊಬ್ಬ ಹೊರಹೋಗುವಾಗ, ಆತನ ಬ್ಯಾಗ್ನಿಂದ ಮದ್ಯದ ಬಾಟಲ್ ಬಿದ್ದು ಒಡೆದು ಹೋಗಿದೆ. ಪರಿಣಾಮ ವಿಧಾನಸೌಧ ಆವರಣದಲ್ಲಿ ಎಣ್ಣೆಯ ವಾಸನೆ ಹರಡಿಕೊಂಡಿದ್ದು, ಸ್ವಚ್ಛತಾ ಸಿಬ್ಬಂದಿ ಬಂದು ಶುಚಿಗೊಳಿಸಿದ ಘಟನೆ ನಡೆದಿದೆ.
ವ್ಯಕ್ತಿಯೊಬ್ಬ ಕೆಂಗಲ್ ಗೇಟ್ ಬಳಿ ಬ್ಯಾಗ್ನಲ್ಲಿ ಮದ್ಯದ ಬಾಟಲ್ ತೆಗೆದುಕೊಂಡು ಹೋಗುತ್ತಿದ್ದ. ಹೊರಗೆ ಹೋಗುವಾಗ ಬಾಟಲ್ ಕೈ ಜಾರಿ ಬಿದ್ದಿದೆ. ಬಾಟಲ್ ಸಂಪೂರ್ಣ ಚೂರು ಚೂರಾಗಿದೆ. ಕೂಡಲೇ ಆತ ಸ್ಥಳದಿಂದ ಕಾಲ್ಕಿತ್ತಿದ್ದಾನೆ.
ಈ ಘಟನೆಯಿಂದ ಸಾರ್ವಜನಿಕ ವಲಯದಲ್ಲಿ ಹಲವು ಪ್ರಶ್ನೆಗಳು ಎದ್ದಿವೆ. ವಿಧಾನಸೌಧ ಒಳಗಡೆ ಮದ್ಯದ ಬಾಟೆಲ್ ಕರೆತರಲು ಬಿಟ್ಟವರು ಯಾರು? ಆ ವ್ಯಕ್ತಿ ಯಾರು? ಭದ್ರತಾ ವೈಫಲ್ಯ ಆಗಿದೆಯಾ? ಆತ ವಿಧಾನಸೌಧದ ಯಾವ ಕೋಣೆಯಿಂದ ಮದ್ಯದ ಬಾಟೆಲ್ ತರುತ್ತಿದ್ದ ಎಂದು ಜನರು ಪ್ರಶ್ನಿಸುತ್ತಿದ್ದಾರೆ.