

ಬೆಂಗಳೂರು: ಶಿಕ್ಷಣತಜ್ಞ, ಅಲ್ ಅಮೀನ್ ಎಜುಕೇಷನಲ್ ಸೊಸೈಟಿ ಸಂಸ್ಥಾಪಕ ಡಾ.ಮುಮ್ತಾಜ್ ಅಹ್ಮದ್ ಖಾನ್ (86) ಗುರುವಾರ ತಡರಾತ್ರಿ ನಿಧನರಾದರು. ಶಿಕ್ಷಣ ಕ್ಷೇತ್ರದಲ್ಲಿ ತಮ್ಮದೇ ಕೊಡುಗೆ ನೀಡಿದ್ದ ಡಾ. ಮುಮ್ತಾಜ್ ಅಹ್ಮದ್ ಖಾನ್ ವಯಸ್ಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಗುರುವಾರ ರಾತ್ರಿ ಸ್ವಗೃಹದಲ್ಲಿ ಕೊನೆಯುಸಿರೆಳೆದರು. ಮೃತರು ಪತ್ನಿ, ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಶಿಕ್ಷಣದ ಮಹತ್ವವನ್ನು ಅರಿತಿದ್ದ ಅವರು, 1966ರಲ್ಲಿ ಅಲ್ ಅಮೀನ್ ಎಜುಕೇಷನಲ್ ಸೊಸೈಟಿ ಸ್ಥಾಪಿಸಿದರು. ಸದ್ಯ 250ಕ್ಕೂ ಹೆಚ್ಚಿನ ಕಾಲೇಜುಗಳನ್ನು ಸಂಸ್ಥೆ ಹೊಂದಿದ್ದು, ಪದವಿ ಪೂರ್ವ, ಪದವಿ ಸ್ನಾತಕೋತ್ತರ, ಕಾಲೇಜ್ ಆಫ್ ಫಾರ್ಮಸಿ, ಕಾನೂನು ಕಾಲೇಜುಗಳಿವೆ. ಅಲ್ಲಿ 2.5ಲಕ್ಷಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.
ವೈದ್ಯರಾಗಿದ್ದ ಖಾನ್: ಡಾ. ಮುಮ್ತಾಜ್ ಅಹ್ಮದ್ ಖಾನ್ ಮೂಲತಃ ತಮಿಳುನಾಡಿನ ತಿರುಚ್ಚಿಯವರಾಗಿದ್ದು, 1935ರ ಸೆಪ್ಟೆಂಬರ್ನಲ್ಲಿ ಯೂಸುಫ್ ಇಸ್ಮಾಯಿಲ್ ಖಾನ್ ಮತ್ತು ಸಾದನ್ ಉನ್ನೀಸಾ ದಂಪತಿ ಪುತ್ರರಾಗಿ ಜನಿಸಿದರು. 1963ರಲ್ಲಿ ಚೆನ್ನೈನ ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ಎಂಬಿಬಿಎಸ್ ಪದವಿ ಪೂರ್ಣಗೊಳಿಸಿದರು. 1964ರಲ್ಲಿ ಝುರೀನ್ ತಾಜ್ ಅವರನ್ನು ವಿವಾಹವಾದರು. ಆ ನಂತರವೂ ವ್ಯಾಸಂಗ ಮುಂದುವರಿಸಿದ್ದ ಮುಮ್ತಾಜ್, ಸ್ಟಾ್ಯನ್ಲಿ ವೈದ್ಯಕೀಯ ಕಾಲೇಜಿನಲ್ಲಿ ಶಸ್ತ್ರಚಿಕಿತ್ಸೆಯಲ್ಲಿ ಪರಿಣತಿ ಪಡೆದರು. ನಂತರ ಕುಟುಂಬ ಸಮೇತರಾಗಿ ಬೆಂಗಳೂರಿಗೆ ಸ್ಥಳಾಂತರಗೊಂಡಿದ್ದಲ್ಲದೆ, ಅಲ್ ಅಮೀನ್ ಎಜುಕೇಷನಲ್ ಸೊಸೈಟಿ ಸ್ಥಾಪಿಸಿದರು.
