ವಾಯುಪಡೆಗೆ ಭೀಮಬಲ; ರಫೇಲ್ ಕಂಡರೆ ಶತ್ರುಗಳಿಗೂ ಭಯ, ಚೀನಾ ಮತ್ತು ಪಾಕಿಸ್ತಾನಕ್ಕೆ ಆತಂಕ

edit 1
Published on

ಶಸ್ತ್ರಾಸ್ತ್ರಗಳ ಬಲದ ಮೇಲೆಯೇ ಅನ್ಯರಾಷ್ಟ್ರಗಳನ್ನು ಕೆಣಕುವ ಚೀನಾ ಮತ್ತು ಡ್ರಾ್ಯಗನ್ ರಾಷ್ಟ್ರದ ಬೆಂಬಲ ತನಗಿದೆ ಎಂದು ಬೀಗುವ ಪಾಕಿಸ್ತಾನಕ್ಕೂ ರಫೇಲ್ ಯುದ್ಧವಿಮಾನ ಆತಂಕ ಹುಟ್ಟಿಸಿದೆ. ಫ್ರಾನ್ಸ್​ನೊಂದಿಗೆ ನರೇಂದ್ರ ಮೋದಿ ಸರ್ಕಾರ ಪರಿಷ್ಕೃತ ಒಪ್ಪಂದ ಮಾಡಿಕೊಂಡ ನಾಲ್ಕು ವರ್ಷಗಳ ತರುವಾಯ ಮತ್ತು ಭಾರತದಲ್ಲಿ ನಡೆದ ‘ರಾಜಕೀಯ ಸಮರ’ದ ನಂತರ ಕಡೆಗೂ ಮೊದಲ ಹಂತದಲ್ಲಿ ಐದು ರಫೇಲ್ ಯುದ್ಧ ವಿಮಾನಗಳು ವಾಯುಪಡೆಗೆ ಸೇರುವ ಮೂಲಕ, ಅದರ ಬಲ ಹೆಚ್ಚಿಸಿವೆ. ಈ ಕುರಿತಾದ ವಿವರಣೆ ಇಲ್ಲಿದೆ.

