ಅಲ್ ಹಿಂದ್ ಕೃತ್ಯದಲ್ಲೂ ಕೆಫೆ ಸ್ಫೋಟ ಶಂಕಿತರ ಕೈವಾಡ

nia
Published on

ಬೆಂಗಳೂರು: ದಕ್ಷಿಣ ಭಾರತದಲ್ಲಿ ಐಸಿಸ್ ಬಲಗೊಳಿಸುವುದು ಮತ್ತು ಹಿಂದು ಮುಖಂಡರ ಹತ್ಯೆಯಲ್ಲಿ ತೊಡಗಿದ್ದ ಅಲ್ ಹಿಂದ್ ಸಂಘಟನೆಯ ಮತ್ತಿಬ್ಬರು ಶಂಕಿತರ ವಿರುದ್ಧ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಮತ್ತೊಂದು ಹೆಚ್ಚುವರಿ ಆರೋಪಪಟ್ಟಿ ಸಲ್ಲಿಸಿದೆ.

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ನಿವಾಸಿಗಳಾದ ಅಬ್ದುಲ್ ಮಥೀನ್ ತಾಹಾ ಮತ್ತು ಮುಸ್ಸಾವೀರ್ ಹುಸೇನ್ ಶಾಜಿದ್ ವಿರುದ್ಧ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಹೆಚ್ಚುವರಿ ಆರೋಪಪಟ್ಟಿ ಸಲ್ಲಿಸಲಾಗಿದೆ. ದಿ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದಲ್ಲಿ ಏಪ್ರಿಲ್ 12ರಂದು ಬಂಧಿಸಲಾಗಿದೆ. ಇದಲ್ಲದೆ, ದೇಶದ ವಿವಿಧೆಡೆ ನಡೆದ ಹಲವು ಉಗ್ರ ಕೃತ್ಯಗಳಲ್ಲಿ ಈ ಇಬ್ಬರ ಪಾತ್ರ ಇರುವುದಾಗಿ ಎನ್‌ಐಎ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಐಸಿಸ್ ಮಾದರಿ ಅಲ್ ಹಿಂದ್ ಸಂಟನೆ ಮುಖ್ಯಸ್ಥ ಖಾಜಾ ಮೊಯಿದ್ದೀನ್, ಐಸಿಸ್ ಸಂಘಟನೆ ಬಲಗೊಳಿಸುವುದು ಮತ್ತು ಹಿಂದು ಮುಖಂಡರ ಹತ್ಯೆ ಮಾಡುವುದು ಟಾರ್ಗೆಟ್ ಮಾಡಿದ್ದ.

2019ರಲ್ಲಿ ತಮಿಳುನಾಡಿನ ಹಿಂದು ಪರ ಸಂಟನೆ ಮುಖಂಡ ಸುರೇಶ್ ಮತ್ತು ಎಎಸ್‌ಐ ವಿಲ್ಸನ್ ಹತ್ಯೆ ಮಾಡಿದ್ದರು. ಆನಂತರ ಗುರಪ್ಪನಪಾಳ್ಯದಲ್ಲಿ ಖಾಜಾ ಆಶ್ರಯ ಪಡೆದು ನಗರದ ಮೆಹಬೂಬ್ ಪಾಷ, ಕೋಲಾರದ ಸಲೀಂ, ಮಂಡ್ಯದ ಇಮ್ರಾನ್ ಖಾನ್ ತಮಿಳುನಾಡಿನ ತೌಫಿಕ್, ಸೈಯದ್ ಅಲಿ ನವಾಜ್, ಜಾಫರ್ ಹಾಗೂ ಅಬ್ದುಲ್ ಷಾಹೀಂ ಸೇರಿ ಹಲವರನ್ನು ಒಗ್ಗೂಡಿಸಿದ್ದ. ಯುವಕರನ್ನು ಜಿಹಾದಿ ಕಡೆಗೆ ಸೆಳೆಯುತ್ತಿದ್ದ. 2020ರಂದು ತಮಿಳುನಾಡು, ಕರ್ನಾಟಕ ಮತ್ತು ದೆಹಲಿಯಲ್ಲಿ ಎನ್‌ಐಎ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ 18 ಮಂದಿ ಶಂಕಿತರನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪಣಪಟ್ಟಿ ಸಲ್ಲಿಸಿದ್ದರು.

