

ಶಿವಮೊಗ್ಗ: ಐಶ್ವರ್ಯ ಎಸ್‌ಪಿ ಪ್ರೊಡಕ್ಷನ್ಸ್ ಶಿವಮೊಗ್ಗದಲ್ಲಿ ಕಾರ್ಯಾರಂಭಗೊಳ್ಳಲಿರುವ ನಿಮಿತ್ತ ಜಿಲ್ಲಾಮಟ್ಟದ ನೃತ್ಯ ಸ್ಪರ್ಧೆ-ನೃತ್ಯ ಸಿರಿ 2024 ಸಮಾರಂಭವನ್ನು ಡಿ.15ರಂದು ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದೆ ಎಂದು ಪ್ರೊಡಕ್ಷನ್ ಸಂಸ್ಥಾಪಕ ಸುರೇಂದ್ರ ಶಿವಮೊಗ್ಗ ಹೇಳಿದರು.
ಪ್ರೊಡಕ್ಷನ್ ಸ್ಥಾಪನೆ ಕೇವಲ ಸಿನಿಮಾ ನಿರ್ಮಾಣಕ್ಕೆ ಮಾತ್ರವಲ್ಲ, ಕಲಾವಿದರ ಭವಿಷ್ಯದ ದೃಷ್ಟಿಯಿಂದ ಕಲಾ ಸಾಧಕನಿಗೆ ಬೆಳಕಾಗಲು ಶ್ರಮಿಸಲಿದೆ. ಕನ್ನಡ ಚಿತ್ರರಂಗದ ಕಲಾಸೇವೆಯ ಹಿತದೃಷ್ಟಿಯಿಂದ ಆರಂಭಿಸಲಾಗಿದೆ. ನುರಿತ 10 ನಿರ್ದೇಶಕರು, 13 ಸಹ ನಿರ್ದೇಶಕರು, 43 ಪೋಷಕ ಕಲಾವಿದರು, 180ಕ್ಕೂ ಅಧಿಕ ತಂತ್ರಜ್ಞರನ್ನು ಒಳಗೊಂಡಿದ್ದು, ಭವಿಷ್ಯದಲ್ಲಿ ಕಿರುಚಿತ್ರ, ಧಾರವಾಹಿ, ವೆಬ್ ಸೀರಿಯಲ್, ಸಿನಿಮಾಗಳನ್ನು ಆರಂಭಿಸಲಾಗುವುದು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರೊಡಕ್ಷನ್ ಆರಂಭಿಸುವ ಭಾಗವಾಗಿ ನೃತ್ಯ ಸ್ಪರ್ಧೆ ಮತ್ತು ನೃತ್ಯ ಸಿರಿ ಹಮ್ಮಿಕೊಳ್ಳಲಾಗಿದೆ. ನೃತ್ಯಸಿರಿ ವಿಜೇತರಿಗೆ ಪ್ರಥಮ ಬಹುಮಾನ 20 ಸಾವಿರ ರೂ., ದ್ವಿತೀಯ ಬಹುಮಾನ 15 ಸಾವಿರ ರೂ. ಮತ್ತು ತೃತೀಯ ಬಹುಮಾನ 10 ಸಾವಿರ ರೂ. ಮತ್ತು ಸ್ಮರಣಿಕೆ ಇರಲಿದೆ. ಏಕ ವ್ಯಕ್ತಿ ನೃತ್ಯ ವಿಭಾಗದ ವಿಜೇತರಿಗೆ ಪ್ರಥಮ ಬಹುಮಾನ 10 ಸಾವಿರ ರೂ., ದ್ವಿತೀಯ ಬಹುಮಾನ 5 ಸಾವಿರ ರೂ. ಮತ್ತು ತೃತೀಯ ಬಹುಮಾನ 2,500 ರೂ. ಹಾಗೂ ನೆನಪಿನ ಕಾಣಿಕೆ ನೀಡಲಾಗುವುದು. ಸ್ಪರ್ಧೆಗಳಲ್ಲಿ ಭಾಗವಹಿಸಲಿಚ್ಛಿಸುವವರು ಡಿಸೆಂಬರ್ 10ರಂದು ಸಂಜೆ 6ರೊಳಗೆ ನೋಂದಾಯಿಸಿಕೊಳ್ಳಬೇಕು. ಇದೇ ವೇಳೆ ರಾಜ್ಯಮಟ್ಟದ ಸಾಧಕರು, ಪೋಷಕ ಕಲಾವಿದರನ್ನು ಸನ್ಮಾನಿಸಲಾಗುವುದು ಎಂದು ಹೇಳಿದರು.
