

ಬೆಂಗಳೂರು: ಐಶ್ವರ್ಯಾ ಗೌಡ ಚಿನ್ನಾಭರಣ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಡಿಕೆ ಸುರೇಶ್ ಅವರು ಇಂದು (08) ಎರಡನೇ ಬಾರಿಗೆ ಎನ್‌ಫೋರ್ಸ್ಮೆಂಟ್ ಡೈರೆಕ್ಟೋರೇಟ್ (ಇಡಿ) ಮುಂದೆ ವಿಚಾರಣೆಗೆ ಹಾಜರಾದರು.
ಈ ಹಿಂದೆಯೂ ಸಹ ಇಡಿ, ಡಿಕೆ ಸುರೇಶ್ ಅವರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಕರೆದಿತ್ತು. ವಿಚಾರಣೆಯಲ್ಲಿ ಸುರೇಶ್, ನಾನು ಯಾವುದೇ ಹಣಕಾಸು ವ್ಯವಹಾರಕ್ಕೂ ಸಂಬಂಧಪಟ್ಟಿಲ್ಲ. ಈ ಪ್ರಕರಣಕ್ಕೆ ನನ್ನ ಸಂಪರ್ಕವಿಲ್ಲ, ಕಾನೂನು ಪ್ರಕ್ರಿಯೆಗೆ ನಾನು ಪೂರ್ಣ ಸಹಕಾರ ನೀಡುತ್ತೇನೆ ಎಂದು ಪ್ರತಿಕ್ರಿಯೆ ನೀಡಿದ್ದರು.
ಅಂದಹಾಗೆ ಪ್ರಕರಣ ಸಂಬಂಧ ಮತ್ತಷ್ಟು ಮಾಹಿತಿ ಸಂಗ್ರಹಿಸಲು ಇಡಿ ಅಧಿಕಾರಿಗಳು ಮತ್ತೆ ನೋಟಿಸ್ ಜಾರಿ ಮಾಡಿ ಇಂದು ಅವರ ವಿಚಾರಣೆ ನಡೆಸಿದರು. ಡಿಕೆ ಸುರೇಶ್ ಅವರನ್ನು ಮಾತ್ರ ಕಚೇರಿ ಒಳಗೆ ಕರೆದುಕೊಂಡು ಹೋಗಿ ವಿಚಾರಣೆಗೆ ಒಳಪಡಿಸಲಾಯಿತು.
ಇನ್ನೂ ಈ ಬಗ್ಗೆ ಬೆಂಗಳೂರಿನಲ್ಲಿ ಜಾರಿ ನಿರ್ದೇಶನಾಲಯ ಬಳಿ ಮಾತನಾಡಿದ ಅವರು, ಅನ್ಯಾಯಕ್ಕೆ ಒಳಗಾಗಿದ್ದವರು ಏನು ಮಾಹಿತಿ ಕೊಟ್ಟಿದ್ದಾರೋ ಗೊತ್ತಿಲ್ಲ. ಇಡಿ ಅಧಿಕಾರಿಗಳು ನನ್ನನ್ನು ಕರೆದಿದ್ದಕ್ಕೆ ಬಂದು ಹೇಳಿಕೆ ನೀಡಿದ್ದೇನೆ. ವೈಯಕ್ತಿಕ ಆಸ್ತಿ ಮತ್ತು ದಾಖಲೆ ಕೇಳಿದ್ದರು ಅದನ್ನು ಕೊಟ್ಟಿದ್ದೇನೆ. ಹೇಗೆ ಈ ಪ್ರಕರಣಕ್ಕೆ ನನ್ನ ಲಿಂಕ್ ಮಾಡಿದ್ದರೋ ಗೊತ್ತಿಲ್ಲ. ದಾಖಲೆಗಳನ್ನು ಪರಿಶೀಲನೆ ಮಾಡುತ್ತೇವೆ ಎಂದಿದ್ದಾರೆ ಡಿ.ಕೆ ಸುರೇಶ್ ಹೇಳಿದ್ದಾರೆ
(ಏಜೆನ್ಸೀಸ್)
ಐಶ್ವರ್ಯಾ ಗೌಡ ಅವರು ಚಿನ್ನ ಮತ್ತು ಹಣ ಹೂಡಿಕೆಗೆ ದುಪ್ಪಟ್ಟು ಲಾಭ ಕೊಡಿಸುತ್ತೇನೆ ಎಂದು ಹೇಳಿ ಹಲವು ಚಿನ್ನಾಭರಣ ವ್ಯಾಪಾರಿಗಳಿಂದ ಚಿನ್ನ ಪಡೆದುಕೊಂಡಿದ್ದರು. ಆದರೆ ಹಣವನ್ನೂ ನೀಡಿಲ್ಲ, ಚಿನ್ನವನ್ನೂ ವಾಪಸ್ ಮಾಡಿಲ್ಲ ಎಂದು ಕೆಲ ಚಿನ್ನಾಭರಣ ವ್ಯಾಪಾರಿಗಳು ಪೊಲೀಸರಿಗೆ ದೂರು ನೀಡಿದ್ದರು. ಹಣ ವಾಪಸ್ ಕೇಳಿದಾಗ, ತಾನು ಡಿ.ಕೆ.ಸುರೇಶ್ ಅವರ ಸೋದರಿ ಎಂದು ಹೇಳಿ ಬೆದರಿಕೆ ಹಾಕಿದ್ದರು ಎಂದು ದೂರಿನಲ್ಲಿ ವಿವರಿಸಿದ್ದರು. ನನ್ನ ಹೆಸರನ್ನು ದುರುಪಯೋಗ ಮಾಡಿಕೊಳ್ಳಲಾಗಿದೆ ಎಂದು ಡಿ.ಕೆ.ಸುರೇಶ್ ಅವರು ಸಹ ಪೊಲೀಸರಿಗೆ ದೂರು ನೀಡಿದ್ದರು.