ಮಾಸ್ಕ್​ ಹಾಕಿದ್ದ ಡಿಸಿಪಿಯನ್ನು ಗುರುತಿಸದ ಲೇಡಿ ಕಾನ್ಸ್ಟೇಬಲ್​ಗೆ ಟ್ರಾಫಿಕ್​ ಶಿಕ್ಷೆ! ಕೆಲಸಕ್ಕೆ ಸೇರಿ ವಾರದಲ್ಲೇ ದರ್ಪ ತೋರಿದ ಡಿಸಿಪಿ

kocchi
Published on

ಕೊಚ್ಚಿ: ಅಧಿಕಾರ ಹೆಚ್ಚಾದಂತೆ ದರ್ಪ ಹೆಚ್ಚಾಗುತ್ತದೆಯಂತೆ. ಅದೇ ರೀತಿ ಅಧಿಕಾರದ ದರ್ಪದಿಂದ ಮಹಿಳಾ ಪೇದೆಯನ್ನು ಟ್ರಾಫಿಕ್​ ವಿಭಾಗದ ಕೆಲಸಕ್ಕೆ ಹೋಗುವಂತೆ ಶಿಕ್ಷೆ ನೀಡಿದ ಲೇಡಿ ಡಿಸಿಪಿ ಇದೀಗ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗುವಂತಾಗಿದೆ.

ಕೇರಳದ ಕೊಚ್ಚಿಯಲ್ಲಿ ಜನವರಿ 1ರಂದು ಡಿಸಿಪಿ ಆಗಿ ಐಶ್ವರ್ಯಾ ಅಧಿಕಾರ ವಹಿಸಿಕೊಂಡಿದ್ದಾರೆ. ನಿಷ್ಠೆಯಿಂದ ಕೆಲಸ ಮಾಡುವುದಾಗಿ ಹೇಳಿಕೊಂಡು ಕೆಲಸಕ್ಕೆ ಸೇರಿರುವ ಆಕೆ ಭಾನುವಾರದಂದು ಸ್ಥಳೀಯ ಪೊಲೀಸ್​ ಠಾಣೆಗೆ ಇನ್​ಸ್ಪೆಕ್ಷನ್​ಗೆ ತೆರಳಿದ್ದಾರೆ. ಈ ವೇಳೆ ಪೊಲೀಸ್​ ಸಮವಸ್ತ್ರವನ್ನು ಧರಿಸದೆ, ಸಾಮಾನ್ಯ ಬಟ್ಟೆಯಲ್ಲೇ ಹೋಗಿದ್ದಾರೆ. ಪೊಲೀಸ್​ ಕಾರನ್ನು ಠಾಣೆಯಿಂದ ಸ್ವಲ್ಪ ದೂರದಲ್ಲೇ ನಿಲ್ಲಿಸಿ, ಮಾಸ್ಕ್​ ಧರಿಸಿ, ಠಾಣೆಗೆ ಕಾಲಿಟ್ಟಿದ್ದಾರೆ. ಆಗ ಮಹಿಳಾ ಪೊಲೀಸ್​ ಪೇದೆಯೊಬ್ಬರು ಈಕೆಯನ್ನು ದಾರಿಯಲ್ಲೇ ತಡೆದಿದ್ದಾರೆ. ಏನಾಗಬೇಕಿತ್ತು ಎಂದು ಕೇಳಿದ್ದಾರೆ. ಉನ್ನತ ಹುದ್ದೆಯಲ್ಲಿರುವ ನನ್ನನ್ನು ಗುರುತಿಸದೆ, ದಾರಿಯಲ್ಲೇ ತಡೆದರೆಂಬ ಸಿಟ್ಟಿನಿಂದ ಐಶ್ವರ್ಯ ಆ ಪೇದೆಗೆ ಶಿಕ್ಷೆ ನೀಡಿದ್ದಾರೆ. ಎರಡು ದಿನಗಳ ಕಾಲ ಟ್ರಾಫಿಕ್​ ವಿಭಾಗದಲ್ಲಿ ಕೆಲಸ ಮಾಡುವ ಶಿಕ್ಷೆ ನೀಡಲಾಗಿದೆ.

ಪೊಲೀಸರೆಂದ ಮೇಲೆ ಯಾವಾಗಲೂ ಅಲರ್ಟ್​ ಆಗಿರಬೇಕು. ಉನ್ನತ ಅಧಿಕಾರಿಗಳ ಬಗ್ಗೆಯೂ ಮಾಹಿತಿ ಇರಬೇಕು. ಆ ಪೇದೆಗೆ ಆ ಮಾಹಿತಿ ಇಲ್ಲದ ಹಿನ್ನೆಲೆಯಲ್ಲಿ ಶಿಕ್ಷೆ ನೀಡಿದ್ದೇನೆ ಎಂದು ಆಕೆ ಹೇಳಿಕೊಂಡಿದ್ದಾರೆ. ಆದರೆ ಐಶ್ವರ್ಯ ಅಧಿಕಾರ ವಹಿಸಿಕೊಂಡು ಕೇವಲ ಒಂದು ವಾರವಷ್ಟೇ ಆಗಿರುವುದು. ಅದರಲ್ಲೂ ಮಾಸ್ಕ್​ ಧರಿಸಿದಾಗ ನಮ್ಮವರನ್ನೇ ಗುರುತಿಸುವುದು ಕಷ್ಟ. ಹೀಗಿರುವಾಗ ಆಕೆಯನ್ನು ಗುರುತಿಸುವುದು ಪೇದೆಗೆ ಕಷ್ಟವಾಗಿದೆ. ಕರೊನಾ ಕಾರಣದಿಂದ ಠಾಣೆಗೆ ಹೆಚ್ಚು ಜನರು ಬರುವಂತಿಲ್ಲ ಎನ್ನುವ ನಿಯಮವಿದ್ದು, ಅದರಿಂದಾಗಿಯೇ ಆಕೆ ವಿಚಾರಣೆ ಮಾಡಿದ್ದಾಗಿ ಹಿರಿಯ ಅಧಿಕಾರಿಗಳು ಹೇಳಿದ್ದಾರೆ. ಅಧಿಕಾರ ವಹಿಸಿಕೊಂಡು 15 ದಿನಗಳೊಳಗೆ ಇಂತಹ ಶಿಕ್ಷೆ ನೀಡುವುದು ತಪ್ಪಾಗುತ್ತದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net