ಫ್ರಾನ್ಸ್​ನಿಂದ ಸೋಮವಾರ ಹೊರಟಿದ್ದ ಮೊದಲ ಬ್ಯಾಚ್​ನ ಐದು ರಫೇಲ್ ಯುದ್ಧ ವಿಮಾನಗಳು ಬುಧವಾರ ಮಧ್ಯಾಹ್ನ 3.15ಕ್ಕೆ ಹರಿಯಾಣದ ಅಂಬಾಲಾ ವಾಯುನೆಲೆಯಲ್ಲಿ ಇಳಿದಿವೆ. ವಿಶೇಷ ಜಲಫಿರಂಗಿ ಮೂಲಕ ಇವುಗಳಿಗೆ ಸ್ವಾಗತ ಕೋರಲಾಯಿತು. ಈ ಯುದ್ಧ ವಿಮಾನಗಳ ಸೇರ್ಪಡೆಯಿಂದ ಭಾರತದ ವಾಯುಪಡೆಗೆ ಭೀಮಬಲ ಬಂದಿದೆ. ಚೀನಾ ಜತೆಗಿನ ಗಡಿ ಬಿಕ್ಕಟ್ಟಿನ ನಡುವೆಯೇ ಈ ಅತ್ಯಾಧುನಿಕ ವಿಮಾನಗಳ ಲಭ್ಯತೆ ಅತ್ಯಂತ ಮಹತ್ವ ಪಡೆದುಕೊಂಡಿದೆ. ರಫೇಲ್ ಯುದ್ಧ ವಿಮಾನಗಳು ವಿಶ್ವದಲ್ಲೇ ಅತ್ಯಾಧುನಿಕವಾಗಿದ್ದು, ಯಾವುದೇ ಕಠಿಣ ಕಾರ್ಯಾಚರಣೆಯನ್ನೂ ಯಶಸ್ವಿಯಾಗಿ ನಡೆಸಬಲ್ಲವು. 2 ದಶಕದ ಹಿಂದೆ ರಷ್ಯಾದಿಂದ ಸುಖೋಯ್ ವಿಮಾನಗಳನ್ನು ಖರೀದಿಸಲಾಗಿತ್ತು. ಇದಾದ ಬಳಿಕ ರಫೇಲ್ ಖರೀದಿ ವಾಯುಪಡೆಗೆ ದೊಡ್ಡ ಶಕ್ತಿ ತಂದುಕೊಟ್ಟಿದೆ. ಒಟ್ಟು 36 ರಫೇಲ್ ವಿಮಾನಗಳ ಪೈಕಿ ಈಗಾಗಲೇ 10 ವಿಮಾನಗಳನ್ನು ಭಾರತಕ್ಕೆ ಹಸ್ತಾಂತರ ಮಾಡಲಾಗಿದೆ. ಸದ್ಯ ಐದನ್ನು ಮಾತ್ರ ಭಾರತಕ್ಕೆ ತರಲಾಗಿದೆ. ತರಬೇತಿಯ ಉದ್ದೇಶದಿಂದ ಇನ್ನು 5 ವಿಮಾನ ಫ್ರಾನ್ಸ್​ನ ಡಸಾಲ್ಟ್ ಏವಿಯೇಷನ್ ಸಂಸ್ಥೆ ಬಳಿಯಿದೆ. ರಫೇಲ್ ವಿಮಾನ ನಿರ್ವಹಣೆಗೆ ಸಂಬಂಧಿಸಿ ಭಾರತೀಯ ವಾಯುಪಡೆಯ ಪೈಲಟ್​ಗಳು ಹಾಗೂ ಇತರ ಸಿಬ್ಬಂದಿಗೆ ಕಂಪನಿಯೇ ತರಬೇತಿ ನೀಡುತ್ತಿದೆ.

ಸ್ವಾಗತ ಕೋರಿದ ಪ್ರಧಾನಿ: ರಫೇಲ್ ಯುದ್ಧವಿಮಾನ ಅಂಬಾಲಾ ವಾಯುನೆಲೆಗೆ ಬಂದಿಳಿದ ವಿಡಿಯೋ ಟ್ವೀಟ್ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಅವುಗಳಿಗೆ ಸ್ವಾಗತ ಕೋರಿ, ಸಂಸ್ಕೃತ ಶ್ಲೋಕವೊಂದನ್ನೂ ಅವರು ಟ್ವೀಟ್ ಮಾಡಿದ್ದಾರೆ.

ರಾಷ್ಟ್ರ ರಕ್ಷಾ ಸಮಂ ಪುಣ್ಯಂ | ರಾಷ್ಟ್ರ ರಕ್ಷಾ ಸಮಂ ವ್ರತಂ|

ರಾಷ್ಟ್ರ ರಕ್ಷಾ ಸಮಂ ಯಜ್ಞೊ | ದೃಷ್ಟೋ ನೈವ ಚ ನೈವ ಚ |

ರಾಷ್ಟ್ರರಕ್ಷಣೆಗೆ ಸಮಾನವಾದ ಪುಣ್ಯ, ಯಜ್ಞ, ವ್ರತ ಬೇರೆ ಯಾವುದೂ ಇಲ್ಲ ಎಂದಿದ್ದಾರೆ. ವಾಯುಪಡೆಯ ಘೋಷವಾಕ್ಯವನ್ನೂ ಅವರು ಉಲ್ಲೇಖ ಮಾಡಿದ್ದಾರೆ.

