

ಮುಂಬೈ: ನಟ ಮತ್ತು ಬಿಗ್ ಬಾಸ್ 7 ಖ್ಯಾತಿಯ ಅಜಾಜ್ ಖಾನ್, ತಮ್ಮ ದಿಟ್ಟ ಮತ್ತು ವಿವಾದಾತ್ಮಕ ಹೇಳಿಕೆಗಳಿಂದಲೇ ಆಗಾಗ್ಗೆ ಸುದ್ದಿಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಆದರೆ ಈಗ ಅವರು ಆಧ್ಯಾತ್ಮಿಕ ನಾಯಕ ಪ್ರೇಮಾನಂದ್ ಜಿ ಮಹಾರಾಜ್ ( Premanand Maharaj) ಅವರಿಗೆ ತಮ್ಮ ಮೂತ್ರಪಿಂಡವನ್ನು ದಾನ ಮಾಡಲು ಮುಂದಾಗಿದ್ದಾರೆ.
ಪ್ರೇಮಾನಂದ್ ಜಿ ಮಹಾರಾಜ್ ಪ್ರಸ್ತುತ ಸಂಪೂರ್ಣ ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದಾರೆ. ಈಗಾಗಲೇ ಹಲವಾರು ಭಕ್ತರು ಮತ್ತು ಅನುಯಾಯಿಗಳು ತಮ್ಮ ಮೂತ್ರಪಿಂಡಗಳನ್ನು ದಾನ ಮಾಡಲು ಮುಂದೆ ಬಂದಿದ್ದಾರೆ. ಅಜಾಜ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವೀಡಿಯೊವನ್ನು ಹಂಚಿಕೊಂಡು ಪ್ರೇಮಾನಂದ್ ಜಿ ಮಹಾರಾಜ್ ಅವರಿಗೆ ಮೂತ್ರಪಿಂಡ ದಾನ ಮಾಡುತ್ತೇನೆಂದು ಹೇಳಿಕೊಂಡಿದ್ದಾರೆ.
ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿ, ನನಗೆ ಅವರನ್ನು ಭೇಟಿಯಾಗಬೇಕೆಂದು ಅನಿಸುತ್ತಿದೆ, ಮತ್ತು ನನ್ನ ಮೂತ್ರಪಿಂಡವು ಹೊಂದಿಕೆಯಾದರೆ, ನನ್ನದೊಂದು ಮೂತ್ರಪಿಂಡವನ್ನು ಅವರಿಗೆ ದಾನ ಮಾಡಲು ಬಯಸುತ್ತೇನೆ. ಈ ಮಹಾನ್ ವ್ಯಕ್ತಿ ಇನ್ನೂ 100 ವರ್ಷಗಳ ಕಾಲ ಬದುಕಲಿ ಮತ್ತು ನಮ್ಮ ದೇಶಕ್ಕೆ ಮತ್ತು ನಮ್ಮೆಲ್ಲರಿಗೂ ಒಳ್ಳೆಯದನ್ನು ಮಾಡಲಿ ಎಂದು ಪ್ರಾರ್ಥಿಸಿ. ನಾನು ಖಂಡಿತವಾಗಿಯೂ ನಿಮ್ಮನ್ನು ಭೇಟಿಯಾಗಲು ಬರುತ್ತೇನೆ ಎಂದಿದ್ದಾರೆ. ಈ ಸಮಯದಲ್ಲಿ, ಎಜಾಜ್ ಸ್ವಲ್ಪ ಭಾವುಕರಾಗಿ ಕಾಣಿಸಿಕೊಂಡರು.
ಕೆಲವರು ಅವರ ವೀಡಿಯೊದ ತುಣುಕುಗಳನ್ನು ಹಂಚಿಕೊಂಡರು, ಧರ್ಮ ಮತ್ತು ಖ್ಯಾತಿಗಿಂತ ಮಾನವೀಯತೆಯನ್ನು ಹೆಚ್ಚು ಇಟ್ಟಿದ್ದಕ್ಕಾಗಿ ಅವರನ್ನು ಶ್ಲಾಘಿಸಿದರು. ಪ್ರೇಮಾನಂದ್ ಜಿ ಮಹಾರಾಜ್ ಅವರು ಕಾಲಕ್ರಮೇಣ ಭಕ್ತರಿಂದ ಹಲವಾರು ಮೂತ್ರಪಿಂಡ ದಾನದ ಕೊಡುಗೆಗಳನ್ನು ಪಡೆದಿದ್ದಾರೆ, ಆದರೆ ಅವರು ಇಲ್ಲಿಯವರೆಗೆ ಅವೆಲ್ಲವನ್ನೂ ನಿರಾಕರಿಸಿದ್ದಾರೆ.
ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಅವರ ಜೊತೆ ಇತ್ತೀಚೆಗೆ ವೃಂದಾವನಕ್ಕೆ ಭೇಟಿ ನೀಡಿ ಆಧ್ಯಾತ್ಮಿಕ ಗುರು ಪ್ರೇಮಾನಂದ ಮಹಾರಾಜ್ ಅವರನ್ನು ಭೇಟಿಯಾದರು. ರಾಜ್ ಕುಂದ್ರಾ ಅವರು ಮಹಾರಾಜ್ ಮೂತ್ರಪಿಂಡ ವೈಫಲ್ಯದ ಬಗ್ಗೆ ತಿಳಿದು, ತಮ್ಮ ಮೂತ್ರಪಿಂಡವನ್ನು ದಾನ ಮಾಡಲು ಸಿದ್ಧ ಎಂದು ಹೇಳಿದ್ದರು. ಆದರೆ ಪ್ರೇಮಾನಂದ ಮಹಾರಾಜ್ ಅವರ ವಿನಂತಿಯನ್ನು ತಿರಸ್ಕರಿಸಿದರು. “ನೀವು ಸಂತೋಷವಾಗಿ, ಆರೋಗ್ಯವಾಗಿದ್ದರೆ ನನಗೆ ಸಾಕು. ಕರೆ ಬರುವವರೆಗೂ, ಮೂತ್ರಪಿಂಡದ ಕಾರಣದಿಂದಾಗಿ ನಾವು ಈ ಲೋಕವನ್ನು ಬಿಡುವುದಿಲ್ಲ. ಆದರೆ ನಾನು ನಿಮ್ಮ ದಯೆಯನ್ನು ಸ್ವೀಕರಿಸುತ್ತೇನೆ” ಎಂದು ಉತ್ತರಿಸುತ್ತಾ ಮಹಾರಾಜ್ ರಾಜ್ ಕುಂದ್ರಾ ಅವರ ನಿಸ್ವಾರ್ಥತೆಗೆ ಧನ್ಯವಾದ ಅರ್ಪಿಸಿದರು.