ಸೈಬರ್ ಅಪರಾಧ ಜಾಗೃತಿ ಜಾಥಾಗೆ ಅಕ್ಷರ ವಿದ್ಯಾ ಸಂಸ್ಥೆ ಸಾಥ್

Akshara Vidya Institute cyber crime jatha
ಜಿಲ್ಲಾ ಪೊಲೀಸ್ ಇಲಾಖೆ ಸಹಯೋಗದೊಂದಿಗೆ ಅಕ್ಷರ ವಿದ್ಯಾಸಂಸ್ಥೆ ವಿದ್ಯಾರ್ಥಿಗಳು ಶಿವಮೊಗ್ಗದ ಬಿ.ಎಚ್.ರಸ್ತೆಯಲ್ಲಿ ಸೈಬರ್ ಅಪರಾಧ ತಡೆ ಕುರಿತು ಜಾಗೃತಿ ಜಾಥಾ ನಡೆಸಿದರು.
Published on

ಶಿವಮೊಗ್ಗ: ಸಾಮಾಜಿಕ ಜಾಲತಾಣ ಬಳಸುವಾಗ ಅಥವಾ ಆನ್‌ಲೈನ್‌ನಲ್ಲಿ ಯಾವುದೇ ವಿಚಾರ ಹುಡುಕುವಾಗ ಎಚ್ಚರದಿಂದಿರಬೇಕು. ಇಲ್ಲವಾದಲ್ಲಿ ಸೈಬರ್ ವಂಚಕರ ಮೋಸದ ಬಲೆಗೆ ಬೀಳುವ ಸಾಧ್ಯತೆ ಹೆಚ್ಚು ಎಂದು ಎಎಸ್‌ಪಿ ಅನಿಲ್‌ಕುಮಾರ್ ಭೂಮರಡ್ಡಿ ಎಚ್ಚರಿಸಿದರು.