ಅಂಬಾಲಾದಲ್ಲೇ ಏಕೆ ನಿಯೋಜನೆ?: ಅಂಬಾಲಾ ವಾಯುನೆಲೆ ಚೀನಾ ಗಡಿಯಿಂದ 200 ಕಿ.ಮೀ. ದೂರದಲ್ಲಿದೆ. ಜತೆಗೆ ಪಾಕಿಸ್ತಾನ ಗಡಿಯನ್ನೂ ತ್ವರಿತವಾಗಿ ತಲುಪಬಹುದಾಗಿದೆ. ಲಡಾಖ್ ಗಡಿಯಲ್ಲಿ ಚೀನಾದ ಆಕ್ರಮಣಕಾರಿ ನೀತಿ ಹಾಗೂ ಕಾಶ್ಮೀರದಲ್ಲಿ ಪಾಕಿಸ್ತಾನದ ಉಗ್ರ ಚಟುವಟಿಕೆಯನ್ನು ಗಮನದಲ್ಲಿ ಇಟ್ಟುಕೊಂಡು, ಎರಡೂ ದೇಶಗಳಿಗೆ ಎಚ್ಚರಿಕೆ ಸಂದೇಶ ನೀಡುವ ಉದ್ದೇಶದಿಂದ ರಫೇಲ್ ವಿಮಾನಗಳನ್ನು ಅಂಬಾಲಾ ವಾಯುನೆಲೆಯಲ್ಲಿ ನಿಯೋಜನೆ ಮಾಡಲು ನಿರ್ಧರಿಸಲಾಗಿದೆ.

ಹೀಗಿದೆ ಒಪ್ಪಂದ: 2016ರಲ್ಲಿ ಫ್ರಾನ್ಸ್​ಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ರಫೇಲ್ ಒಪ್ಪಂದವನ್ನು ಅಂತಿಮಗೊಳಿಸಿದ್ದರು. ಹಿಂದಿನ ಯುಪಿಎ ಸರ್ಕಾರ ಮಾಡಿಕೊಂಡಿದ್ದ ಒಪ್ಪಂದವನ್ನು ರದ್ದು ಮಾಡಿ, ಹೊಸ ಒಡಂಬಡಿಕೆ ಘೋಷಿಸಿದ್ದರು. ಇದರ ಪ್ರಕಾರ -ಠಿ; 58 ಸಾವಿರ ಕೋಟಿ ವೆಚ್ಚದಲ್ಲಿ 36 ರಫೇಲ್ ಯುದ್ಧವಿಮಾನಗಳನ್ನು ಭಾರತ ಖರೀದಿ ಮಾಡಲಿದೆ. 36 ವಿಮಾನಗಳಲ್ಲಿ 6 ತರಬೇತಿ ವಿಮಾನಗಳು. ಉಳಿದ 30 ಯುದ್ಧವಿಮಾನಗಳು. ಯುದ್ಧವಿಮಾನಗಳು ಏಕ ಆಸನದ ವಿಮಾನವಾಗಿದ್ದು, ತರಬೇತಿ ವಿಮಾನಗಳು ಎರಡು ಆಸನ ಹೊಂದಿರುತ್ತವೆ.