ಈ ಕೇಸಿನಲ್ಲಿ ತಾಹಾ ಮತ್ತು ಮುಸ್ಸಾವೀರ್ ತಲೆಮರೆಸಿಕೊಂಡಿದ್ದರು. ಅಬ್ದುಲ್ ಮಥೀನ್ ತಾಹಾ, ಜಿಹಾದಿಗೆ ಒಳಗಾಗಿ ಉಗ್ರ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದ. ಆನಂತರ ಮುಸ್ಸಾವೀರ್ ಸೇರಿ ಹಲವರನ್ನು ಜಿಹಾದಿ ಬೋಧನೆ ಮಾಡಿ ಐಸಿಸ್‌ಗೆ ಸೇರ್ಪಡೆ ಮಾಡುತ್ತಿದ್ದ. 2018ರಲ್ಲಿ ಅಬ್ದುಲ್ ಮಥೀನ್ ತಾಹಾ, ಐಸಿಸ್ ಆನ್‌ಲೈನ್ ಹ್ಯಾಂಡ್ಲರ್ ಭಾಯಿ ಅಲಿಯಾಸ್ ಲ್ಯಾಪ್‌ಟಾಪ್ ಭಾಯಿ ಜತೆ ಸಂಪರ್ಕದಲ್ಲಿದ್ದ. ಗುರಪ್ಪನಪಾಳ್ಯದಲ್ಲಿ ಕುಟುಂಬ ಸದಸ್ಯರ ಸಹಯೋಗದೊಂದಿಗೆ ಅಲ್-ಹಿಂದ್ ಟ್ರಸ್ಟ್ ಸ್ಥಾಪಿಸಿದ್ದ ಮೆಹಬೂಬ್ ಪಾಷಾಗೆ ಭಾಯಿಯನ್ನು ತಾಹಾ ಪರಿಚಯಿಸಿದ್ದ. ಭಾರತದಲ್ಲಿ ಐಸಿಸ್ ಚಟುವಟಿಕೆಗಳನ್ನು ಉತ್ತೇಜಿಸಲು ತನ್ನ ಸಹಚರರೊಂದಿಗೆ ಅಲ್ ಹಿಂದ್ ಟ್ರಸ್ಟ್‌ಗೆ ಸೇರಿದ್ದ ಖಾಜಾ ಮೊಹಿದೀನ್‌ಗೆ ಆನ್‌ಲೈನ್ ಹ್ಯಾಂಡ್ಲರ್ ಲಿಂಕ್ ಅನ್ನು ರವಾನಿಸಲು ಪಾಷಾ ಕಾರಣನಾಗಿದ್ದ.

ಇದಲ್ಲದೆ, ಎನ್‌ಐಎ ತನಿಖೆಯ ಪ್ರಕಾರ ಅಬ್ದುಲ್ ಮಥೀನ್ ತಾಹಾ ಮತ್ತು ಮುಸ್ಸಾವಿರ್ ಹುಸೇನ್ ಶಾಜಿಬ್ ಆರೋಪಿ ತೌಫೀಕ್ ಮತ್ತು ಅಬ್ದುಲ್ ಶಮೀಮ್‌ಗೆ ಆಶ್ರಯ ನೀಡಿದ್ದರು. ಈ ಇಬ್ಬರು ತಮಿಳುನಾಡು ಪೊಲೀಸ್ ವಿಲ್ಸನ್ ಎಸ್‌ಎಸ್‌ಐ ಅನ್ನು ಕೇರಳ-ತಮಿಳುನಾಡು ಗಡಿ ಕಲಿಯಕವಿಲ್ಲೈ ಚೆಕ್‌ಪೋಸ್ಟ್‌ನಲ್ಲಿ ಗುಂಡಿಟ್ಟು ಹತ್ಯೆ ಮಾಡಿದ್ದರು. ಈ ಪಿಸ್ತೂಲ್‌ನ್ನು ಮೆಹಬೂಬ್ ಪಾಷಾ ಪೂರೈಕೆ ಮಾಡಿದ್ದ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net