ಇನ್ನು ಮನೆ ಬಾಗಿಲಿಗೇ ಮದ್ಯ!: ದುಬೈನಲ್ಲಿ ಮದ್ಯಪ್ರಿಯರಿಗೆ ಗುಡ್‌ ನ್ಯೂಸ್‌

liquor
Published on

ದುಬೈ: ಭಾರತದ ವಿವಿಧೆಡೆಗಳಲ್ಲಿ ಮದ್ಯ ಸಿಗದೇ ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನು ಕೆಲವರು ಮದ್ಯದಂಗಡಿಗಳಿಗೆ ಕನ್ನ ಹಾಕುತ್ತಿದ್ದಾರೆ. ಅದೇ ಇನ್ನೊಂದೆಡೆ ಮದ್ಯ ಮಾರಾಟವಿಲ್ಲದೇ ಸರ್ಕಾರದ ಬೊಕ್ಕಸಕ್ಕೂ ಧಕ್ಕೆ ಆಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ವಿದೇಶಿ ನೌಕರರೇ ನೆಲೆಸಿರುವ ಈ ನಗರದಲ್ಲಿ ಮದ್ಯ ಮಾರಾಟ ಪ್ರಮುಖ ಆದಾಯ ಮೂಲವೂ ಹೌದು ಆದರೆ ಜನರ ಹಿತದೃಷ್ಟಿಯಿಂದ ಭಾರತದಲ್ಲಿ ಮದ್ಯದಂಗಡಿಯನ್ನು ಸದ್ಯ ತೆರೆದಿಲ್ಲ.

ಆದರೆ ದುಬೈ ಸರ್ಕಾರ ಹೀಗೆ ಮಾಡಲಿಲ್ಲ. ಲಾಕ್‌ಡೌನ್‌ ನಿಯಮ ಕಟ್ಟುನಿಟ್ಟಿನಿಂದ ಅಲ್ಲಿ ಪಾಲನೆಯಾಗುತ್ತಿದ್ದರೂ, ಸರ್ಕಾರದ ಬೊಕ್ಕಸಕ್ಕೆ ಅಪಾರ ನಷ್ಟ ಉಂಟಾಗಿರುವ ಕಾರಣ, ಮದ್ಯ ಪೂರೈಕೆ ಮಾಡಲು ನಿರ್ಧರಿಸಿದೆ. ಆದರೆ ಮದ್ಯದಂಗಡಿ ತೆರೆದರೆ ಅದಲ್ಲಿ ರಶ್‌ ಆಗಿ ಸಮಸ್ಯೆ ಉಂಟಾಗಬಹುದು ಎನ್ನುವ ಕಾರಣಕ್ಕೆ ಮನೆಗೇ ಮದ್ಯ ಪೂರೈಕೆ ಮಾಡಲು ಮುಂದಾಗಿದೆ.

ಅಗತ್ಯ ಸಾಮಗ್ರಿಗಳನ್ನು ಮನೆಯ ಬಾಗಿಲಿಗೆ ಮುಟ್ಟಿಸುವ ಸಂಬಂಧ ಇಲ್ಲಿ ಹಲವಾರು ನಿಯಮಗಳು ಜಾರಿಯಾಗುತ್ತಿದ್ದರೆ, ಅಲ್ಲಿ ಮದ್ಯವನ್ನೂ ಅಗತ್ಯ ಸಾಮಗ್ರಿಗಳ ಸಾಲಿಗೆ ಸೇರಿಸಿ ಪೂರೈಕೆ ಮಾಡಲಾಗುತ್ತಿದೆ! ಸದ್ಯ ಎರಡು ಪ್ರಮುಖ ಸಂಸ್ಥೆಗಳು ಈ ಯೋಜನೆಯನ್ನು ಕೈಗೆತ್ತಿಕೊಂಡಿವೆ. ಸರ್ಕಾರಿ ಸ್ವಾಮ್ಯದ ಎಮಿರೇಟ್ಸ್ ಏರ್‌ಲೈನ್ಸ್‌ನ ಅಂಗಸಂಸ್ಥೆಯಾಗಿರುವ ಮೆರಿಟೈಮ್ ಮತ್ತು ಮರ್ಕೆಂಟೈಲ್ ಇಂಟರ್‌ ನ್ಯಾಷನಲ್‌ ಮದ್ಯವನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಉದ್ದೇಶಕ್ಕಾಗಿ ವೆಬ್ ಸೈಟ್ ಪ್ರಾರಂಭಿಸಿದೆ.

ಈ ವೆಬ್‌ಸೈಟ್‌ನಲ್ಲಿ ಒಂದು ಬಾಟಲಿಗೆ 530 ಡಾಲರ್‌ನ (ಸುಮಾರು 41 ಸಾವಿರ ರೂ) 1942 ಟಕಿಲಾ ಡಾನ್ ಜೂಲಿಯೊದಿಂದ ಹಿಡಿದು 4.30 ಡಾಲರ್ ಬೆಲೆಯ (ಸುಮಾರು 327 ರೂ) ಇಂಡಿಯನ್ ಬ್ಲೆಂಡೆಡ್ ವಿಸ್ಕಿಯವರೆಗೆ ಬೀಯರ್‌, ವೈನ್‌ ಎಲ್ಲವೂ ಲಭ್ಯವಿದೆ.

ಲಾಕ್‌ಡೌನ್‌ನಿಂದಾಗಿ ದುಬೈನಲ್ಲಿಯೇ ಉಳಿದುಕೊಂಡಿರುವ ವಿದೇಶಿ ಪ್ರವಾಸಿಗರು ಮದ್ಯವನ್ನು ಖರೀದಿಸಲು ತಮ್ಮ ಪಾಸ್‌ಪೋರ್ಟ್‌ ನೀಡಬೇಕು. (ಏಜನ್ಸೀಸ್‌)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net