ಹಲವು ವರ್ಷಗಳ ಪ್ರಕ್ರಿಯೆ: 2007ರಲ್ಲಿ ಯುಪಿಎ ಸರ್ಕಾರ ವಾಯುಪಡೆಗಾಗಿ 126 ವಿಮಾನಗಳ ಖರೀದಿಗೆ ಅನುಮತಿ ನೀಡಿತ್ತು. ಬಿಡ್ಡಿಂಗ್ ಪ್ರಕ್ರಿಯೆಯೂ ಆರಂಭವಾಗಿತ್ತು. ಫ್ರಾನ್ಸ್​ನ ಡಸಲ್ಟ್ ಏವಿಯೇಷನ್ ಕಂಪನಿ ಕಡಿಮೆ ಮೊತ್ತ ಬಿಡ್ ಮಾಡುವ ಮೂಲಕ ಒಪ್ಪಂದ ತನ್ನದಾಗಿಸಿಕೊಂಡಿತ್ತು. ರಫೇಲ್ ವಿಮಾನ ಭಾರತೀಯ ವಾಯುಪಡೆ ಸೇರಲು ಅರ್ಹ ಎಂದು 2012ರಲ್ಲಿ ಘೋಷಿಸಲಾಯಿತು. ಬಳಿಕ ವಿಮಾನ ಕಂಪನಿ ಜತೆ ಕೇಂದ್ರ ಸರ್ಕಾರ ಮಾತುಕತೆ ಆರಂಭಿಸಿತು. ಹಲವು ತಾಂತ್ರಿಕ ಕಾರಣಗಳಿಂದಾಗಿ 2014ರವರೆಗೂ ಮಾತುಕತೆ ಮುಂದುವರಿಯಿತು. ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ 2015ರಲ್ಲಿ ಫ್ರಾನ್ಸ್​ಗೆ ಭೇಟಿ ನೀಡಿ, ರಫೇಲ್ ಯುದ್ಧವಿಮಾನ ಕುರಿತು ಹೊಸ ಒಪ್ಪಂದ ಮಾಡಿಕೊಂಡರು. ಹಾರಾಟಕ್ಕೆ ಸಿದ್ಧವಾಗಿರುವ 36 ವಿಮಾನಗಳನ್ನು ಭಾರತಕ್ಕೆ ನೀಡುವಂತೆ ಒಪ್ಪಂದ ಮಾಡಿಕೊಳ್ಳಲಾಯಿತು. ಬದೌರಿಯಾ ನಂಟು

ರಫೇಲ್ ಹಾರಾಟ ನಡೆಸಿದ ಪ್ರಥಮ ಭಾರತೀಯ ಪೈಲೆಟ್​ಗಳ ತಂಡದಲ್ಲಿ ಈಗಿನ ವಾಯುಪಡೆ ಮುಖ್ಯಸ್ಥ ಆರ್ ಕೆ ಎಸ್ ಬದೌರಿಯಾ ಕೂಡ ಒಬ್ಬರು! ಕಳೆದ ವರ್ಷ ಜುಲೈನಲ್ಲಿ ನಡೆದ ಭಾರತ ಹಾಗೂ ಫ್ರಾನ್ಸ್ ದೇಶಗಳ ಜಂಟಿ ಸಮರಾಭ್ಯಾಸ (ಗರುಡ) ದಲ್ಲಿ ಬದೌರಿಯಾ ಒಂದು ಗಂಟೆ ಕಾಲ ರಫೇಲ್ ಯುದ್ಧವಿಮಾನವನ್ನು ಹಾರಾಡಿಸಿದ್ದರು. ಫ್ರಾನ್ಸ್ ರಕ್ಷಣಾ ವಿಭಾಗದೊಂದಿಗೆ ರಫೇಲ್ ಒಪ್ಪಂದ ಕುರಿತು ಸಮಾಲೋಚನೆ ನಡೆಸಲು ರಚಿತಗೊಂಡ ಸಮಿತಿಯ ಅಧ್ಯಕ್ಷರಾಗಿದ್ದ ಬದೌರಿಯಾ ಅಂಬಾಲಾಕ್ಕೆ ರಫೇಲ್ ಬಂದಳಿದಾಗ ಅದನ್ನು ಸ್ವಾಗತಿಸಿ, ಹೆಮ್ಮೆಯ ಕ್ಷಣಗಳನ್ನು ಅನುಭವಿಸಿದರು. ರಫೇಲ್ ಒಪ್ಪಂದವನ್ನು ಯಶಸ್ವಿಗೊಳಿಸಿದ ಕಾರಣಕ್ಕಾಗಿಯೇ ಬದೌರಿಯಾರನ್ನು ವಾಯುಪಡೆ ಮುಖ್ಯಸ್ಥರನ್ನಾಗಿಸಲಾಯಿತು (2019 ಅಕ್ಟೋಬರ್) ಎಂಬ ಚರ್ಚೆಗಳೂ ಆಗ ಕೇಳಿಬಂದಿದ್ದವು.

