

ನವದೆಹಲಿ: ದೆಹಲಿಯಲ್ಲಿನ ಕಳಪೆ ವಾಯು ಮಾಲಿನ್ಯವನ್ನು ಎದುರಿಸಲು ಮೋಡ ಬಿತ್ತನೆಯ ಮೂಲಕ ಕೃತಕ ಮಳೆ ಸುರಿಸಲು ರಾಜ್ಯ ಸರ್ಕಾರ ಸಿದ್ಧತೆ ನಡೆಸುತ್ತಿದೆ ಎಂದು ದೆಹಲಿ ಸಿಎಂ ರೇಖಾ ಗುಪ್ತಾ (CM Rekha Gupta) ಗುರುವಾರ(ಅ. 23) ಮಾಹಿತಿ ನೀಡಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ಮೋಡ ಬಿತ್ತನೆಯ ಮೂಲಕ ದೆಹಲಿಯಲ್ಲಿ ಕೃತಕ ಮಳೆಯನ್ನು ಸುರಿಸಲು ಇದೇ ಮೊದಲ ಬಾರಿಗೆ ಸಿದ್ಧತೆಗಳು ನಡೆದಿದ್ದು, ಪೂರ್ಣಗೊಂಡಿವೆ. ಇಂದು ತಜ್ಞರು ಬುರಾರಿ ಪ್ರದೇಶದಲ್ಲಿ ಮೋಡ ಬಿತ್ತನೆಯನ್ನು ಯಶಸ್ವಿಯಾಗಿ ಪರೀಕ್ಷಿಸಿದ್ದಾರೆ. ಅಕ್ಟೋಬರ್ 28ರಿಂದ 30ರವರೆಗೆ ಅನುಕೂಲಕರ ಹವಾಮಾನ ಪರಿಸ್ಥಿತಿ ಇರುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅ. 29ರಂದು ನಗರದಲ್ಲಿ ಮೊದಲ ಕೃತಕ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಈ ಕ್ರಮವು ತಾಂತ್ರಿಕ ದೃಷ್ಟಿಕೋನದಿಂದ ಐತಿಹಾಸಿಕ ಮಾತ್ರವಲ್ಲದೆ ದೆಹಲಿಯಲ್ಲಿ ಮಾಲಿನ್ಯವನ್ನು ಎದುರಿಸಲು ವೈಜ್ಞಾನಿಕ ವಿಧಾನವು ಆಗಿದೆ. ರಾಜಧಾನಿಯ ಗಾಳಿಯನ್ನು ಶುದ್ಧ ಮತ್ತು ಪರಿಸರವನ್ನು ಸಮತೋಲನಗೊಳಿಸುವುದು ಸರ್ಕಾರದ ಉದ್ದೇಶವಾಗಿದೆ. ನಮ್ಮ ಸಂಪುಟ ಸಹೋದ್ಯೋಗಿ ಮಂಜಿಂದರ್ ಸಿಂಗ್ ಸಿರ್ಸಾ ಮತ್ತು ಈ ಪ್ರಯತ್ನವನ್ನು ಯಶಸ್ವಿಗೊಳಿಸುವಲ್ಲಿ ಭಾಗಿಯಾಗಿರುವ ಎಲ್ಲಾ ಅಧಿಕಾರಿಗಳಿಗೆ ಶುಭಾಶಯಗಳು ಎಂದು ಪೋಸ್ಟ್ ಮಾಡಿದ್ದಾರೆ.
ದೆಹಲಿಯಲ್ಲಿ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಕಾರ, ನಗರದ 24 ಗಂಟೆಗಳ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕ ಗುರುವಾರ 305 ರಷ್ಟಿದ್ದರೆ, ಆನಂದ್ ವಿಹಾರ್ ತೀವ್ರ 410 ಅನ್ನು ದಾಖಲಿಸಿದೆ. (ಏಜೆನ್ಸೀಸ್)