ಅಕ್ರೂರನ ವಿನಯದ ಮಾತು

1-67c5e88311d84
Published on

ಅಕ್ರೂರ ಹೇಳುತ್ತಾನೆ: ಅನೇಕರು ಬೇರೆ ಬೇರೆ ದೇವತೆಗಳನ್ನು ಪೂಜೆ ಮಾಡುತ್ತಾರೆ. ಆದರೆ ಏನು ಮಾಡಿದರೂ ಕೊನೆಗೆ ನಿನ್ನ ಬಳಿಯೇ ಬರಬೇಕು ಎಂದು ಅವರಿಗೆ ಗೊತ್ತಿಲ್ಲ. ಆಕಾಶಾತ್ ಪತಿತಂತೋಯಂ ಯಥಾ ಗಚ್ಛತಿ ಸಾಗರಂ| ಸರ್ವದೇವನಮಸ್ಕಾರಃ ಕೇಶವಂ ಪ್ರತಿಗಚ್ಛತಿ|| -ಆಕಾಶದಿಂದ ಮಳೆಯರೂಪದಲ್ಲಿ ಬಿದ್ದ ನೀರು ಸಾಗರವನ್ನು ಸೇರುವ ಹಾಗೆ ಸರ್ವದೇತೆಗಳಿಗೆ ಮಾಡಿದ ನಮಸ್ಕಾರ ಕೇಶವನಿಗೆ ಸೇರುತ್ತದೆ.

ಯಾರಿಗೇ ಅರ್ಜಿ ಹಾಕಲಿ ಮಂಜೂರಾಗುವುದು ನಿನ್ನಿಂದಲೇ. ಗಣಪತಿಯೋ, ರುದ್ರನೋ, ಇಂದ್ರನೋ, ಶಿವನೋ ಯಾವ ದೇವತೆಗಳಿಗೆ ನಮಸ್ಕಾರ ಮಾಡಲಿ ಕೊನೆಗೆ ಎಲ್ಲ ಫೈಲುಗಳು ನಿನ್ನ ಎದುರಿಗೆ ಬಂದು, ನಿನ್ನ ಕಡೆಯಿಂದ ಸಹಿ ಆದ ಮೇಲೆಯೇ ಕೆಲಸ ಆಗುವುದು. ಹಾಗೆ ತಿಳಿಯದೇ ಆ ದೇವತೆಗಳೇ ಸವೋತ್ತಮರು ಎಂದು ತಿಳಿದು ಉಪಾಸನೆ ಮಾಡಿದರೆ ಫಲ ಸಿಗುವುದಿಲ್ಲ. ಆದರೆ ಸರ್ವರಿಗೂ ಕೊನೆಗೆ ನೀನೇ ಫಲ ಕೊಡುವವನು, ನಿನ್ನ ಪ್ರೇರಣೆಯಿಂದಲೇ ಉಳಿದ ದೇವತೆಗಳು ಫಲ ಕೊಡುವವರು ಎಂದು ತಿಳಿದರೆ ಅವರಿಗೆ ಫಲ ನಿಶ್ಚಿತ. ಆದರೆ ಈ ತತ್ವ ತಿಳಿಯದಿದ್ದರೆ ದುಃಖವನ್ನು ಹೊಂದಬೇಕಾಗುತ್ತದೆ.

ಅದಕ್ಕೆ ಭಾಗವತ ಹೇಳುತ್ತದೆ: ಸರ್ವ ಏವ ಯಜಂತಿ ತ್ವಾಂ| ಸರ್ವದೇವಮಯೇಶ್ವರಮ್ || - ಹೇಗೆ ಎಲ್ಲಾ ನದಿಗಳು ಸಮುದ್ರಕ್ಕೆ ಸೇರಬೇಕೋ ಹಾಗೆ ಎಲ್ಲ ದೇವತೆಗಳಿಗೂ ಉತ್ತಮನಾದ ಪರಮಾತ್ಮನನ್ನೇ ಎಲ್ಲರೂ ಪೂಜಿಸುತ್ತಾರೆ.

ಅಕ್ರೂರ ಮತ್ತೆ ಹೇಳುತ್ತಾನೆ: ಭೂಮಿ, ಅಂತರಿಕ್ಷ ಇತ್ಯಾದಿ ಹದಿನಾಲ್ಕು ಲೋಕದೊಳಗೆ ಇರುವ ಅಚ್ಚರಿಗಳೆಲ್ಲ ನಿನ್ನ ದೇಹದೊಳಗೆ ಇದೆ ಸ್ವಾಮಿ, ನಿನ್ನ ಬಾಯಿಯಲ್ಲಿಯೇ ಯಶೋದಾದೇವಿಗೆ ಬ್ರಹ್ಮಾಂಡ ತೋರಿಸಿದೆ. ನಾನು ನಿನ್ನ ಅಂಗಗಳಲ್ಲಿ ಇಡೀ ಜಗತ್ತನ್ನು ಕಾಣುತ್ತಿದ್ದೇನೆ. ಎಲ್ಲಾ ದೇವತೆಗಳು ನಿನ್ನ ಅಂಗಗಳಿಂದ ಹುಟ್ಟಿದವರು, ಇಡೀ ಜಗತ್ತು ನಿನ್ನ ಅಂಗಗಳಿಂದ ಹುಟ್ಟಿದ್ದು. ಹೀಗೆ ಅದ್ಭುತವಾದದ್ದು ಜಗತ್ತಿನೊಳಗೆ, ಆ ಜಗತ್ತು ನಿನ್ನೊಳಗೆ, ನಿನ್ನಲ್ಲಿ ಇಲ್ಲದ ಅದ್ಭುತ ಇನ್ನೆಲ್ಲಿ ಇರಲು ಸಾಧ್ಯ?.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net