

ರಾಣೆಬೆನ್ನೂರ: ಮಠದ ಪರಂಪರೆ, ಧಾಮಿರ್ಕ ಆಚಾರ, ವಿಚಾರಗಳು ನೆಲೆಯೂರಿರುವ ಕ್ಷೇತ್ರಗಳು ಪಾವಿತ್ರತೆಯಿಂದ ಕೂಡಿರುತ್ತವೆ. ಅಂತಹ ಪವಿತ್ರವಾದ ಶಕ್ತಿ ಕೇಂದ್ರವಾಗಿ ಹೊರಹೊಮ್ಮಿರುವುದಕ್ಕೆ ಐರಣಿ ಹೊಳೆಮಠವೆ ಸಾಕ್ಷಿಯಾಗಿದೆ ಎಂದು ಐರಣಿ ಹೊಳೆಮಠದ ಶ್ರೀ ಬಸವರಾಜ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ತಾಲೂಕಿನ ಐರಣಿ ಹೊಳೆಮಠದಲ್ಲಿ ಶನಿವಾರ ಏರ್ಪಡಿಸಿದ್ದ ಶ್ರೀ ಗುರು ಮುಪ್ಪಿನಾರ್ಯ ಸ್ವಾಮೀಜಿಯವರ 41ನೇ ವರ್ಷದ ಪುಣ್ಯರಾಧನೆ, ಸಾಮೂಹಿಕ ವಿವಾಹ, ತುಲಾಭಾರ, ಅಂಬಾರಿ ಉತ್ಸವ, ರಥೋತ್ಸವ ಹಾಗೂ ಧರ್ಮಸಭೆ ಸಮಾರಂಭ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ಐರಣಿ ಹೊಳೆಮಠವು ಅಪಾರ ಸಂಖ್ಯೆಯಲ್ಲಿ ಭಕ್ತರನ್ನು ಹೊಂದಿ ಶ್ರದ್ಧಾ ಭಕ್ತಿ ಕೇಂದ್ರವಾಗಿದೆ. ಇಂತಹ ಮಠದಲ್ಲಿ ಬರುವ ಭಕ್ತರೆಲ್ಲರೂ ಗುರುವಿನ ಮಾರ್ಗದಲ್ಲಿ ಮುನ್ನಡೆಯಬೇಕು. ಅಂದಾಗ ನಿಮ್ಮ ಜೀವನ ಪಾವನವಾಗುವುದು ಎಂದರು.
ಹಿಪ್ಪರಗಿಯ ಶ್ರೀ ಸಿದ್ದಾರೂಢ ಶರಣರು ಮಾತನಾಡಿ, ಶ್ರೀ ಸಿದ್ದಾರೂಢರ ಹಾಗೂ ಮುಪ್ಪಿನಾರ್ಯರು ಸೇರಿ ಸಾಧು ಸಂತರ ಶರಣರ ಜೀವನ ಚರಿತ್ರೆಯನ್ನು ತಿಳಿಯಬೇಕು. ಜೊತೆಗೆ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅಂದಾಗ ನಿಮ್ಮ ಜೀವನ ಪಾವನವಾಗಲು ಸಾಧ್ಯ. ಸಿದ್ಧಾರೂಢರ ಹಲವಾರು ಪವಾಡಗಳು ಇವೆ. ಅವುಗಳನ್ನು ಅವರ ಪುರಾಣ ಕಥೆಗಳಲ್ಲಿ ಓದಿ ತಿಳಿದುಕೊಳ್ಳಬೇಕು. ಗುರುವಿನ ಮಾರ್ಗದಲ್ಲಿ ಮುನ್ನಡೆದು ಸನ್ಮಾರ್ಗದ ಬದುಕು ಕಟ್ಟಿಕೊಳ್ಳಬೇಕು. ಅಹಂಕಾರವನ್ನು ತೊರೆದು ಭಕ್ತಿಯ ಮಾರ್ಗದಲ್ಲಿ ಸಾಗಬೇಕು. ಅಂದಾಗ ನಿಮ್ಮ ಜೀವನ ಸುಂದರವಾಗಿರಲು ಸಾಧ್ಯ ಎಂದರು.
ನೂತನ ಪಟ್ಟಾಧಿಪತಿ ಶ್ರೀ ಸಿದ್ದಾರೂಢ ಭಾರತಿ ಸ್ವಾಮೀಜಿ ಸಮಾರಂಭ ಉದ್ಘಾಟಿಸಿದರು.
ಕುಳ್ಳೂರಿನ ಬಸವಾನಂದ ಭಾರತಿ ಸ್ವಾಮೀಜಿ, ಜೋಡಕುರಳಿಯ ಚಿದನಾನಂದ ಭಾರತಿ ಸ್ವಾಮೀಜಿ, ಗದಗಿನ ಅಸುಂಡಿ ನೀಲಮ್ಮ ತಾಯಿಯವರು, ತೆಲಗಿಯ ಪೂರ್ಣಾನಂದ ಸ್ವಾಮೀಜಿ ನೇತೃತ್ವ ವಹಿಸಿದ್ದರು.
ಪ್ರಮುಖರಾದ ಬಾಬಣ್ಣ ಶೆಟ್ಟರ, ಮಂಜುನಾಥ ಓಲೇಕಾರ, ಸಿದ್ದು ಚಿಕ್ಕಬಿದರಿ, ಚಂದ್ರಣ್ಣ ಬೇಡರ, ರಾಜಣ್ಣ ಮೋಟಗಿ, ಬಸವರಾಜ ಪಾಟೀಲ, ಬಸವರಾಜ ಪಟ್ಟಣಶೆಟ್ಟಿ, ಉಮೇಶ ಗುಂಡಗಟ್ಟಿ, ಶಿವಪ್ಪ ಗುರಿಕಾರ ಮತ್ತಿತರರು ಉಪಸ್ಥಿತರಿದ್ದರು.