ಅಲಿಘಡ ವಿವಿ ಪ್ರೊ ಚಾನ್ಸಲರ್: ಶಿಕ್ಷಣ ಸಂಸ್ಥೆ ಸ್ಥಾಪಿಸುವುದರ ಜತೆಗೆ ವಿವಿಧ ಉನ್ನತ ಹುದ್ದೆಯನ್ನು ಮುಮ್ತಾಜ್ ಅಲಂಕರಿಸಿದ್ದರು. ಅಲಿಘಡ ಮುಸ್ಲಿಂ ವಿಶ್ವವಿದ್ಯಾಲಯದ ಚಾನ್ಸಲರ್ ಆಗಿಯೂ ಕಾರ್ಯನಿರ್ವಹಿಸಿದ್ದರು. ಅದೇ ರೀತಿ ಖಜಾಂಚಿಯಾಗಿಯೂ ಸೇವೆ ಸಲ್ಲಿಸಿದ್ದರು. ಅಲ್ಲಿನ ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆ ತರುವ ಹಲವು ಕಾರ್ಯ ಕೈಗೊಂಡಿದ್ದರು.
ಪತ್ರಿಕೋದ್ಯಮಕ್ಕೂ ಕೊಡುಗೆ: ಡಾ. ಮುಮ್ತಾಜ್ ಪತ್ರಿಕೋದ್ಯಮಕ್ಕೂ ಕೊಡುಗೆ ನೀಡಿದ್ದಾರೆ. ಉರ್ದು ಪತ್ರಿಕೆ ‘ಸಲಾರ್’ ಅನ್ನು ಆರಂಭಿಸಿದ್ದರು. ಅದರ ಮೂಲಕ ಉರ್ದು ಭಾಷಿಕರಿಗೆ ದೈನಂದಿನ ಸಮಾಚಾರ ದೊರೆಯುವಂತೆ ಮಾಡಿದ್ದರು.
ಹಲವು ಪ್ರಶಸ್ತಿಗೆ ಭಾಜನ: ಡಾ. ಮುಮ್ತಾಜ್ ಅಹ್ಮದ್ ಖಾನ್ ಸಮಾಜಕ್ಕೆ ನೀಡಿದ ಕೊಡುಗೆ ಗುರುತಿಸಿ ಹಲವು ಪ್ರಶಸ್ತಿ ಲಭಿಸಿವೆ. 1990ರಲ್ಲಿಯೇ ರಾಜ್ಯೋತ್ಸವ ಪ್ರಶಸ್ತಿ ದೊರೆತಿತ್ತು. ಜತೆಗೆ ಬಿಬಿಎಂಪಿ ಕೊಡುವ ಕೆಂಪೇಗೌಡ ಪ್ರಶಸ್ತಿ, ಜೂನಿಯರ್ ಜಯೀಸ್ ಪ್ರಶಸ್ತಿ, ಪಬ್ಲಿಕ್ ರಿಲೇಷನ್ ಸೊಸೈಟಿ ಆಫ್ ಇಂಡಿಯಾ ಪ್ರಶಸ್ತಿ ಹೀಗೆ ಹಲವು ಪುರಸ್ಕಾರ ಅವರನ್ನು ಅರಸಿ ಬಂದಿವೆ. ಡಾ. ಮುಮ್ತಾಜ್ ನಿಧನಕ್ಕೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
ಮುಸ್ಲಿಂ ಸಮುದಾಯದ ಶೈಕ್ಷಣಿಕ ಬೆಳವಣಿಗೆಗಾಗಿ ಶ್ರಮಿಸಿದ ಶಿಕ್ಷಣ ತಜ್ಞ ಡಾ.ಮುಮ್ತಾಜ್ ಅಹ್ಮದ್ ಖಾನ್ ಅವರ ನಿಧನ ನಾಡಿಗೆ ತುಂಬಲಾಗದ ನಷ್ಟ ಉಂಟುಮಾಡಿದೆ ಎಂದು ವಿಆರ್ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.