ನಗರದ ಬೆಕ್ಕಿನ ಕಲ್ಮಠದ ಎದುರು ಗುರುವಾರ ಅಕ್ಷರ ವಿದ್ಯಾ ಸಂಸ್ಥೆ ಮತ್ತು ಶಿವಮೊಗ್ಗ ಜಿಲ್ಲಾ ಪೊಲೀಸ್ ಆಶ್ರಯದಲ್ಲಿ ಆಯೋಜಿಸಿದ್ದ ಸೈಬರ್ ಅಪರಾಧಗಳ ಕುರಿತು ಜಾಗೃತಿ ಜಾಥಾ ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ಡಿಜಿಟಲ್ ಅರೆಸ್ಟ್ ಸಾಮಾನ್ಯವಾಗಿದೆ. ಪೊಲೀಸ್ ಸಮವಸ್ತ್ರದಲ್ಲಿ ವಿಡಿಯೋ ಕರೆ ಮಾಡಿ ಡಾರ್ಕ್ ವೆಬ್ ಅಥವಾ ಆನ್‌ಲೈನ್‌ನಲ್ಲಿ ಮಾದಕ ವಸ್ತುವಿನ ವ್ಯವಹಾರ ನಡೆಸಿರುವ ಬಗ್ಗೆ ಸಾಕ್ಷೃ ಸಿಕ್ಕಿದೆ. ನಿಮ್ಮನ್ನು ದಸ್ತಗಿರಿ ಮಾಡುತ್ತೇವೆ. ಹಣ ನೀಡಿದರೆ ದಸ್ತಗಿರಿ ಮಾಡಲ್ಲವೆಂದು ಹೆದರಿಸಿ ಹಣ ಹಾಕಿಸಿಕೊಂಡು ಮೋಸ ಮಾಡುತ್ತಾರೆ. ಆದರೆ ಪ್ರಸ್ತುತ ಡಿಜಿಟಲ್ ಅಥವಾ ಆನ್‌ಲೈನ್ ಕರೆ ಮಾಡಿ ದಸ್ತಗಿರಿ ಮಾಡುವ ವ್ಯವಸ್ಥೆ ಜಾರಿಯಲ್ಲಿಲ್ಲ. ಹಾಗಾಗಿ ಅಂತಹ ಮೋಸದ ಕರೆಗಳಿಗೆ ಹೆದರಿ ಹಣ ಕಳೆದುಕೊಳ್ಳಬೇಡಿ ಎಂದು ಸಲಹೆ ನೀಡಿದರು. ಎಎಸ್ಪಿ ಎ.ಜಿ.ಕಾರಿಯಪ್ಪ ಮಾತನಾಡಿ, ರಸ್ತೆ ಸಂಚಾರ ನಿಯಮ ಪಾಲನೆ ಎಲ್ಲರ ಜವಾಬ್ದಾರಿ. 18 ವರ್ಷಕ್ಕಿಂತ ಕೆಳಗಿನ ವಯಸ್ಸಿನವರು ವಾಹನ ಚಾಲನೆ ಮಾಡಬಾರದು. ವಾಹನ ಚಾಲನೆ ಮಾಡುವ ಮುನ್ನ ಕಡ್ಡಾಯವಾಗಿ ಚಾಲನಾ ಪರವಾನಗಿ ಹೊಂದಿರಬೇಕು. ಬೈಕ್ ಚಾಲಕ ಮತ್ತು ಸವಾರರಿಬ್ಬರೂ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಎಂದರು. ಬೆಕ್ಕಿನ ಕಲ್ಮಠದಿಂದ ಆರಂಭಗೊಂಡ ಜಾಥಾವು ಕರ್ನಾಟಕ ಸಂಘ, ಶಿವಪ್ಪ ನಾಯಕ ವೃತ್ತ, ಅಮೀರ್ ಅಹಮ್ಮದ್ ವೃತ್ತ, ಸಿಟಿ ಸೆಂಟ್ರಲ್ ಮಾಲ್ಗೆ ಬಂದು ಮುಕ್ತಾಯಗೊಂಡಿತು. ಅಕ್ಷರ ಪ್ರೌಢಶಾಲೆ ಪ್ರಾಚಾರ್ಯ ಡಾ. ಸಂದೀಪ್, ಪ್ರೊ. ಗಿರೀಶ್, ಸಿಇಎನ್ ಪೊಲೀಸ್ ಠಾಣೆ ಡಿವೈಎಸ್ಪಿ ಕೃಷ್ಣಮೂರ್ತಿ, ಕೋಟೆ ಠಾಣೆ ಇನ್‌ಸ್ಪೆಕ್ಟರ್ ಹರೀಶ್ ಪಟೇಲ್, ಸಂಚಾರ ಠಾಣೆ ಇನ್‌ಸ್ಪೆಕ್ಟರ್ ಸಂತೋಷ್, ಪೂರ್ವ ಸಂಚಾರ ಠಾಣೆ ನವೀನ್ ಮಠಪತಿ ಉಪಸ್ಥಿತರಿದ್ದರು.

ಮಾದಕ ದ್ರವ್ಯ ಎಂಬುದು ಸಾಮಾಜಿಕ ಪಿಡುಗು. ಹದಿಹರೆಯದವರು ಅರಿವಿಗೆ ಬಾರದೆಯೇ ಮಾದಕ ವಸ್ತುಗಳ ದಾಸ್ಯಕ್ಕೆ ಒಳಗಾಗುತ್ತಾರೆ. ಕೆಟ್ಟ ವ್ಯಕ್ತಿಗಳ ಸಹವಾಸದಿಂದ ಮೋಜಿಗೆಂದು ಶುರು ಮಾಡುವ ಮಾದಕ ದ್ರವ್ಯದ ಸೇವನೆ ನಂತರ ವ್ಯವಸನವಾಗಿ ಮಾರ್ಪಡುತ್ತದೆ. ಅದು ಸಂಪೂರ್ಣ ಆವರಿಸಿಕೊಂಡು ದೈಹಿಕ ಮತ್ತು ಮಾನಸಿಕವಾಗಿ ಜಜ್ಜರಿತರನ್ನಾಗಿಸುತ್ತದೆ. - ಎ.ಜಿ.ಕಾರಿಯಪ್ಪ, ಎಎಸ್ಪಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net