ಚೀನಾಕ್ಕೆ ಸಿಂಗ್ ಪರೋಕ್ಷ ಎಚ್ಚರಿಕೆ: ರಫೇಲ್ ಆಗಮನದಿಂದ ಭಾರತದ ವಾಯುಪಡೆ ಸಾಮರ್ಥ್ಯ ಹೆಚ್ಚಿದೆ. ಭಾರತಕ್ಕೆ ಎದುರಾಗುವ ಯಾವುದೇ ಸವಾಲನ್ನು ಎದುರಿಸಲು ವಾಯುಪಡೆ ಸಿದ್ಧವಾಗಿದೆ. ಭಾರತದ ಸಾರ್ವ ಭೌಮತೆಗೆ ಧಕ್ಕೆ ತರುವವರಿಗೆ ಇದು ಭಯ ಮೂಡಿಸಿರಬಹುದು ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ. ಪರೋಕ್ಷವಾಗಿ ಚೀನಾವನ್ನು ಉಲ್ಲೇಖಿಸಿ ಅವರು ಈ ಹೇಳಿಕೆ ನೀಡಿದ್ದಾರೆ. ಭಾರತದ ವಾಯುಪಡೆಯಲ್ಲಿ ಈಗ ಹೊಸ ಶಕೆ ಆರಂಭವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ಕಾಂಗ್ರೆಸ್ ಪ್ರಶ್ನೆ: ಭಾರತಕ್ಕೆ ರಫೇಲ್ ಯುದ್ಧವಿಮಾನ ಆಗಮಿಸಿರುವುದನ್ನು ಕಾಂಗ್ರೆಸ್ ಸ್ವಾಗತಿಸಿದೆ. ಆದರೆ, -ಠಿ; 526 ಕೋಟಿ ಮೊತ್ತದ ವಿಮಾನವನ್ನು -ಠಿ; 1670 ಕೋಟಿಗೆ ಏಕೆ ಖರೀದಿಸಲಾಗಿದೆ ಎಂದು ಪ್ರಶ್ನಿಸಿದೆ. 126 ರಫೇಲ್ ಬದಲು ಕೇವಲ 36 ವಿಮಾನವನ್ನು ಯಾಕೆ ಖರೀದಿ ಮಾಡಲಾಯಿತು? ಮೇಕ್ ಇನ್ ಇಂಡಿಯಾ ಬದಲು ಮೇಕ್ ಇನ್ ಫ್ರಾನ್ಸ್ ಯಾಕೆ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲಾ ಟ್ವೀಟ್ ಮಾಡಿದ್ದಾರೆ. ನೆಮ್ಮದಿ ತಂದಿದೆ ಎಂದ ಧನೋವಾ

ವಾಯುಪಡೆಗೆ ರಫೇಲ್ ಯುದ್ಧವಿಮಾನ ಸೇರ್ಪಡೆ ಆಗಿರುವುದು ನೆಮ್ಮದಿ ತಂದಿದೆ ಎಂದು ಹೇಳಿರುವ ವಾಯುಪಡೆ ಮಾಜಿ ಮುಖ್ಯಸ್ಥ ಬಿ.ಎಸ್.ಧನೋವಾ, ಇದು ಏಕೆ ಅನಿವಾರ್ಯವಾಗಿತ್ತು ಎಂಬುದನ್ನೂ ವಿವರಿಸಿದ್ದಾರೆ. 2019ರಲ್ಲಿ ಬಾಲಾಕೋಟ್ ಸರ್ಜಿಕಲ್ ದಾಳಿಯ ನೇತೃತ್ವ ವಹಿಸಿದವರ ಪೈಕಿ ಧನೋವಾ ಕೂಡ ಒಬ್ಬರಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net