

K Rammohan Naidu: ಜೂ. 12ರಂದು ಅಹಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ಅಪಘಾತದ ಬಗ್ಗೆ ವಿಮಾನ ಅಪಘಾತ ತನಿಖಾ ಬ್ಯೂರೋ (ಎಎಐಬಿ) ಅತ್ಯಂತ ಪಾರದರ್ಶಕ ತನಿಖೆ ನಡೆಸುತ್ತಿದೆ. ಯಾವುದೇ ಹಸ್ತಕ್ಷೇಪ ಇಲ್ಲ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕೆ. ರಾಮಮೋಹನ್ ನಾಯ್ಡು ಹೇಳಿದ್ದಾರೆ.
ಎಎಐಬಿ ನೀಡಿದ ಪ್ರಾಥಮಿಕ ವರದಿಯ ಬಗ್ಗೆ ಹಲವಾರು ಟೀಕೆಗಳು ವ್ಯಕ್ತವಾದ ಹಿನ್ನೆಲೆ ಇಂದು ಮಾತನಾಡಿರುವ ಅವರು, AAIB ವಿಮಾನ ಅಪಘಾತಗಳಿಗೆ ಸಂಬಂಧಿಸಿದ ಕಡ್ಡಾಯ ಪ್ರಾಧಿಕಾರವಾಗಿದ್ದು, ಯಾರ ಪ್ರಭಾವಕ್ಕೂ ಮಣಿಯದೆ ಸತ್ಯಗಳನ್ನು ಪರಿಗಣಿಸಿ ಅತ್ಯಂತ ಪಾರದರ್ಶಕ ಮತ್ತು ಸ್ವತಂತ್ರ ರೀತಿಯಲ್ಲಿ ತನಿಖೆ ನಡೆಸುತ್ತದೆ. ಅಂತಿಮ ವರದಿ ಹೊರಬರುವವರೆಗೆ ಜನರು ತಾಳ್ಮೆಯಿಂದಿರಿ ಎಂದು ತಿಳಿಸಿದ್ದಾರೆ.
ಜೂನ್ 12 ರಂದು ಅಹಮದಾಬಾದ್‌ನಿಂದ ಲಂಡನ್‌ಗೆ ಹೋಗುತ್ತಿದ್ದ ಏರ್ ಇಂಡಿಯಾ ವಿಮಾನವು ಕೆಲವೇ ಕ್ಷಣಗಳಲ್ಲಿ ಪತನಗೊಂಡಿತು. ವಿಮಾನವು ಹಾಸ್ಟೆಲ್ ಕಟ್ಟಡಕ್ಕೆ ಅಪ್ಪಳಿಸಿದಾಗ ಅದರಲ್ಲಿದ್ದ ಎಲ್ಲಾ 242 ಜನರು ಮತ್ತು 19 ಹಾಸ್ಟೆಲ್ ವಿದ್ಯಾರ್ಥಿಗಳು ಸಾವನ್ನಪ್ಪಿದ್ದರು. (ಏಜೆನ್ಸೀಸ್)