ಹಿರಿಯ ಕಲಾವಿದ, ರಾಜ್ಯ ಸಲಹಾ ಸಮಿತಿ ಅಧ್ಯಕ್ಷ ಸುರೇಶ್ ಮಾತನಾಡಿ, ಸುರೇಂದ್ರ ಶಿವಮೊಗ್ಗ ಅವರು ಸಿನಿಮಾಗಳ ತೆರೆಮರೆಯಲ್ಲಿ ಕೆಲಸ ಮಾಡುತ್ತಿದ್ದರು. ಇದೀಗ ಪ್ರೊಡಕ್ಷನ್ ಸ್ಥಾಪಿಸುವ ಮೂಲಕ ಹೊಸ ಪೀಳಿಗೆಗೆ ದಾರಿ ಮಾಡಿಕೊಡಲು ಸಜ್ಜಾಗಿದ್ದಾರೆ. ಅವರೊಂದಿಗೆ ನಾವೆಲ್ಲರೂ ಇದ್ದೇವೆ ಎಂದರು.
ಸಿನಿಮಾಕ್ಕೆ ಬರುವವರು ಹೆಚ್ಚು ನಿರೀಕ್ಷೆ ಇಟ್ಟುಕೊಳ್ಳಬಾರದು. ಆರಂಭದಲ್ಲಿ ಬಹಳಷ್ಟು ಕಲಾವಿದರಿಗೆ ನಿರಾಸೆಗೆ ಒಳಗಾಗುವ ಸಾಧ್ಯತೆಗಳೇ ಹೆಚ್ಚು. ಹಾಗಾಗಿ ನಿರೀಕ್ಷೆ ಇಟ್ಟುಕೊಳ್ಳುವುದಕ್ಕಿಂತ ಕೊಟ್ಟಷ್ಟು ಕೆಲಸ ಮಾಡುವ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು. ಇಲ್ಲವಾದರೆ ಟೀಕೆ, ಟಿಪ್ಪಣಿಗಳನ್ನು ಎದುರಿಸಬೇಕಾಗುತ್ತದೆ. ಹಲವರು ಸೋತು ಕಣ್ಣೀರು ಹಾಕುವುದನ್ನೂ ನೋಡಿದ್ದೇವೆ. ಕಲಾವಿದರು ಮುಖ್ಯವಾಗಿ ವೃತ್ತಿ ಮತ್ತು ಪ್ರವೃತ್ತಿ ಎರಡನ್ನೂ ಹೊಂದಿರಬೇಕು. ಪ್ರೊಡಕ್ಷನ್ ಮೂಲಕ ಹೊಸ ಕಲಾವಿದರನ್ನು ಹುರಿದುಂಬಿಸುವ ಕೆಲಸ ಆಗಬೇಕು ಎಂದು ತಿಳಿಸಿದರು.
ಪ್ರಮುಖರಾದ ಗುಬ್ಬಿ ನಟರಾಜ್, ಎಸ್.ಎನ್.ಫಣೀಶ್ ಕಶ್ಯಪ್, ಎಂ.ಸಮೀವುಲ್ಲಾ, ಸಿ.ಆರ್.ಶಿವಕುಮಾರ, ಲಕ್ಷ್ಮೀ ನಾಗೇಶ್, ಜಯಮಾಲಾ ಶೆಟ್ಟಿ, ಪ್ರೇಮಾ ಮತ್ತಿತರರಿದ್ದರು.